ನವದೆಹಲಿ: ಜೊಮಾಟೊ ಮಾಲಿಕತ್ವದ ಇ–ಕಾಮರ್ಸ್ ಹೋಮ್ ಡೆಲಿವರಿ ಪ್ಲಾಟ್ಫಾರ್ಮ್ ಬ್ಲಿಂಕಿಟ್ಗೆ (Blinkit) ಈಗ ಡೆಲಿವರಿ ಬಾಯ್ಗಳ ಸ್ಟ್ರೈಕ್ನ ಬಿಸಿ ತಾಕಿದೆ. ಡೆಲಿವರಿ ಶುಲ್ಕ ಕಡಿಮೆಗೊಳಿಸಿದ ಕಾರಣಕ್ಕೆ ಡೆಲಿವರಿ ಬಾಯ್ಸ್ (Blinkit delivery boys) ಕಳೆದ ಮೂರ್ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮವಾಗಿ ದೆಹಲಿ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅದರ ಆನ್ಲೈನ್ ಡೆಲಿವರಿ ಸೇವೆ ಬಹುತೇಕ ಸ್ಥಗಿತಗೊಂಡಿದೆ. ದೆಹಲಿ, ಗುರುಗ್ರಾಮ್, ಫರೀದಾಬಾದ್, ನೋಯ್ಡಾ, ಘಾಜಿಯಾಬಾದ್ ಪ್ರದೇಶಗಳಲ್ಲಿ ಬ್ಲಿಂಕಿಟ್ನ 100ಕ್ಕೂ ಹೆಚ್ಚು ಡಾರ್ಕ್ ಸ್ಟೋರ್ಗಳ (Dark Stores) ಆನ್ಲೈನ್ ಸೇವೆ ಬಂದ್ ಆಗಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿ ಬ್ಲಿಂಕಿಟ್ ಡೆಲಿವರಿ ಸೇವೆಯಲ್ಲಿ ಭಾರೀ ವ್ಯತ್ಯಯವಾಗಿದೆ. ದೇಶಾದ್ಯಂತ ಬೆಂಗಳೂರು ಸೇರಿದಂತೆ 20 ನಗರಗಳಲ್ಲಿ ಬ್ಲಿಂಕಿಟ್ ಸುಮಾರು 400 ಡಾರ್ಕ್ ಸ್ಟೋರ್ಗಳನ್ನು ಹೊಂದಿದೆ. ಇದರಲ್ಲಿ 200 ಸ್ಟೋರ್ಗಳು ಗುರುಗ್ರಾಮ್, ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್, ಫರೀದಾಬಾದ್ನಲ್ಲೇ ಇವೆ. ಈಗ ಅರ್ಧದಷ್ಟು ಸ್ಟೋರ್ಗಳು ಡೆಲಿವರಿ ಬಾಯ್ಗಳಿಲ್ಲದೇ ಆನ್ಲೈನ್ ಡೆಲಿವರಿ ಸೇವೆಯನ್ನು ನಿಲ್ಲಿಸಿವೆ.
ಬ್ಲಿಂಕಿಟ್ ಬಹಳ ಶೀಘ್ರ ಸಮಯದಲ್ಲಿ ಡೆಲಿವರಿ ಸೇವೆಗೆ ಹೆಸರಾದ ಇ–ಕಾಮರ್ಸ್ ಕಂಪನಿ. 10 ನಿಮಿಷದಲ್ಲಿ ಡೆಲಿವರಿ ಒದಗಿಸುತ್ತದೆ. ಜೊಮಾಟೊ, ಸ್ವಿಗ್ಗಿ, ಡುಂಜೋ, ಝೆಪ್ಟೋ ಇತ್ಯಾದಿ ಸಂಸ್ಥೆಗಳಿಗಿಂತ ಬ್ಲಿಂಕಿಟ್ನಲ್ಲಿ ಡೆಲಿವರಿ ಹುಡುಗರಿಗೆ ಹೆಚ್ಚು ಹಣ ಸಿಗುತ್ತದೆ. ವರ್ಷದ ಹಿಂದೆ ಪ್ರತೀ ಡೆಲಿವರಿಗೆ ಶುಲ್ಕವಾಗಿ ಹುಡುಗರು 50 ರೂ ಪಡೆಯುತ್ತಿದ್ದರು. ನಂತರ ಇದು 25 ರುಪಾಯಿಗೆ ಇಳಿಕೆಯಾಯಿತು. ಈಗ ಬ್ಲಿಂಕಿಟ್ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತಂದಿದೆ. ಅದರಲ್ಲಿ ಡೆಲಿವರಿ ಮಾಡಲಾಗುವ ಸ್ಥಳದ ದೂರ ಎಷ್ಟಿದೆ ಎನ್ನುವುದರ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ. ಹಿಂದೆ 50 ರೂ ಡೆಲವರಿ ಫೀಸ್ ಪಡೆಯುತ್ತಿದ್ದ ಹುಡುಗರು ಈ ಹೊಸ ಶುಲ್ಕ ವ್ಯವಸ್ಥೆಯಲ್ಲಿ ಕೇವಲ 15 ರೂ ಪಡೆಯಲಿದ್ದಾರೆ. ಇದು ದೆಹಲಿ ಸುತ್ತಮುತ್ತಲಿನ ಬಹುತೇಕ ಎಲ್ಲಾ ಡೆಲಿವರಿ ಬಾಯ್ಗಳನ್ನು ರೊಚ್ಚಿಗೆಬ್ಬಿಸಿದೆ.
