RBI MPC Meet October 2023: ಅಕ್ಟೋಬರ್ 4ರಿಂದ ಮೂರು ದಿನ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ನಿರ್ಧಾರ ಶುಕ್ರವಾರ ಪ್ರಕಟ
ಆರ್ಬಿಐನ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ ಅಕ್ಟೋಬರ್ 4ರಿಂದ ಸಭೆ ಸೇರಲಿದ್ದು, ರೆಪೋ ದರ ಇತ್ಯಾದಿ ವಿಚಾರಗಳನ್ನು ಚರ್ಚಿಸಲಿದೆ. ಅಕ್ಟೋಬರ್ 4ರಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ. ರೆಪೋ ದರ ಯಥಾಸ್ಥಿತಿ ಜೊತೆಗೆ ಹಣದ ಸರಬರಾಜನ್ನು ಕಡಿಮೆಗೊಳಿಸುವ ನಿಲುವನ್ನು ಆರ್ಬಿಐ ಮುಂದುವರಿಸುವ ನಿರೀಕ್ಷೆ ಇದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ...
ನವದೆಹಲಿ, ಅಕ್ಟೋಬರ್ 3: ಭಾರತೀಯ ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಎಂಪಿಸಿ ಸಭೆ ನಾಳೆಯಿಂದ (ಅ. 4, ಬುಧವಾರ) ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ (RBI MPC Meeting) ಪ್ರಸಕ್ತ ಹಣಕಾಸು ಪರಿಸ್ಥಿತಿ ಮತ್ತು ಮುಂದಿನ ಹಣಕಾಸು ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆ ಮುಗಿದ ಬಳಿಕ, ಅಕ್ಟೋಬರ್ 6 ಶುಕ್ರವಾರದಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.
ಈ ಬಾರಿಯ ಎಂಪಿಸಿ ಸಭೆಯಲ್ಲಿ ಎಲ್ಲರ ಚಿತ್ತ ನೆಟ್ಟಿರುವುದು ಎಲ್ಲಿ?
- ರೆಪೋದರ
- ಹಣಕಾಸು ಹರಿವು
- ಜಿಡಿಪಿ ಅಂದಾಜು
- ಹಣದುಬ್ಬರ ಅಂದಾಜು
ಸಾಮಾನ್ಯವಾಗಿ ಎಂಪಿಸಿ ಸಭೆಯಲ್ಲಿ ರೆಪೋ ದರ ಅಥವಾ ಬಡ್ಡಿದರ ವಿಚಾರವಾಗಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೆಚ್ಚಿನ ಮಂದಿಯ ಗಮನ ಇರುತ್ತದೆ. ವಿವಿಧ ಬ್ಯಾಂಕುಗಳ ಬಡ್ಡಿದರಗಳ ಮೇಲೆ ಇದು ನೇರವಾಗಿ ಪ್ರಭಾವಿಸುತ್ತದೆ. ರೆಪೋ ದರ, ರಿವರ್ಸ್ ರೆಪೋ ದರ, ಎಸ್ಎಲ್ಆರ್ ಇತ್ಯಾದಿ ದರಗಳಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಸದ್ಯ ರೆಪೋ ದರ ಶೇ. 6.5ರಷ್ಟಿದೆ. ಅದೇ ದರವನ್ನು ಆರ್ಬಿಐ ಮುಂದುವರಿಸಬಹುದು ಎನ್ನಲಾಗಿದೆ. ಈ ಬಗ್ಗೆ ಒಮ್ಮತದ ನಿರ್ಧಾರ ಬರಬಹುದು.
ಇದನ್ನೂ ಓದಿ: ಭಾರತದಲ್ಲಿ ಎಚ್ಪಿಯಿಂದ ಗೂಗಲ್ ಕ್ರೋಮ್ಬುಕ್ಗಳ ತಯಾರಿಕೆ; ಬಹಳ ಕಡಿಮೆಬೆಲೆಗೆ ಸಿಗಲಿವೆ ಲ್ಯಾಪ್ಟಾಪ್
ಹಣಕಾಸು ಹರಿವು ಹಿಂಪಡೆಯುವ ನಿರ್ಧಾರ ಮುಂದುವರಿಕೆ
ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್ಬಿಐ ಹಣಕಾಸು ಹರಿವು ಹಿಂಪಡೆಯಲು (withdrawal of accommodative stance) ನಿರ್ಧರಿಸಿತು. ಈ ಬಾರಿಯೂ ಅದೇ ನಿರ್ಧಾರ ಮುಂದುವರಿಯಬಹುದಾದರೂ ಎಂಪಿಸಿ ಸದಸ್ಯರಲ್ಲಿ ಒಮ್ಮತ ಇರುವುದಿಲ್ಲ. ಆರು ಮಂದಿ ಸದಸ್ಯರಲ್ಲಿ ಒಬ್ಬರು ಮಾತ್ರ ತದ್ವಿರುದ್ಧದ ಅಭಿಪ್ರಾಯ ತೋರಬಹುದು ಎಂದು ವರದಿಗಳು ಹೇಳುತ್ತಿವೆ.
