ರೈಡ್​ಗೂ ಮುನ್ನ ‘ಟಿಪ್’; ಓಲಾ ಕಂಪನಿಗೆ 10 ಲಕ್ಷ ರೂ ದಂಡ ವಿಧಿಸಿದ ಸಿಸಿಪಿಎ

ಕ್ಯಾಬ್ ಬುಕ್ ಮಾಡುವಾಗ ಮುಂಗಡವಾಗಿ ಹೆಚ್ಚುವರಿ ಹಣ ಅಥವಾ 'ಟಿಪ್' ನೀಡುವಂತೆ ಗ್ರಾಹಕರನ್ನು ಪುಸಲಾಯಿಸುವ ಕಾರಣಕ್ಕೆ ಓಲಾ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) 10 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ. ಈ ರೀತಿಯ ಕ್ರಮವನ್ನು ತಕ್ಷಣವೇ ಅದನ್ನು ನಿಲ್ಲಿಸುವಂತೆ ಆದೇಶಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಿಸಿಪಿಎ ತೀರ್ಪನ್ನು ಸ್ವಾಗತಿಸಿದ್ದಾರೆ.

ರೈಡ್​ಗೂ ಮುನ್ನ ‘ಟಿಪ್’; ಓಲಾ ಕಂಪನಿಗೆ 10 ಲಕ್ಷ ರೂ ದಂಡ ವಿಧಿಸಿದ ಸಿಸಿಪಿಎ
ಕ್ಯಾಬ್
Image Credit source: PTI

Updated on: Nov 13, 2026 | 3:38 PM

ನವದೆಹಲಿ, ನವೆಂಬರ್ 13: ಗ್ರಾಹಕರು ಕ್ಯಾಬ್ ಬುಕ್ ಮಾಡುವಾಗ, ಚಾಲಕರು ರೈಡ್ ಸ್ವೀಕರಿಸುವ ಸಾಧ್ಯತೆ ಹೆಚ್ಚಿಸಲು ಹೆಚ್ಚುವರಿ ಟಿಪ್ ಅಥವಾ ಹಣ ನೀಡುವಂತೆ ರೈಡ್ ಹೈಲಿಂಗ್ ಆ್ಯಪ್​ಗಳು ಪುಸಲಾಯಿಸುವುದು ಗೊತ್ತಿರಬಹುದು. ಈ ರೀತಿ ಚಾಲಕರು ರೈಡ್ ಸ್ವೀಕರಿಸುವ ಮುನ್ನವೇ “ಹೆಚ್ಚುವರಿ ಹಣ ನೀಡಿದರೆ ಬೇಗ ರೈಡ್ ಕನ್ಫರ್ಮ್ ಆಗುತ್ತದೆ” ಎಂಬ ರೀತಿಯಲ್ಲಿ ಪ್ರಚೋದನೆ ನೀಡುವುದು ತಪ್ಪುದಾರಿಗೆಳೆಯುವ ಕ್ರಮವಾಗಿದೆ ಎಂದು ಸಿಸಿಪಿಎ (CCPA) ಅಭಿಪ್ರಾಯಪಟ್ಟಿದೆ.

ಸಾಂಪ್ರದಾಯಿಕವಾಗಿ ‘ಟಿಪ್’ ಎಂಬುದು ಸೇವೆಯ ಬಳಿಕ ನೀಡುವ ಮೆಚ್ಚುಗೆಯಾಗಿದೆ. ಆದರೆ ರೈಡ್‌ಗೂ ಮುಂಚೆಯೇ ಹಣ ವಸೂಲಿ ಮಾಡುವ ಈ ಪದ್ಧತಿಯು ಗ್ರಾಹಕರನ್ನು ದಿಢೀರ್ ನಿರ್ಧಾರಗಳಿಗೆ ಒಳಪಡಿಸುವ ತಂತ್ರಗಾರಿಕೆಯಾಗಿದೆ (Dark Pattern) ಎಂದು ಪ್ರಾಧಿಕಾರ ತಿಳಿಸಿದೆ. ಈ ದುರ್ನಡತೆ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ನೀತಿಗಾಗಿ ಓಲಾ ಮಾತೃಸಂಸ್ಥೆಯಾದ ANI ಟೆಕ್ನಾಲಜೀಸ್ ಮೇಲೆ 10 ಲಕ್ಷ ರೂ ದಂಡ ವಿಧಿಸಲಾಗಿದೆ.

Loading...

ಇದನ್ನೂ ಓದಿ: ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು

ಅಪ್ಲಿಕೇಶನ್‌ನಲ್ಲಿ ‘ಟಿಪ್’, ‘ಆಡ್-ಆನ್’ ಅಥವಾ ಯಾವುದೇ ಹೆಸರಿನಲ್ಲಿ ಮುಂಗಡವಾಗಿ ಹೆಚ್ಚುವರಿ ಹಣ ಪಡೆಯುವ ಎಲ್ಲಾ ಪ್ರಾಂಪ್ಟ್‌ಗಳು ಮತ್ತು ಇಂಟರ್‌ಫೇಸ್ ಅಂಶಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಲಾಗಿದೆ. ಅಲ್ಲದೆ, 15 ದಿನಗಳೊಳಗೆ ಅನುಸರಣಾ ವರದಿ (Compliance Report) ಸಲ್ಲಿಸುವಂತೆ ಸೂಚಿಸಲಾಗಿದೆ.

ಮೋಟಾರು ವಾಹನ ಅಗ್ರಿಗೇಟರ್ಸ್ ಮಾರ್ಗಸೂಚಿಗಳ ಉಲ್ಲಂಘನೆ

ಪ್ರಯಾಣ ಪೂರ್ಣಗೊಂಡ ನಂತರವಷ್ಟೇ ಟಿಪ್ ನೀಡಲು ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು ಅವಕಾಶ ನೀಡುತ್ತವೆ. ಆದರೆ ಮುಂಗಡವಾಗಿ ಹಣ ಪಡೆಯುವುದು ಗ್ರಾಹಕರ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ

ಸಿಸಿಪಿಎ ಕ್ರಮ ಸ್ವಾಗತಿಸಿದ ಪ್ರಲ್ಹಾದ್ ಜೋಶಿ

ಗ್ರಾಹಕರಿಂದ ಟಿಪ್ಸ್ ವಸೂಲಿ ಮಾಡುತ್ತಿದ್ದ ಓಲಾ ಕಂಪನಿ ವಿರುದ್ಧ ಸಿಸಿಪಿಎ ದಂಡ ವಿಧಿಸಿರುವ ಕ್ರಮವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಸ್ವಾಗತಿಸಿದ್ದಾರೆ.

‘ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA), ಓಲಾ ಸಂಸ್ಥೆಯ ರೈಡ್‌ಗೆ ಮುನ್ನವೇ ಪಾವತಿ ಮಾಡುವಂತೆ ಗ್ರಾಹಕರನ್ನು ದಾರಿ ತಪ್ಪಿಸುವ ಸೂಚನೆಗಳನ್ನು ನೀಡಿದ್ದಕ್ಕಾಗಿ, ಓಲಾ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದೆ ಮತ್ತು ಈ ವ್ಯವಸ್ಥೆಯನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. ‘ಡಾರ್ಕ್ ಪ್ಯಾಟರ್ನ್‌ಗಳು’, ಅನಗತ್ಯ ಹಾಗೂ ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವ ಕ್ರಮಗಳ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ’ ಎಂದು ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Fri, 13 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us