ಹೊಸ ಶುಲ್ಕ ವ್ಯವಸ್ಥೆ ನಿಲ್ಲಿಸಿ, ಹಳೆಯದನ್ನೇ ಮುಂದುವರಿಸುವವರೆಗೂ ತಾವು ಮತ್ತೆ ಡೆಲಿವರಿ ಸೇವೆಗೆ ಬರುವುದಿಲ್ಲ ಎಂದು ಈ ಹುಡುಗರು ಕೆಲಸ ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ಸ್ ಇಲ್ಲದ ಡಾರ್ಕ್ ಸ್ಟೋರ್ಗಳು ಆನ್ಲೈನ್ ಸೇವೆ ನಿಲ್ಲಿಸಿ ಆಫ್ಲೈನ್ ಮಾರಾಟಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇದೆ.
ಬ್ಲಿಂಕಿಟ್ನಲ್ಲಿ ತನ್ನ ಒಂದು ದಿನದ ಆದಾಯ ಎಷ್ಟು, ಖರ್ಚು ಎಷ್ಟು, ಹೊಸ ಶುಲ್ಕ ವ್ಯವಸ್ಥೆಯಲ್ಲಿ ತನಗೆ ನಷ್ಟ ಎಷ್ಟು ಎಂಬುದನ್ನು ಡೆಲಿವರಿ ಬಾಯ್ವೊಬ್ಬ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದು ಹೀಗೆ:
‘ನಾನು ದಿನಕ್ಕೆ 13-14 ಗಂಟೆ ಕೆಲಸ ಮಾಡುತ್ತೇವೆ. ಈ ವೇಳೆ 30-40 ಆರ್ಡರ್ಗಳನ್ನು ಪಡೆಯುತ್ತೇನೆ. ಹಳೆಯ ಶುಲ್ಕ ವ್ಯವಸ್ಥೆಯಲ್ಲಿ ನನಗೆ ಇದರಿಂದ 1,500-1,600 ರೂ ಸಿಗುತ್ತಿತ್ತು. ಇಂಧನ ವೆಚ್ಚ 300 ರೂ, ಊಟದ ಖರ್ಚು 100-150 ರೂ ಆಗುತ್ತದೆ. ಕ್ಯಾಷ್ ಆನ್ ಡೆಲಿವರಿಯ ಆರ್ಡರ್ಗಳಿಂದಾಗಿ ನಮಗೆ ಶೇ. 10ರಷ್ಟು ಹಣ ಪೋಲಾಗಿ ಹೋಗುತ್ತದೆ. ಅದೇ ಹೊಸ ಶುಲ್ಕ ವ್ಯವಸ್ಥೆಯಲ್ಲಿ ನಮ್ಮ ಗಳಿಕೆ 250-300 ರೂನಷ್ಟು ಕಡಿಮೆ ಆಗುತ್ತದೆ’ ಎಂದು 28 ವರ್ಷದ ಡೆಲಿವರಿ ಬಾಯ್ ಹೇಳುತ್ತಾರೆ.
