
ನವದೆಹಲಿ, ಡಿಸೆಂಬರ್ 3: ಸಹಕಾರಿ ತತ್ವದಲ್ಲಿ ರೂಪಿತವಾಗಿರುವ ಭಾರತ್ ಟ್ಯಾಕ್ಸಿ (Bharat Taxi) ಇದೀಗ ಭಾರತದ ರೈಡ್ ಹೇಲಿಂಗ್ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ಸೌರಾಷ್ಟ್ರ ಮತ್ತು ದೆಹಲಿಯಲ್ಲಿ ಇದರ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಓಲಾ, ಊಬರ್, ರಾಪಿಡೋ ಪ್ರಾಬಲ್ಯ ಇರುವ ಈ ಸೆಕ್ಟರ್ನಲ್ಲಿ ಭಾರತ್ ಟ್ಯಾಕ್ಸಿ ಅಡಿ ಊರುವ ಎಲ್ಲಾ ಸಲಕರಣೆ ಮತ್ತು ಸಿದ್ಧತೆ ಹೊಂದಿದೆ. ಇದು ಸಹಕಾರ ತತ್ವದಲ್ಲಿ ರೂಪಿತವಾಗಿರುವ ಪ್ಲಾಟ್ಫಾರ್ಮ್ ಆಗಿದೆ. ಇದರಲ್ಲಿ ಡ್ರೈವರ್ಗಳೇ ಮಾಲೀಕರು.
ಅಮೂಲ್, ನಬಾರ್ಡ್, ಇಫ್ಕೋ ಮೊದಲಾದ ಎಂಟು ಪ್ರಮುಖ ಸಂಘಟನೆಗಳಿಂದ ಬೆಂಬಲಿತವಾಗಿರುವ ಭಾರತ್ ಟ್ಯಾಕ್ಸಿ ಪ್ಲಾಟ್ಫಾರ್ಮ್ನಲ್ಲಿ ಆಟೊ, ಕ್ಯಾಬ್, ಬೈಕ್ ಟ್ಯಾಕ್ಸಿಗಳ ಸೇವೆ ಲಭ್ಯ ಇದೆ. ಈ ಪ್ಲಾಟ್ಫಾರ್ಮ್ಗೆ 51,000ಕ್ಕೂ ಅಧಿಕ ಡ್ರೈವರ್ಗಳು ನೊಂದಣಿ ಮಾಡಿಕೊಂಡಿದ್ದಾರೆ.
2025ರ ಜೂನ್ನಲ್ಲಿ ಆರಂಭವಾದ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಭಾರತ್ ಟ್ಯಾಕ್ಸಿ ಪೂರ್ಣ ಸಹಕಾರಿ ತತ್ವದಲ್ಲಿ ಆಪರೇಟ್ ಮಾಡುತ್ತದೆ. ನಮ್ಮ ಯಾತ್ರಿ ಪ್ಲಾಟ್ಫಾರ್ಮ್ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಕೂಡ ಝೀರೋ ಕಮಿಷನ್ ಮಾಡಲ್ ಅನುಸರಿಸುತ್ತದೆ. ಅಂದರೆ, ಒಂದು ರೈಡ್ನಲ್ಲಿ ಸಿಗುವ ಆದಾಯವೆಲ್ಲವೂ ಡ್ರೈವರ್ಗೆ ಹೋಗುತ್ತದೆ. ಪ್ಲಾಟ್ಫಾರ್ಮ್ಗೆ ಕಮಿಷನ್ ಕೊಡುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ
ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಗೆ ಬರುವ ಯಾವುದೇ ಲಾಭವನ್ನು ಡ್ರೈವರ್ಗಳಿಗೆ ಮರಳಿಸಲಾಗುತ್ತದೆ. ಇದರ ಆಡಳಿತ ಮಂಡಳಿಯಲ್ಲಿ ಚಾಲಕರನ್ನು ಪ್ರತಿನಿಧಿಸುವ ಇಬ್ಬರು ಇರುತ್ತಾರೆ. ಈ ಮೂಲಕ ಸಹಕಾರ್ ಸೆ ಸಮೃದ್ಧಿ ಎನ್ನುವ ಸರ್ಕಾರದ ನಂಬಿಕೆಯ ತಳಹದಿಯಲ್ಲಿ ಭಾರತ್ ಟ್ಯಾಕ್ಸಿ ಚಲಿಸುತ್ತಿದೆ.
