Bharat Bond ETF: ಭಾರತ್​ ಬಾಂಡ್​ ಇಟಿಎಫ್​ನ ಮೂರನೇ ಕಂತು ಇಂದು ಬಿಡುಗಡೆ, ಡಿಸೆಂಬರ್​ 9ಕ್ಕೆ ಸಬ್​ಸ್ಕ್ರಿಪ್ಷನ್ ಕೊನೆ

| Updated By: Srinivas Mata

Updated on: Dec 03, 2021 | 8:39 PM

ಭಾರತ್ ಬಾಂಡ್ ಇಟಿಎಫ್​ ಇಂದಿನಿಂದ (ಡಿಸೆಂಬರ್ 3, 2021) ಸಬ್​ಸ್ಕ್ರಿಪ್ಷನ್​ಗೆ ಬಿಡುಗಡೆ ಆಗಿದೆ. ಡಿಸೆಂಬರ್​ 9ರಂದು ಇದು ಕೊನೆ ಆಗಲಿದೆ. ಆ ಬಗ್ಗೆ ವಿವರ ಇಲ್ಲಿದೆ.

Bharat Bond ETF: ಭಾರತ್​ ಬಾಂಡ್​ ಇಟಿಎಫ್​ನ ಮೂರನೇ ಕಂತು ಇಂದು ಬಿಡುಗಡೆ, ಡಿಸೆಂಬರ್​ 9ಕ್ಕೆ ಸಬ್​ಸ್ಕ್ರಿಪ್ಷನ್ ಕೊನೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರ್ಕಾರವು ಭಾರತ್ ಬಾಂಡ್ ಇಟಿಎಫ್‌ನ ಮೂರನೇ ಕಂತನ್ನು ಇಂದು (ಡಿಸೆಂಬರ್ 3, 2021) ಪ್ರಾರಂಭಿಸಿದೆ ಮತ್ತು ಹೊಸ ಫಂಡ್ ಆಫರ್ ಡಿಸೆಂಬರ್ 9, 2021ರಂದು ಕೊನೆಗೊಳ್ಳಲಿದೆ. ಎನ್‌ಎಫ್‌ಒ ಇದರೊಂದಿಗೆ 1,000 ಕೋಟಿ ರೂಪಾಯಿಗಳಷ್ಟು ಓಪನ್ ಗ್ರೀನ್‌ಶೂ ಆಯ್ಕೆಯೊಂದಿಗೆ ಮೂಲ ಇಶ್ಯೂ ಗಾತ್ರವನ್ನು ಹೊಂದಿರುತ್ತದೆ. ಭಾರತ್ ಬಾಂಡ್ ಇಟಿಎಫ್ ಏಪ್ರಿಲ್ 2032 ಎಂದು ಉಲ್ಲೇಖಿಸಲಾದ ಹೊಸ ಇಟಿಎಫ್, ಏಪ್ರಿಲ್ 2032ರಲ್ಲಿ ಮೆಚ್ಯೂರ್​ ಆಗುವ 10 ವರ್ಷಗಳ ಪ್ರಾಡಕ್ಟ್ ಆಗಿದೆ. ಭಾರತ್ ಬಾಂಡ್ ಇಟಿಎಫ್ ಸಾರ್ವಜನಿಕ ವಲಯದ ಕಂಪೆನಿಗಳ ಡೆಟ್​ನಲ್ಲಿ ಹೂಡಿಕೆ ಮಾಡುವ ಎಕ್ಸ್​ಚೇಂಜ್-ಟ್ರೇಡೆಡ್ ಫಂಡ್ ಆಗಿದೆ. ಇಟಿಎಫ್ ಸದ್ಯಕ್ಕೆ ಸಾರ್ವಜನಿಕ ವಲಯದ ಕಂಪೆನಿಗಳ ‘ಎಎಎ’ ದರದ ಬಾಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತದೆ.

