Coal Shortage Crisis: ಕಲ್ಲಿದ್ದಲು ಕೊರತೆ ನಿವಾರಿಸಲು ‘ಕ್ಯಾಪ್ಟಿವ್ ಮೈನ್ಸ್​’ಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ

| Updated By: Srinivas Mata

Updated on: Oct 06, 2021 | 7:11 PM

ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗಳು ವಾರ್ಷಿಕ ಉತ್ಪಾದನೆಯ ಶೇ 50ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

Coal Shortage Crisis: ಕಲ್ಲಿದ್ದಲು ಕೊರತೆ ನಿವಾರಿಸಲು ಕ್ಯಾಪ್ಟಿವ್ ಮೈನ್ಸ್​ಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ
ಸಾಂದರ್ಭಿಕ ಚಿತ್ರ
Follow us on

ಜಾಗತಿಕ ಮಟ್ಟದಲ್ಲೇ ಕಲ್ಲಿದ್ದಲು ಕೊರತೆ ಉಂಟಾಗಿರುವುದರಿಂದ ಬೇಡಿಕೆ ವಿಪರೀತ ಹೆಚ್ಚಾಗಿದೆ. ಇದರಿಂದ ಭಾರತ ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವವಾದ ಆದೇಶವೊಂದನ್ನು ನೀಡಲಾಗಿದೆ. ಇಲ್ಲಿಯ ತನಕ ಸ್ವಂತ ಬಳಕೆಗಾಗಿ (ಇವುಗಳನ್ನು Captive Mines ಎನ್ನಲಾಗುತ್ತದೆ) ಕಲ್ಲಿದ್ದಲು ಬಳಸುತ್ತಿದ್ದ ಅವುಗಳು ಇನ್ನು ಮುಂದೆ ವಾರ್ಷಿಕ ಉತ್ಪಾದನೆಯಲ್ಲಿ ಶೇಕಡಾ 50ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಲ್ಲಿದ್ದಲು ಸಚಿವಾಲಯದಿಂದ ಅಕ್ಟೋಬರ್ 5ನೇ ತಾರೀಕಿನ ಮಂಗಳವಾರದಂದು ಘೋಷಣೆ ಮಾಡಲಾಗಿದೆ. ಅಂದ ಹಾಗೆ, ಭಾರತದಲ್ಲಿ ಈ ಹಿನ್ನೆಲೆಯಲ್ಲಿ ವಿವಿಧ ಸಿಮೆಂಟ್​ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿದ್ದು, ಶೇ 20ಕ್ಕೂ ಹೆಚ್ಚು ದರ ಮೇಲೇರಿದೆ. ಇದೇ ವೇಳೆ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸುವ ಉಕ್ಕಿನ ದರ ಕೂಡ ಹೆಚ್ಚಳವಾಗಿದೆ.

ಕಲ್ಲಿದ್ದಲು ಸಚಿವಾಲಯವು ಹೇಳಿಕೆಯನ್ನು ನೀಡಿ, ಕಲ್ಲಿದ್ದಲು ಅಥವಾ ಲಿಗ್ನೈಟ್ ಮಾರಾಟದ ದೃಷ್ಟಿಯಿಂದ ಖನಿಜ ವಿನಾಯಿತಿ ನಿಯಮಾವಳಿ, 1960 ಇದಕ್ಕೆ ತಿದ್ದುಪಡಿ ತರಲಾಗಿದೆ. ಭೋಗ್ಯಕ್ಕೆ ಪಡೆದವರು ಕ್ಯಾಪ್ಟಿವ್ ಗಣಿಗಳಿಗೆ ಹೆಚ್ಚುವರಿಯಾಗಿ ಮೊತ್ತವನ್ನು ಪಾವತಿ ಮಾಡಿ, ಒಂದು ಹಣಕಾಸು ವರ್ಷದಲ್ಲಿ ಉತ್ಪಾದನೆ ಮಾಡಿದ ಶೇ 50ರ ತನಕದ ಒಟ್ಟಾರೆ ಕಲ್ಲಿದ್ದಲು ಅಥವಾ ಲಿಗ್ನೈಟ್, ಅದು ಕೂಡ ಆ ಗಣಿಗೆ ಜೋಡಣೆಯಾದ ಘಟಕ ಸಂಪೂರ್ಣ ಬಳಕೆ ಅಗತ್ಯಗಳು ಪೂರೈಸಿದ ಮೇಲೆ ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.

ಚೀನಾ, ಯುರೋಪಿಯನ್ ದೇಶಗಳೂ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಆ ಪೈಕಿ ಮುಖ್ಯವಾಗಿ ಕಲ್ಲಿದ್ದಲು ಉತ್ಪಾದನೆ ಮಾಡುವ ವಿಶ್ವದ ಅತಿದೊಡ್ಡ ದೇಶಗಳಲ್ಲಿನ ಹವಾಮಾನ ವೈಪರೀತ್ಯ ಒಂದು ಕಾರಣವಾದರೆ, ಸ್ವಚ್ಛ ಇಂಧನ ಬಳಕೆ ಬಗ್ಗೆ ಹೆಚ್ಚುತ್ತಿರುವ ಕಾಳಜಿಯಿಂದಾಗಿ ಸ್ವಯಂ ಆಗಿ ಹೇರಿಕೊಂಡಿರುವ ನಿಬಂಧನೆಗಳು ಇನ್ನೊಂದು ರೀತಿಯಲ್ಲಿ ಕೊರತೆಗೆ ಕಾರಣವಾಗಿವೆ. ಆದರೆ ಭಾರತ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತಿದೆ. ಆ ಪೈಕಿ ಕ್ಯಾಪ್ಟಿವ್​ ಮೈನ್​ಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಮಾರಾಟ ಮಾಡುವುದು ಸಹ ಒಳಗೊಂಡಿದೆ.​

ಇದನ್ನೂ ಓದಿ:  Coal Crisis: ಭಾರತದಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣವೇನು?; ಪೂರ್ತಿ ಮಾಹಿತಿ ಇಲ್ಲಿದೆ