
ನವದೆಹಲಿ, ಅಕ್ಟೋಬರ್ 7: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು 25 ಮೂಲಾಂಕಗಳಷ್ಟು ಹೆಚ್ಚಿಸಿದೆ. ಇದರಿಂದ ಗೃಹ ಸಾಲಗಳಿಗೆ ಬಡ್ಡಿದರ ಹೆಚ್ಚುವ ಸಾಧ್ಯತೆ ಇದೆ. ಹಾಗೆಯೇ, ಬ್ಯಾಂಕುಗಳು ಠೇವಣಿ ದರಗಳನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಎಷ್ಟು ಪ್ರಮಾಣದಲ್ಲಿ ಎಫ್ಡಿ ದರಗಳು ಏರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಬ್ಯಾಂಕುಗಳ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ.
ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳಲ್ಲಿ ಬಡ್ಡಿದರ ಪೂರ್ವನಿಶ್ಚಿತವಾಗಿರುತ್ತದೆ. ಮಧ್ಯದಲ್ಲಿ ಬಡ್ಡಿದರ ಪರಿಷ್ಕರಣೆ ಆಗುವುದಿಲ್ಲ. ಹೀಗಾಗಿ, ಈಗಾಗಲೇ ಠೇವಣಿ ಇಟ್ಟಿರುವವರಿಗೆ ನಿಗದಿತ ಬಡ್ಡಿದರವೇ ಮುಂದುವರಿಯುತ್ತದೆ. ಠೇವಣಿ ದರ ಪರಿಷ್ಕರಣೆ ಬಳಿಕ ಬ್ಯಾಂಕುಗಳಲ್ಲಿ ಇಡುವ ಡೆಪಾಸಿಟ್ಗಳಿಗೆ ಹೊಸ ಬಡ್ಡಿದರ ನಿಗದಿ ಆಗಬಹುದು. ಅಥವಾ ಹಾಲಿ ಇರುವ ಎಫ್ಡಿ ಮೆಚ್ಯೂರ್ ಆಗಿ ಅದನ್ನು ರಿನಿವಲ್ ಮಾಡುವಾಗ ಹೊಸ ದರ ಅನ್ವಯ ಆಗಬಹುದು.
ಇದನ್ನೂ ಓದಿ: ಆರ್ಬಿಐ ರೆಪೋ ದರ ಹೆಚ್ಚಳ; ಸಾಲಗಳ ಇಎಂಐನಲ್ಲಿ ಎಷ್ಟು ಹೆಚ್ಚಳವಾಗಬಹುದು ಇತ್ಯಾದಿ ವಿವರ ಇಲ್ಲಿದೆ
ಸಹಕಾರಿ ಬ್ಯಾಂಕುಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಎಫ್ಡಿ ದರಗಳು ಹೆಚ್ಚಿರುತ್ತವೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಶಿವಾಲಿಕ್ ಎಸ್ಎಂಬಿ ಇತ್ಯಾದಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ದರ ಶೇ. 8ರ ಆಸುಪಾಸಿನಲ್ಲಿದೆ. ಕೆಲ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಕೆಲ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ನೀಡುವುದುಂಟು.
ಈ ಕಿರು ಬ್ಯಾಂಕುಗಳಿಗೆ ಹೋಲಿಸಿದರೆ ಪ್ರಮುಖ ಖಾಸಗಿ ಬ್ಯಾಂಕುಗಳು ಹಾಗೂ ಪಿಎಸ್ಯು ಬ್ಯಾಂಕುಗಳಲ್ಲಿ ಠೇವಣಿ ದರ ಕಡಿಮೆ ಇರುತ್ತದೆ. ಅದರಲ್ಲೂ ಎಸ್ಬಿಐ ಇತ್ಯಾದಿ ಪಿಎಸ್ಯು ಬ್ಯಾಂಕುಗಳಲ್ಲಿ ಬಹಳ ಕಡಿಮೆ ಎಫ್ಡಿ ದರಗಳಿರುತ್ತವೆ. ಇದಕ್ಕೆ ಕಾರಣ, ಸರ್ಕಾರಿ ಬ್ಯಾಂಕುಗಳಲ್ಲಿ ಅಪಾರ ಮೊತ್ತದ ಠೇವಣಿಗಳು ಹರಿದುಬರುತ್ತವೆ. ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಸಣ್ಣ ಬ್ಯಾಂಕುಗಳು ಆಕರ್ಷಕ ಬಡ್ಡಿ ಆಫರ್ ಮಾಡಿ ಠೇವಣಿಗಳನ್ನು ಆಕರ್ಷಿಸುವುದು ಅನಿವಾರ್ಯ. ಇಲ್ಲದಿದ್ದರೆ ಅವುಗಳು ಜೀವಂತ ಉಳಿಯುವುದು ಕಷ್ಟ.
ಇದನ್ನೂ ಓದಿ: ಆರ್ಬಿಐ ಎಂಪಿಸಿ ಸಭೆ: ರೆಪೋ ದರ ಶೇ. 5.50 ಗೆ ಏರಿಕೆ
25 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿದರೆ ಅದರಿಂದ ಸಿಗುವ ರಿಟರ್ನ್ಸ್ ಗಮನಾರ್ಹವಾಗಿ ಹೆಚ್ಚುತ್ತದೆ. ಉದಾಹರಣೆಗೆ, ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಸಾಮಾನ್ಯ ಗ್ರಾಹಕನ 4 ವರ್ಷದ ಡೆಪಾಸಿಟ್ಗೆ ಶೇ. 6.5 ವಾರ್ಷಿಕ ಬಡ್ಡಿದರ ಇದೆ. ನೀವು 5 ಲಕ್ಷ ರೂ ಅನ್ನು 4 ವರ್ಷಕ್ಕೆ ಡೆಪಾಸಿಟ್ ಇಟ್ಟರೆ, ಮೆಚ್ಯೂರಿಟಿ ವೇಳೆ, ನಿಮಗೆ 6,47,111 ರೂ ಸಿಗುತ್ತದೆ.
ಈಗ ಬಡ್ಡಿದರ ಶೇ. 6.75ಕ್ಕೆ ಏರಿದಲ್ಲಿ ನಿಮ್ಮ 5 ಲಕ್ಷ ರೂ ಠೇವಣಿಯು 4 ವರ್ಷದಲ್ಲಿ 6,317 ರೂ ಹೆಚ್ಚುವರಿ ಲಾಭ ಪಡೆಯುತ್ತದೆ. ಮೆಚ್ಯೂರಿಟಿಯಲ್ಲಿ ನಿಮಗೆ ಸಿಗುವ ರಿಟರ್ಸ್ 6,53,428 ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