“ಈ ಸೂಚ್ಯಂಕವು AAA-ರೇಟೆಡ್ ಸಾರ್ವಜನಿಕ ವಲಯದ ಉದ್ಯಮಗಳನ್ನು ಒಳಗೊಂಡಿದ್ದು, ಶೇ 6.87ರಷ್ಟು ಸೂಚಕ ಫಲಿತ ಸಹ ಇದೆ. ಮೆಚ್ಯೂರಿಟಿ ದಿನಾಂಕ ಏಪ್ರಿಲ್ 15, 2032 ಮತ್ತು ಮಾರ್ಪಡಿಸಿದ ಅವಧಿ 6.74 ವರ್ಷಗಳಾಗಿವೆ. ಬಾಂಡ್ ಇಟಿಎಫ್ ಡೆಟ್ ಮ್ಯೂಚುವಲ್ ಫಂಡ್‌ಗಳ (ಇಂಡೆಕ್ಸೇಷನ್​ನೊಂದಿಗೆ ಶೇ 20ರಷ್ಟು) ರೀತಿ ಇಂಡೆಕ್ಸೇಶನ್ ರೂಪದಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯುತ್ತದೆ. ನಿಜವಾದ ತೆರಿಗೆ ಸೂಚ್ಯಂಕವು ಭವಿಷ್ಯದ ಹಣದುಬ್ಬರ ಸೂಚ್ಯಂಕವನ್ನು ಅವಲಂಬಿಸಿದೆ. ತೆರಿಗೆಯ ನಂತರದ ಫಲಿತ ಶೇ 6.4 ಆಗಿರಬಹುದು,” ಎಂದು ವಿಶ್ಲೇಷಣಾ ಸಂಸ್ಥೆಗಳು ಅಭಿಪ್ರಾಯ ಪಡುತ್ತವೆ.

ಭಾರತ್ ಬಾಂಡ್ ಇಟಿಎಫ್‌ಗಳು ಸರ್ಕಾರಿ ಸ್ವಾಮ್ಯದ ಎಎಎ ರೇಟಿಂಗ್​ನ ಸಾರ್ವಜನಿಕ ವಲಯದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಬಂಡವಾಳದ ಹೆಚ್ಚಿನ ಸುರಕ್ಷತೆಯೊಂದಿಗೆ ಹೆಚ್ಚಿನ ಪ್ರಮಾಣದ ಆದಾಯವನ್ನು ಒದಗಿಸುತ್ತವೆ. ಪ್ರಸ್ತುತ ಚಾಲ್ತಿಯಲ್ಲಿರುವ ಕಡಿಮೆ ಬಡ್ಡಿದರ ಮುಂದುವರಿಯುವ ಸಾಧ್ಯತೆಯಿದೆ. ಸುರಕ್ಷಿತ ಮತ್ತು ಊಹಿಸಬಹುದಾದ ಆದಾಯವನ್ನು ಹಾಗೇ ಉಳಿಸಿಕೊಳ್ಳಲು ಬಯಸುವ ಹೂಡಿಕೆದಾರಿಗಾಗಿ ಕೆಲವು ಹಂಚಿಕೆ ಪರಿಗಣಿಸಬಹುದು. ಹೀಗೆ ಮಾಡುವುದರಿಂದ ಬಡ್ಡಿ ದರದ ಏರಿಳಿತದ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಲಾಗಿದೆ.

