ನವದೆಹಲಿ, ಅಕ್ಟೋಬರ್ 3: ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ (Petrol and Diesel sales) ಕ್ರಮವಾಗಿ ಶೇ. 5.6 ಮತ್ತು ಶೇ. 2.5ರಷ್ಟು ಹೆಚ್ಚಿವೆ. ಇದಕ್ಕೆ ಹಲವು ಕಾರಣಗಳಿವೆಯಾದರೂ ಪ್ರಮುಖವಾಗಿ ಕಾರುಗಳ ಮಾರಾಟದಲ್ಲಿ (car sales) ಗಣನೀಯವಾಗಿ ಹೆಚ್ಚಿರುವುದು ಗಮನಾರ್ಹ ಎನಿಸಿದೆ. ಹಾಗೆಯೇ, ಆರ್ಥಿಕ ಚಟುವಟಿಕೆ (economic activity) ತೀವ್ರಗೊಂಡಿರುವುದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹೆಚ್ಚಲು ಕಾರಣವಾಗಿರಬಹುದು. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಡೀಸೆಲ್ ಬಳಕೆ ಶೇ. 3ರಷ್ಟು ಕಡಿಮೆ ಆಗಿದೆಯಾದರೂ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ. 2.5ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.
ಹಬ್ಬದ ಸೀಸನ್ ಶುರುವಾದ ಸೆಪ್ಟೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ ಆಗಿದೆ. ಅದರಲ್ಲೂ ಪ್ರಯಾಣಿಕ ವಾಹನಗಳಂತೂ ಬಿಸಿದೋಸೆಯಂತೆ ಸೇಲ್ ಆಗಿವೆ. ಸೆಪ್ಟೆಂಬರ್ 2023ರಲ್ಲಿ 3,63,000 ಪ್ಯಾಸಂಜರ್ ವಾಹನಗಳು ಮಾರಾಟ ಆಗಿವೆ. ಆಗಸ್ಟ್ ತಿಂಗಳಲ್ಲಿ 3,59,648 ವಾಹನಗಳು ಸೇಲ್ ಆಗಿದ್ದವು.
ಇದನ್ನೂ ಓದಿ: ಭಾರತದಲ್ಲಿ ಎಚ್ಪಿಯಿಂದ ಗೂಗಲ್ ಕ್ರೋಮ್ಬುಕ್ಗಳ ತಯಾರಿಕೆ; ಬಹಳ ಕಡಿಮೆಬೆಲೆಗೆ ಸಿಗಲಿವೆ ಲ್ಯಾಪ್ಟಾಪ್
ಪ್ಯಾಸಂಜರ್ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹಿಡಿತ ಅರ್ಧದಷ್ಟಿದೆ. ಆದರೆ, ಸೆಪ್ಟೆಂಬರ್ನಲ್ಲಿ ವಾಹನ ಮಾರಾಟದಲ್ಲಿ ಗಣನೀಯ ಹೆಚ್ಚಳ ಕಂಡಿರುವುದು ಟೊಯೊಟಾ, ಮಹೀಂದ್ರ, ಹೊಂಡಾ, ಎಂಜಿ ಮೋಟಾರ್ನ ಕಾರುಗಳು.
ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ಪ್ಯಾಂಜರ್ ವಾಹನಗಳ ಮಾರಾಟದಲ್ಲಿ ಮೊದಲ ಮೂರು ಸ್ಥಾನ ಉಳಿಸಿಕೊಂಡಿವೆ.
ವಾಹನ ಮಾರಾಟದಲ್ಲಿ ಹೆಚ್ಚಳವಾಗುತ್ತಿರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಲ್ಲೂ ಹೆಚ್ಚಳವಾಗಿದೆ. ಆಗಸ್ಟ್ಗೆ ಹೋಲಿಸಿದರೆ ಡೀಸೆಲ್ ಬಳಕೆ ಸೆಪ್ಟೆಂಬರ್ನಲ್ಲಿ ಕಡಿಮೆ ಆಗಿದೆಯಾದರೂ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಳಕೆ ಹೆಚ್ಚಿದೆ. ಆದರೆ, ಪೆಟ್ರೋಲ್ ಬಳಕೆ ಎರಡೂ ಮಾನದಂಡಗಳಲ್ಲೂ ಹೆಚ್ಚಾಗಿದೆ.
ಇದನ್ನೂ ಓದಿ: RBI MPC Meet October 2023: ಅಕ್ಟೋಬರ್ 4ರಿಂದ ಮೂರು ದಿನ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ನಿರ್ಧಾರ ಶುಕ್ರವಾರ ಪ್ರಕಟ
ಟ್ರಕ್ಗಳು ಮತ್ತು ಟ್ರಾಕ್ಟರ್ಗಳಿಂದ ಡೀಸೆಲ್ ಬಳಕೆ ಹೆಚ್ಚುತ್ತದೆ. ಮುಂಗಾರು ಋತುವಿನಲ್ಲಿ ಕೃಷಿ ವಲಯದಲ್ಲಿ ಟ್ರಾಕ್ಟರ್ ಬಳಕೆ ಕಡಿಮೆ ಇರುತ್ತದೆ. ಹೀಗಾಗಿ, ಡೀಸೆಲ್ ಬಳಕೆ ಈ ಅವಧಿಯಲ್ಲಿ ತುಸು ಕೆಳಗೆಯೇ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