ಇದನ್ನೂ ಓದಿ: CGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ
ಇಲ್ಲಿ ಕ್ಯಾಷ್ ಆನ್ ಡೆಲಿವರಿ ಆರ್ಡರ್ಗಳಿಗಾಗಿ ಒಬ್ಬ ಡೆಲಿವರಿ ಬಾಯ್ 500 ರೂಗಿಂತ ಹೆಚ್ಚು ನಗದನ್ನು ಇಟ್ಟುಕೊಳ್ಳುವಂತಿಲ್ಲ. ಕ್ಯಾಷ್ ಆನ್ ಡೆಲಿವರಿಯಿಂದ 500 ರೂ ಸಂಗ್ರಹವಾದ ಕೂಡಲೇ ಅದನ್ನು ಆ್ಯಪ್ ಮೂಲಕ ಬ್ಲಿಂಕಿಟ್ಗೆ ರವಾನೆ ಮಾಡಬೇಕು. ಬ್ಯಾಂಕ್ ಖಾತೆಯಲ್ಲಿ ಹಣ ಇದ್ದವರು ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಇಲ್ಲದಿದ್ದರೆ ಬ್ಯಾಂಕಿಗೆ ಹೋಗಿ ಅಲ್ಲಿ ಡೆಪಾಸಿಟ್ ಮಾಡಿ ಆ ಬಳಿಕ ಆನ್ಲೈನ್ ಟ್ರಾನ್ಸ್ಫರ್ ಮಾಡಬೇಕು. ಬ್ಯಾಂಕಿಗೆ ಹೋಗುವುದೆಂದರೆ ಬಹಳಷ್ಟು ಸಮಯ ವ್ಯಯವಾದಂತೆ. ಹೀಗಾಗಿ, ಡೆಲವರಿ ಹುಡುಗರು ಯಾವುದಾದರೂ ಅಂಗಡಿಗೆ ಹೋಗಿ ಅಲ್ಲಿ ಕ್ಯಾಷ್ ಕೊಟ್ಟು ಅವರಿಂದ ಆನ್ಲೈನ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಆ ಅಂಗಡಿಯವರು ಶೇ. 10ರಷ್ಟು ಶುಲ್ಕ ಚಾರ್ಜ್ ಮಾಡುತ್ತಾರಂತೆ. ಹೀಗಾಗಿ, ಈ ಡೆಲಿವರಿ ಹುಡುಗರಿಗೆ ಕ್ಯಾಷ್ ಆನ್ ಡೆಲಿವರಿ ಸೇವೆಗಳ ಆರ್ಡರ್ಗಳಿಂದ ಶೇ. 10ರಷ್ಟು ಹಣ ವ್ಯಯವಾಗುತ್ತದೆ ಎಂದು ಹೇಳಲಾಗಿದೆ.
ಬ್ಲಿಂಕಿಟ್ನಲ್ಲಿ ಕೆಲವೇ ನಿಮಿಷಗಳಲ್ಲಿ ಮನೆಗೆ ಸಾಮಾನುಗಳನ್ನು ತಲುಪಿಸಲು ವಿಶೇಷ ವ್ಯವಸ್ಥೆ ಇದೆ. ಜನಸಂದಣಿ ಪ್ರದೇಶಗಳಲ್ಲಿ ಬಹಳ ಹೆಚ್ಚು ಡಾರ್ಕ್ ಸ್ಟೋರ್ಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಡಾರ್ಕ್ ಸ್ಟೋರ್ಗೂ ನಿರ್ದಿಷ್ಟ ಡೆಲಿವರಿ ಹುಡುಗರನ್ನು ಜೋಡಿಸಲಾಗಿದೆ. ಇವುಗಳು 2-3 ಕಿಮೀ ದೂರದ ಸ್ಥಳಗಳಿಗೆ ಡೆಲಿವರಿ ಸೇವೆ ನೀಡುತ್ತವೆ. ಈ ಹುಡುಗರು ನಿರ್ದಿಷ್ಟ ಡಾರ್ಕ್ ಸ್ಟೋರ್ಗಾಗಿಯೇ ಕೆಲಸ ಮಾಡುತ್ತಾರೆ. ಪ್ರತೀ ಕ್ಷಣದಲ್ಲೂ ಒಂದು ಡಾರ್ಕ್ ಸ್ಟೋರ್ನಲ್ಲಿ ಸಾಕಷ್ಟು ಡೆಲಿವರಿ ಬಾಯ್ಸ್ ಇರುತ್ತಾರೆ. ಹೀಗಾಗಿ ತ್ವರಿತವಾಗಿ ಸರಕುಗಳನ್ನು ಡೆಲಿವರಿ ಮಾಡಲು ಸಾಧ್ಯವಾಗುತ್ತದೆ.
ಬ್ಲಿಂಕಿಟ್ ತನ್ನ ಆನ್ಲೈನ್ ಡೆಲಿವರಿ ಲಿಸ್ಟ್ನಲ್ಲಿ ಹೆಚ್ಚೆಚ್ಚು ವಸ್ತುಗಳನ್ನು ಸೇರಿಸಲು ಯೋಜಿಸಿದೆ. ಗ್ರಾಹಕರು ಹೆಚ್ಚೆಚ್ಚು ಬಾರಿ ಬ್ಲಿಂಕಿಟ್ನಿಂದ ಆನ್ಲೈನ್ ಆರ್ಡರ್ ಮಾಡುವ ಸಾಧ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದರಿಂದ ಡೆಲಿವರಿ ಹುಡುಗರಿಗೆ ಒಂದು ದಿನದಲ್ಲಿ ಹೆಚ್ಚು ಆರ್ಡರ್ಗಳಿ ಸಿಗುತ್ತವೆ. ಅವರ ಆದಾಯ ಹೆಚ್ಚಾಗುತ್ತದೆ ಎಂದು ಬ್ಲಿಂಕಿಟ್ನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
Published On - 10:58 am, Mon, 17 April 23