ಅಂದಹಾಗೆ ಭಾರತ್​ ಫಂಡ್​ ಇಟಿಎಫ್​ಗೆ ಚಂದಾದಾರರಾಗಲು ಶಿಫಾರಸು ಮಾಡುತ್ತಾ, ಐಸಿಐಸಿಐ ಸೆಕ್ಯುರಿಟೀಸ್ ಕಾರ್ಪೊರೇಟ್ ಬಾಂಡ್ ಫಂಡ್ (ಎಎಎ-ರೇಟೆಡ್ ಪೇಪರ್‌ಗಳಿಗೆ ಒಡ್ಡಿಕೊಳ್ಳುವುದು) ಸದ್ಯಕ್ಕೆ ಶೇ 5.0ಕ್ಕಿಂತ ಕಡಿಮೆ ಫಲಿತವನ್ನು (ವೆಚ್ಚಗಳ ನಿವ್ವಳ) ನೀಡುತ್ತಿದೆ ಎಂದು ಹೇಳಿದೆ. ಆದ್ದರಿಂದ ಭಾರತ್ ಬಾಂಡ್ ಇಟಿಎಫ್ ನೀಡುವ ಶೇ 2.0 ಹೆಚ್ಚಿನ ಇಳುವರಿಯು “ಬಡ್ಡಿ ದರಗಳಲ್ಲಿ ಯಾವುದೇ ಏರಿಕೆಯನ್ನು ಪರಿಗಣಿಸಿದ ನಂತರವೂ ಸದ್ಯದ ಪರಿಸರದಲ್ಲಿ ಅತ್ಯುತ್ತಮ ಹೂಡಿಕೆ ಅವಕಾಶವಾಗಿದೆ.”

ಎಡಲ್​ವೀಸ್ ಎಎಂಸಿಯು ಈ ಇಟಿಎಫ್ ಅನ್ನು ನಿರ್ವಹಿಸುತ್ತಿದೆ ಮತ್ತು ಫಂಡ್ ಹೌಸ್ ಈ ಇಟಿಎಫ್‌ಗಾಗಿ ರೀಟೇಲ್ ಹೂಡಿಕೆದಾರರಿಗೆ ಸಾಮಾನ್ಯ ಮ್ಯೂಚುವಲ್ ಫಂಡ್‌ನಂತೆ ಖರೀದಿಸಲು/ಮಾರಾಟ ಮಾಡಲು ಅನುಕೂಲವಾಗುವಂತೆ ‘ಫಂಡ್ ಆಫ್ ಫಂಡ್’ (ಎಫ್‌ಒಎಫ್) ಅನ್ನು ಸಹ ಪ್ರಾರಂಭಿಸಿದೆ. ರೀಟೇಲ್ ಹೂಡಿಕೆದಾರರಿಗೆ ಈ ಭಾರತ್ ಬಾಂಡ್ ಎಫ್‌ಒಎಫ್ ಅನುಕೂಲತೆ ಮತ್ತು ಲಿಕ್ವಿಡಿಟಿಯ ದೃಷ್ಟಿಯಿಂದ ಹೆಚ್ಚು ಸೂಕ್ತವಾಗಿದೆ ಎಂದು ಗಮನ ಸೆಳೆಯಲಾಗಿದೆ. ಭಾರತ್ ಬಾಂಡ್ ಇಟಿಎಫ್‌ನ ಎರಡನೇ ಕಂತನ್ನು 2020 ಜುಲೈನಲ್ಲಿ ಪ್ರಾರಂಭಿಸಲಾಯಿತು ಮತ್ತು 3 ಪಟ್ಟು ಹೆಚ್ಚು ಸಬ್‌ಸ್ಕ್ರೈಬ್ ಆಗಿದ್ದು, ಸುಮಾರು 11,000 ಕೋಟಿ ಸಂಗ್ರಹಿಸಲಾಗಿದೆ. ಇದು 2019 ಡಿಸೆಂಬರ್​ನಲ್ಲಿ ತನ್ನ ಚೊಚ್ಚಲ ಆಫರ್​ನಲ್ಲಿ ಸುಮಾರು 12,400 ಕೋಟಿ ರೂಪಾಯಿ ಸಂಗ್ರಹಿಸಿತ್ತು.

ಇದನ್ನೂ ಓದಿ: RBI Retail Direct Scheme: ಸರ್ಕಾರಿ ಸೆಕ್ಯೂರಿಟೀಸ್​ಗಳಲ್ಲಿ ಹೂಡಿಕೆ ಮಾಡುವುದು ಸಲೀಸು, ಆದರೆ ಖರೀದಿಸಬೇಕೆ?

Published On - 8:37 pm, Fri, 3 December 21