ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ; ಲಡಾಖ್​ನಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು

MSP Hike: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ಡಿಎ ಹೆಚ್ಚಳ, ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ, ಲಡಾಖ್​​ನಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಲಡಾಖ್​ನಲ್ಲಿ 13 ಗಿಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆ ಯೋಜನೆಗೂ ಸಂಪುಟ ಅಸ್ತು ಎಂದಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಲೂ ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ; ಲಡಾಖ್​ನಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು
ಗೋಧಿ

Updated on: Oct 18, 2023 | 5:01 PM

ನವದೆಹಲಿ, ಅಕ್ಟೋಬರ್ 18: ಕೇಂದ್ರ ಸಚಿವ ಸಂಪುಟ (central cabinet) ಇಂದು ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ಡಿಎ ಹೆಚ್ಚಳ, ಹಿಂಗಾರು ಬೆಳೆಗಳಿಗೆ ಎಂಎಸ್​ಪಿ (MSP- Minimum Support Price) ಹೆಚ್ಚಳ, ಲಡಾಖ್​​ನಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. 2024-25 ರ ಮಾರುಕಟ್ಟೆ ಋತುವಿನ (Rabi Marketing Season) ಹಿಂಗಾರು ಬೆಳೆಗಳಿಗೆ (rabi crops) ಕನಿಷ್ಠ ಬೆಂಬಲ ಬೆಲೆಯನ್ನು 425 ರೂಗಳವರೆಗೂ ಹೆಚ್ಚಿಸಲಾಗಿದೆ.

ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲೀ (ಜವೆ ಗೋಧಿ), ಕಡಲೆಕಾಳು (gram), ಮಸೂರ (lentil), ಸಾಸಿವೆ, ಹೆರೆಬೀಜ (rapeseed) ಮತ್ತು ಕುಸುಬೆಗಳಿಗೆ (safflower) ಎಂಎಸ್​ಪಿ ಹೆಚ್ಚಿಸಲಾಗಿದೆ. ಕಡಲೆಕಾಳಿಗೆ ಒಂದು ಕ್ವಿಂಟಾಲ್​ಗೆ 425 ರೂನಷ್ಟು ಎಂಎಸ್​ಪಿ ಹೆಚ್ಚಳವಾಗಿದೆ. ಒಂದು ಕ್ವಿಂಟಾಲ್ ಕಡಲೆಕಾಳಿಗೆ ಬೆಂಬಲ ಬೆಲೆ 6,426 ರೂ ಆಗಿದೆ.

ಹಿಂಗಾರು ಬೆಳೆಗಳ ಎಂಎಸ್​ಪಿ ದರ ಪರಿಷ್ಕರಣೆ

  • ಗೋಧಿ: ಕ್ವಿಂಟಾಲ್​ಗೆ ಎಂಎಸ್​ಪಿ 2,125 ರೂನಿಂದ 2,275 ರೂಗೆ ಏರಿಕೆ
  • ಬಾರ್ಲಿ (ಜವೆ ಗೋಧಿ): 1,735 ರೂನಿಂದ 1,850 ರೂಗೆ ಏರಿಕೆ
  • ಕಡಲೆಕಾಳು: 5,335 ರೂನಿಂದ 5,400 ರೂಗೆ ಏರಿಕೆ
  • ಮಸೂರ: 6,000 ರೂನಿಂದ 6,425 ರೂಗೆ ಏರಿಕೆ
  • ಹೆರೆಬೀಜ ಮತ್ತು ಸಾಸಿವೆ: 5,450 ರೂನಿಂದ 5,650 ರೂಗೆ ಏರಿಕೆ
  • ಕುಸುಬೆ: 5,650 ರೂನಿಂದ 5,800 ರೂಗೆ ಏರಿಕೆ

ಇದನ್ನೂ ಓದಿ: ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಹೆಚ್ಚಿಸಲು ಸಿಎಸ್​ಕೆ ಸ್ಥಾಪನೆ; ಕಂಪ್ಯೂಟರ್, ಮೊಬೈಲ್​ಗಳಲ್ಲಿ ರಕ್ಷಣೆ ಪಡೆಯುವುದು ಹೇಗೆ?

ಲಡಾಖ್​ನಲ್ಲಿ ಗ್ರೀನ್ ಎನರ್ಜಿ ಕಾರಿಡಾರ್​ನ ಎರಡನೇ ಹಂತದ ಯೋಜನೆಗೆ ಅನುಮೋದನೆ

ಲಡಾಖ್​ನಲ್ಲಿ 13 ಗಿಗಾವ್ಯಾಟ್ ರಿಲಿವಬಲ್ ಎನರ್ಜಿ ಪ್ರಾಜೆಕ್ಟ್​ಗೆ ಸಂಪುಟದ ಅನುಮೋದನೆ ಸಿಕ್ಕಿದೆ. ಎರಡನೇ ಹಂತದ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯ ಇಂಟರ್​ ಸ್ಟೇಟ್ ಟ್ರಾನ್ಸ್​ಮಿಶನ್ ಸಿಸ್ಟಂ ಇದಾಗಿದೆ. 20,773.70 ಕೋಟಿ ರೂ ಅಂದಾಜು ವೆಚ್ಚದ ಈ ಪರಿಸರಪೂರಕ ಇಂಧನ ತಯಾರಿಕೆ ಯೋಜನೆಯನ್ನು 2029-20ರೊಳಗೆ ಸ್ಥಾಪಿಸುವ ಗುರಿ ಇಡಲಾಗಿದೆ.

ಲಡಾಖ್​ನಿಂದ ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಮೂಲಕ ಹರ್ಯಾಣದ ಕೈತಾಲ್​ವರೆಗೂ ಇಲ್ಲಿನ ಉತ್ಪಾದಿತ ಇಂಧನ ಸಾಗಿ ಹೋಗುತ್ತದೆ. ಕೈತಾಲ್​ನಲ್ಲಿರುವ ನ್ಯಾಷನಲ್ ಗ್ರಿಡ್​ಗೆ ಇದು ಸಂಪರ್ಕ ಮಾಡುತ್ತದೆ. ಲೆಹ್, ಅಲುಸ್ಟೆಂಗ್ ಮತ್ತು ಶ್ರೀನಗರ ಲೈನ್ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಎರಡನೇ ಹಂತದ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ.

ಮೂರು ವರ್ಷಗಳ ಹಿಂದಿನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್​ನಲ್ಲಿ ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆ ಆಗಲಿರುವುದನ್ನು ಘೋಷಿಸಿದ್ದರು. ಅದು ಈ ಕಾರ್ಯರೂಪಕ್ಕೆ ಬರುತ್ತಿದೆ.

ಇದನ್ನೂ ಓದಿ: Israel and Kerala: ಇಸ್ರೇಲ್ ಭದ್ರತಾ ಸಿಬ್ಬಂದಿಗೆ ಕೇರಳದಿಂದ ಸಮವಸ್ತ್ರ ಸರಬರಾಜು; ಕಣ್ಣೂರಿನ ಮರ್ಯನ್ ವರ್ಲ್ಡ್​ಫೇಮಸ್

ಡಿಎ ಹೆಚ್ಚಳ

ಇದೇ ವೇಳೆ, ಕೇಂದ್ರ ಸಚಿವ ಸಂಪುಟವು ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಹೆಚ್ಚಿಸುವುದಕ್ಕೆ ಅನುಮೋದನೆ ನೀಡಿದೆ. ಇದರೊಂದಿಗೆ, ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಶೇ. 46ರಷ್ಟಾಗುತ್ತದೆ. ಈಗ ಪ್ರಕಟಿಸಿರುವ ಹೆಚ್ಚಳವು ಜುಲೈನಿಂದ ಅನ್ವಯ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Wed, 18 October 23