ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಒಂದು ವರ್ಷಗಳ ಕಾಲ ಕೆಲವು ಕೃಷಿ ಉತ್ಪನ್ನಗಳ ಫ್ಯೂಚರ್ ಕಾಂಟ್ರಾಕ್ಟ್ಸ್ ವಹಿವಾಟನ್ನು ಕೇಂದ್ರ ಹಣಕಾಸು ಸಚಿವಾಲಯವು ಅಮಾನತು ಮಾಡಿದೆ. ಭತ್ತ (ಬಾಸ್ಮತಿ- ಹೊರತುಪಡಿಸಿ), ಗೋಧಿ, ಕಡಲೇಕಾಳು, ಸಾಸಿವೆ ಮತ್ತು ಅದರ ಉತ್ಪನ್ನಗಳು, ಸೋಯಾ ಬೀನ್ ಮತ್ತು ಅದರ ಉತ್ಪನ್ನಗಳು, ಕಚ್ಚಾ ತಾಳೆ ಎಣ್ಣೆ ಮತ್ತು ಹೆಸರುಕಾಳು – ಏಳು ಸರಕುಗಳ ವ್ಯಾಪಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ವಿರೋಧ ಪಕ್ಷಗಳಿಂದ ಒತ್ತಡವನ್ನು ಎದುರಿಸುತ್ತಿದೆ. ಆಹಾರ ಬೆಲೆಗಳ ಏರಿಕೆಯೂ ಸೇರಿಕೊಂಡು ನವೆಂಬರ್ ತಿಂಗಳ ಗ್ರಾಹಕ ದರ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟವಾದ ಶೇ 4.91 ತಲುಪಿತು. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸುಂಕ ಇಳಿಕೆ ಮಾಡಿ, ಅದರ ಬೆನ್ನಿಗೇ ರಾಜ್ಯ ಸರ್ಕಾರಗಳು ವ್ಯಾಟ್ ಇಳಿಸಿದ ಹೊರತಾಗಿಯೂ ಏರುತ್ತಿರುವ ಹಣದುಬ್ಬರವನ್ನು ತಹಬಂದಿಗೆ ತರುವುದಕ್ಕೆ ಆಗಿಲ್ಲ. ದುರ್ಬಲ ರೂಪಾಯಿ ಮೌಲ್ಯವು ಸಹ ರೀಟೇಲ್ ಮಟ್ಟದಲ್ಲಿ ದರದ ಒತ್ತಡ ಹೇರುತ್ತಿದೆ.
ಒಂದು ತಿಂಗಳ ಹಿಂದೆ ಶೇ 12.54ರಷ್ಟಿದ್ದ ಸಗಟು ದರ ಹಣದುಬ್ಬರ ನವೆಂಬರ್ ತಿಂಗಳ ಶೇ 14.23ಕ್ಕೆ ತಲುಪಿದೆ. ಇದು ಸತತವಾಗಿ ಎಂಟನೇ ತಿಂಗಳು ಎರಡಂಕಿಯಲ್ಲಿ ಇದೆ. “ಮುಂದಿನ ಆದೇಶದವರೆಗೆ ಹೊಸ ಕಾಂಟ್ರಾಕ್ಟ್ ಆರಂಭಿಸುವಂತಿಲ್ಲ. ಕಾಂಟ್ರಾಕ್ಟ್ಸ್ಗಳು ನಡೆಸುವ ಬಗ್ಗೆ ಹೊಸ ಪೊಸಿಷನ್ ತೆಗೆದುಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ. ಪೊಸಿಷನ್ ಸ್ಕ್ವೇರಿಂಗ್ ಮಾಡುವುದಕ್ಕೆ ಮಾತ್ರ ಅವಕಾಶ ಇರುತ್ತದೆ. ಈ ಸೂಚನೆಗಳು ತಕ್ಷಣದಿಂದಲೇ ಜಾರಿ ಆಗುತ್ತದೆ. ಈ ಮೇಲ್ಕಂಡ ಸೂಚನೆಗಳು ಒಂದು ವರ್ಷದ ಅವಧಿಗೆ ಅನ್ವಯ ಆಗುತ್ತದೆ,” ಎಂದು ಸೆಬಿ ಅಧಿಸೂಚನೆಯಲ್ಲಿ ತಿಳಿಸಿದೆ.
ಕಳೆದ ಕೆಲವು ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಿನ ಹಾಗೂ ಅಕಾಲಿಕವಾದ ಮಳೆಯು ಟೊಮೆಟೋ ಮತ್ತು ಈರುಳ್ಳಿ ಸೇರಿ ಇತರ ಬೆಳೆಗಳು ನಾಶವಾಗಿವೆ. ಕೆಲವು ಪ್ರದೇಶದಲ್ಲಿ ಇನ್ನೇನು ಬೆಳೆಗೆಳು ಕೊಯ್ಲಿಗೆ ಬಂದಾಗ ಮಳೆ ಬಂದಿತು. ಇದರಿಂದಾಗಿ ಪೂರೈಕೆಗೆ ತಡೆ ಎದುರಾಯಿತು. ಈ ಕಾರಣಕ್ಕೆ ನಂತರದಲ್ಲಿ ಸಗಟು ಮತ್ತು ಚಿಲ್ಲರೆ ಎರಡೂ ದರ ಏರಿಕೆ ಕಂಡಿತು. ಪೂರೈಕೆಯು ಚೇತರಿಕೆ ಕಾಣುತ್ತಾ ಹೋದಂತೆ ಈರುಳ್ಳಿ, ಟೊಮೆಟೊ ಬೆಲೆ ಕಡಿಮೆ ಆಗುತ್ತಾ ಸಾಗಿತು. ಸಾಮಾನ್ಯವಾಗಿ ಆಲೂಗಡ್ಡೆ, ಈರುಳ್ಳಿಗಿಂತ ಟೊಮೆಟೊ ದರದಲ್ಲಿ ಭಾರೀ ಏರಿಳಿತ ಇರುತ್ತದೆ. ಮುಖ್ಯವಾದ ಕಾರಣ ಏನೆಂದರೆ, ಅವುಗಳ ಬಾಳಿಕೆ ಬಹಳ ಕಡಿಮೆ ಸಮಯ ಆಗಿರುತ್ತದೆ.
ಇತರ ಬೆಳೆಗಳ ಮೇಲೆ ಸಹ ಮಳೆ ಪ್ರಭಾವ ಬೀರಿದೆ. ಉದಾಹರಣೆಗೆ, ನವೆಂಬರ್ ಪೂರ್ತಿಯಾಗಿ ಹೂಕೋಸು ಬೆಲೆ ಮೇಲ್ಮಟ್ಟದಲ್ಲೇ ಇತ್ತು. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಹೂಸು ದರ ಸೂಚ್ಯಂಕವು ಶೇ 16ರಷ್ಟು ಏರಿಕೆ ಆಗಿದೆ ಎಂಬುದನ್ನು ಸಿಪಿಐ ದತ್ತಾಂಶ ತೋರಿಸಿದೆ.