ಜಾಗತಿಕವಾಗಿ ಕೆಲವೆಡೆ ಡ್ರೈವರ್ಗಳಿಂದಲೇ ಸಹಕಾರ ತತ್ವದಲ್ಲಿ ನಡೆಸುವ ಟ್ಯಾಕ್ಸಿ ಸೇವೆ ಇದೆ. ಅಮೆರಿಕದ ನ್ಯೂಯಾರ್ಕ್ನಲ್ಲಿ ಇಂಥದ್ದೊಂದು ಕೋಆಪರೇಟಿವ್ ಸರ್ವಿಸ್ ಇದೆ. ಅದರಲ್ಲಿ 4,000 ಡ್ರೈವರ್ಗಳು ಸದಸ್ಯರಾಗಿದ್ದಾರೆ. ಆದರೆ, ಭಾರತ್ ಟ್ಯಾಕ್ಸಿ ಕೇವಲ 10 ದಿನದಲ್ಲೇ 51,000 ಡ್ರೈವರ್ಗಳ ನೊಂದಣಿ ಪಡೆದಿದೆ. ಈ ಮೂಲಕ ಭಾರತ್ ಟ್ಯಾಕ್ಸಿಯು ವಿಶ್ವದ ಅತಿದೊಡ್ಡ ಸಹಕಾರಿ ಟ್ಯಾಕ್ಸಿ ಪ್ಲಾಟ್ಫಾರ್ಮ್ ಎನಿಸಿದೆ.
ಇದನ್ನೂ ಓದಿ: ರಾಕೆಟ್ ಸ್ಲೆಡ್ ಮೂಲಕ ಏರ್ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಪರೀಕ್ಷಿಸುವ ಸಾಮರ್ಥ್ಯ ಸಾಬೀತುಪಡಿಸಿದ ಭಾರತ
ಭಾರತ್ ಟ್ಯಾಕ್ಸಿಯ ಚಾಲಕರನ್ನು ಸಾರಥಿಗಳೆಂದು ಕರೆಯಲಾಗುತ್ತದೆ. ಇದರೊಂದಿಗೆ ಚಾಲಕರಿಗೆ ವಿಶೇಷ ಸ್ಥಾನಮಾನ ಸಿಗಲಿದೆ. ಭಾರತದ ಈ ಮೊದಲ ಸಹಕಾರಿ ಟ್ಯಾಕ್ಸಿ ನೆಟ್ವರ್ಕ್ನಲ್ಲಿ ಈ ಸಾರಥಿಗಳು ಸಹ-ಮಾಲೀಕರು ಮತ್ತು ಷೇರುದಾರರಾಗಿರುತ್ತಾರೆ.
ಭಾರತ್ ಟ್ಯಾಕ್ಸಿಯ ಬೀಟಾ ವರ್ಷನ್ ಆ್ಯಪ್ಗಳು ಬಿಡುಗಡೆಯಾಗಿವೆ. ದೆಹಲಿ ಮತ್ತು ಗುಜರಾತ್ನ ಸೌರಾಷ್ಟ್ರದಲ್ಲಿ ಜನರು ಈ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಬಳಸಬಹುದು. ಕುಂದು ಕೊರತೆಗಳಿದ್ದರೆ ತಿಳಿಸಬಹುದು. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇನ್ನಷ್ಟು ನಗರಗಳಲ್ಲಿ ಈ ಟ್ಯಾಕ್ಸಿ ಸೇವೆ ವಿಸ್ತರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