ವಿತ್ಡ್ರಾಯಲ್ ಆಫ್ ಅಕಾಮಡೇಶನ್ ಎಂದರೇನು?
ಆರ್ಬಿಐನ ಅಕಾಮಡೇಟಿವ್ ಸ್ಟಾನ್ಸ್ ಎಂದರೆ ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲು ಅಗತ್ಯಬಿದ್ದಲ್ಲಿ ಹಣದ ಸರಬರಾಜನ್ನು (Money supply) ಹೆಚ್ಚಿಸಲು ಸಿದ್ಧವಿರುವುದು ಎಂದಾಗುತ್ತದೆ. ಇದನ್ನು ಹಿಂಪಡೆಯುವುದು ಎಂದರೆ ಹಣದ ಹರಿವನ್ನು ಕಡಿಮೆ ಮಾಡುವುದಾಗಿರುತ್ತದೆ. ಈ ಕ್ರಮದಿಂದ ಹಣದುಬ್ಬರಕ್ಕೆ ಕಡಿವಾಣ ಹಾಕಬಹುದು ಎಂದು ನಂಬಲಾಗಿದೆ. ರೆಪೋ ದರ ಏರಿಕೆ ಮಾಡದೆಯೇ ಈ ರೀತಿಯಾಗಿ ಹಣದುಬ್ಬರ ನಿಯಂತ್ರಿಸಲು ಆರ್ಬಿಐ ಕ್ರಮ ಕೈಗೊಳ್ಳಲು ಮುಂದಾಗಿದೆ. ಹಾಗೆಯೇ, 2,000 ರೂ ನೋಟುಗಳು ಬ್ಯಾಂಕಿಂಗ್ ವಲಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಣದ ಸರಬರಾಜು ಹೆಚ್ಚಿಸುವ ಅವಶ್ಯಕತೆ ಇಲ್ಲ ಎಂಬುದು ಆರ್ಬಿಐನ ಅನಿಸಿಕೆ.
ಎಂಪಿಸಿ ಸದಸ್ಯರು ಯಾರು?
ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯಲ್ಲಿ ಆರು ಮಂದಿ ಸದಸ್ಯರಿರುತ್ತಾರೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಮಿತಿ ಮುಖ್ಯಸ್ಥರಾಗಿರುತ್ತಾರೆ. ಈ ಆರು ಮಂದಿ ಎಂಪಿಸಿ ಸದಸ್ಯರ ವಿವರ ಈ ಕೆಳಕಾಣಿಸಿದಂತಿದೆ:
- ಶಕ್ತಿಕಾಂತ ದಾಸ್, ಆರ್ಬಿಐ ಗವರ್ನರ್
- ಮೈಕೇಲ್ ದೇಬ್ರತಾ ಪಾತ್ರ, ಆರ್ಬಿಐ ಡೆಪ್ಯುಟಿ ಗವರ್ನರ್
- ರಾಜೀವ್ ರಂಜನ್, ಆರ್ಬಿಐ ಮಾನಿಟರಿ ಪಾಲಿಸಿ ಮುಖ್ಯಸ್ಥರು
- ಆಶಿಮಾ ಗೋಯಲ್, ಪ್ರಧಾನಿ ಮೋದಿ ಆರ್ಥಿಕ ಸಲಹಾ ಮಂಡಳಿ ಸದಸ್ಎ
- ಶಶಾಂಕ ಭಿಡೆ, ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ನಲ್ಲಿ ಹಿರಿಯ ಸಲಹೆಗಾರರು
- ಜಯಂತ್ ವರ್ಮಾ, ಅಹ್ಮದಾಬಾದ್ ಐಐಎಂನ ಫೈನಾನ್ಸ್ ಮತ್ತು ಅಕೌಂಟಿಂಗ್ ಪ್ರೊಫೆಸರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