ದೇಶದಲ್ಲಿ ಸೆಮಿ ಕಂಡಕ್ಟರ್ಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವು ನೂರು ಕೋಟಿ ಡಾಲರ್ಗಳ ಬಂಡವಾಳ ಬೆಂಬಲ ಮತ್ತು ಉತ್ಪಾದನೆಗೆ ಜೋಡಣೆಯಾದ ಪ್ರೋತ್ಸಾಹ ಧನವನ್ನು ಬುಧವಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ಸಂಪುಟವು ಈ ಬಗ್ಗೆ ಅನುಮತಿಸುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟವು 76 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ರೋತ್ಸಾಹ ಧನವನ್ನು ಸೆಮಿ ಕಂಡಕ್ಟರ್ ಉತ್ಪಾದನೆಗಾಗಿ ನೀಡಲು ಎಲ್ಲ ಸಿದ್ಧತೆ ನಡೆಸಿದೆ. ಈ ಪ್ರೋತ್ಸಾಹಧನವನ್ನು ಮೂರು ರೀತಿಯನ್ನು ಪ್ರಕ್ರಿಯೆ ಮಾಡುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ, ಸೆಮಿ ಕಂಡಕ್ಟರ್ ವೇಫರ್ ಫ್ಯಾಬ್ರಿಕೇಷನ್ (Fab), ಜೋಡಣೆ, ಪರೀಕ್ಷೆ ಮತ್ತು ಪ್ಯಾಕೇಜಿಂಗ್ ವ್ಯವಸ್ಥೆಗೆ ಬಂಡವಾಳ ವೆಚ್ಚವಾಗಿ ಶೇ 25ರಷ್ಟು ನೀಡುವುದು ಸಹ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದರಲ್ಲಿ ಸ್ಟಾರ್ಟ್ಅಪ್ಗಳಿಗೆ ಸೆಮಿಕಂಡಕ್ಟರ್ಗಳ ಡಿಸೈನ್ ಅಭಿವೃದ್ಧಿಗಾಗಿ ನೀಡುವ ಪ್ರೋತ್ಸಾಹ ಧನವೂ ಸೇರಿದೆ. ಈ ಕೈಗಾರಿಕೆಯಲ್ಲಿ 1.7 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಬಹುದು ಎಂಬ ನಿರೀಕ್ಷೆ ಇದೆ. ಮುಂದಿನ ಆರು ವರ್ಷದಲ್ಲಿ ಭಾರತದಲ್ಲಿ ಸೆಮಿ ಕಂಡಕ್ಟರ್ ಡಿಸೈನ್, ಬಿಡಿ ಭಾಗಗಳ ಉತ್ಪಾದನೆ ಮತ್ತು ಡಿಸ್ಪ್ಲೇ ಫ್ಯಾಬ್ರಿಕೇಷನ್ನ 20ರಷ್ಟು ಘಟಕಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಒಂದು ಸಲ ಕೇಂದ್ರ ಸಂಪುಟದಿಂದ ಯೋಜನೆಗೆ ಅನುಮತಿ ಸಿಕ್ಕ ಮೇಲೆ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯ (MeitY) ಮಾಹಿತಿ ಮೇಲೆ ಕೆಲಸ ಮಾಡಲಿದೆ. ಈ ರೀತಿ ಮೆಗಾ ಪ್ರೋತ್ಸಾಹ ಧನ ಯೋಜನೆ ಮೂಲಕವಾಗಿ ಮೀಡಿಯಾಟೆಕ್, ಇಂಟೆಲ್, ಕ್ಲಾಲ್ಕಾಮ್, ಸ್ಯಾಮ್ಸಂಗ್ ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ನಂಥ ಸೆಮಿ ಕಂಡಕ್ಟರ್ ಉತ್ಪಾದಕರನ್ನು ಸೆಳೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಚಿಪ್ ಕೊರತೆ ಕಂಡುಬಂದು, ವಿವಿಧ ವಲಯದ ಕೈಗಾರಿಕೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ವಿವಿಧ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಗೆ ಸೆಮಿ ಕಂಡಕ್ಟರ್ಗಳ ಬಹಳ ಮುಖ್ಯ. ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಕಾರುಗಳು ಮತ್ತಿತರ ಸಲಕರಣೆ ಹಾಗೂ ವಾಹನಗಳಿಗೆ ಅತ್ಯಗತ್ಯ. ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕಳೆದ ಒಂದು ವರ್ಷದಿಂದ ಭಾರೀ ತೊಂದರೆಯಾಗಿದೆ. ಈ ಕೊರತೆಯಿಂದ ಸ್ಮಾರ್ಟ್ಫೋನ್, ಪರ್ಸನಲ್ ಕಂಪ್ಯೂಟರ್ಸ್, ಗೇಮ್ ಕನ್ಸೋಲ್ಸ್, ವಾಹನೋದ್ಯಮ ಮತ್ತು ವೈದ್ಯಕೀಯ ಸಲಕರಣೆಗಳ ಮೇಲೆ ಪರಿಣಾಮ ಆಗಿದೆ. ಜತೆಗೆ 2021ರಲ್ಲಿ ಜಾಗತಕ ವಾಹನ ಉತ್ಪಾದನೆ ಮೇಲೆ ಪ್ರಭಾವ ಬೀರಿದೆ. ವರದಿಗಳ ಪ್ರಕಾರ, 2022ರ ಎರಡನೇ ತ್ರೈಮಾಸಿಕದ ಮುಂಚೆ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇಲ್ಲ. ಆ ಕಾರಣದಿಂದ ದೇಶೀ ವಾಹನೋದ್ಯಮದಲ್ಲಿ ಉತ್ಪಾದನೆ ವಿಳಂಬ ಆಗುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಸೆಮಿಕಂಡಕ್ಟರ್ ಎಂಬ ಸರ್ವಾಂತರ್ಯಾಮಿ ಬಗ್ಗೆ ನಿಮಗೆಷ್ಟು ಗೊತ್ತು?
Published On - 1:07 pm, Wed, 15 December 21