Bloodbath in stock market: ಷೇರುಪೇಟೆಯಲ್ಲಿ ಪತರಗುಟ್ಟಿದ ಸೂಚ್ಯಂಕ; ಸೆನ್ಸೆಕ್ಸ್ 1300 ಪಾಯಿಂಟ್ಸ್, ನಿಫ್ಟಿ 400 ಪಾಯಿಂಟ್ಸ್ ಕುಸಿತ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 20ನೇ ತಾರೀಕಿನ ಸೋಮವಾರದಂದು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿಯಲ್ಲಿ ಡಿಸೆಂಬರ್ 20ನೇ ತಾರೀಕಿನ ಸೋಮವಾರದಂದು ಬೆಳಗ್ಗೆ ವಹಿವಾಟಿನಲ್ಲಿ “ರಕ್ತದೋಕುಳಿ” (bloodbath) ಆಯಿತು. ಸೆನ್ಸೆಕ್ಸ್ ಸೂಚ್ಯಂಕವು 1300 ಪಾಯಿಂಟ್ಸ್ನಷ್ಟು ನೆಲ ಕಚ್ಚಿದರೆ, ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ ಕಂಡಿತು. ನಿಫ್ಟಿಯ ಲೋಹದ ಸೂಚ್ಯಂಕವು ಶೇ 3ರಷ್ಟು ಕುಸಿತ ಕಂಡಿತು. ಇದಕ್ಕೆ ಕಾರಣ ಆಗಿದ್ದು ಎಪಿಎಲ್ ಟ್ಯೂಬ್ಸ್, SAIL, ಜಿಂದಾಲ್ ಸ್ಟೀಲ್. ದಿನದ ಆರಂಭದ ವಹಿವಾಟಿನಲ್ಲಿ ಲೋಹ, ರಿಯಾಲ್ಟಿ, ವಾಹನ, ಬ್ಯಾಂಕ್ಗಳ ಸ್ಟಾಕ್ಗಳು ಸೂಚ್ಯಂಕಗಳ ಇಳಿಕೆಗೆ ಪ್ರಮುಖವಾಗಿ ಕಾರಣವಾದವು. ಬಿಎಸ್ಇ ತೈಲ ಮತ್ತು ಅನಿಲ ಸೂಚ್ಯಂಕಗಳು ಶೇ 3ರಷ್ಟು ಕುಸಿತ ಕಂಡವು. ಮುಖ್ಯವಾಗಿ ಅದಾನಿ ಟೋಟಲ್ ಗ್ರೀನ್, ಬಿಪಿಸಿಎಲ್, ಒಎನ್ಜಿಸಿ ಕಂಪೆನಿ ಷೇರುಗಳ ಬೆಲೆ ಇಳಿಕೆ ಮುಖ್ಯ ಕಾರಣಗಳಾದವು.
ಇನ್ನು ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 6 ಪೈಸೆ ಇಳಿಕೆಯೊಂದಿಗೆ ದಿನದ ವಹಿವಾಟು ಆರಂಭಿಸಿತು. ಶುಕ್ರವಾರದ ದಿನಾಂತ್ಯಕ್ಕೆ 76.08ರಲ್ಲಿ ವ್ಯವಹಾರ ಮುಗಿಸಿದ್ದ ರೂಪಾಯಿಯು ಸೋಮವಾರ ಬೆಳಗ್ಗೆ 76.14ರೊಂದಿಗೆ ಆರಂಭವಾಯಿತು. ಜಾಗತಿಕ ಮಾರುಕಟ್ಟೆಯಲ್ಲಿನ ಅಪಾಯದ ಸಾಧ್ಯತೆ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ಶುಕ್ರವಾರ ಹೆಚ್ಚಳ ಕಂಡಿತ್ತು. ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬ ನಿರೀಕ್ಷೆ ಇರುವಾಗಲೇ ಕೊವಿಡ್-19 ಪ್ರಕರಣಗಳಲ್ಲಿ ಏರಿಕೆ ಆಗುತ್ತಿರುವುದು ಮಾರುಕಟ್ಟೆಯ ಭಾವನೆಗಳಿಗೆ ಘಾಸಿ ಮಾಡುತ್ತಿದೆ. ಮುಂದಿನ ವರ್ಷ ಮೂರು ದರ ಹೆಚ್ಚಳದ ಬಗ್ಗೆ ಅಮೆರಿಕದ ಫೆಡ್ ರಿಸರ್ವ್ (ಕೇಂದ್ರ ಬ್ಯಾಂಕ್) ಸುಳಿವು ನೀಡಿರುವುದರಿಂದ ಡಾಲರ್ಗೆ ಮತ್ತಷ್ಟು ಬಲ ತಂದಿದೆ ಎಂದು ಐಸಿಐಸಿಐ ಡೈರೆಕ್ಟ್ ಹೇಳಿದೆ.
ಸೋಮವಾರದಂದು ದಕ್ಷಿಣ ಭಾರತ ಮೂಲದ ಶ್ರೀರಾಮ್ ಪ್ರಾಪರ್ಟೀಸ್ ದುರ್ಬಲ ಲಿಸ್ಟಿಂಗ್ ಮಾಡಿದೆ. ಪ್ರತಿ ಷೇರಿಗೆ 118 ರೂಪಾಯಿಯಂತೆ ವಿತರಣೆ ಮಾಡಲಾಗಿತ್ತು. ಅದು ಶೇ 20ರಷ್ಟು ರಿಯಾಯಿತಿಯೊಂದಿಗೆ 94 ರೂಪಾಯಿಗೆ ಬಿಎಸ್ಇಯಲ್ಲಿ ಲಿಸ್ಟಿಂಗ್ ಆಗಿದೆ.
ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1197.86 ಪಾಯಿಂಟ್ಸ್ ಅಥವಾ ಶೇ 2.10ರಷ್ಟು ಇಳಿಕೆ ಕಂಡು, 55,813.88 ಪಾಯಿಂಟ್ಸ್ನೊಂದಿಗೆ ವ್ಯವಹರಿಸುತ್ತಿತ್ತು. ನಿಫ್ಟಿ ಸೂಚ್ಯಂಕವು 363.70 ಪಾಯಿಂಟ್ಸ್ ಅಥವಾ ಶೇ 2.14ರಷ್ಟು ಕುಸಿದು, 16,621.50 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಸಿಪ್ಲಾ ಶೇ 2.31 ಪವರ್ಗ್ರಿಡ್ ಕಾರ್ಪೊರೇಷನ್ ಶೇ 1.05 ವಿಪ್ರೊ ಶೇ 0.65 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 0.45 ಟಿಸಿಎಸ್ ಶೇ 0.42
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಬಜಾಜ್ ಫೈನಾನ್ಸ್ ಶೇ -3.93 ಟಾಟಾ ಸ್ಟೀಲ್ ಶೇ -3.84 ಹೀರೋ ಮೋಟೋಕಾರ್ಪ್ ಶೇ -3.80 ಎಸ್ಬಿಐ ಶೇ -3.66 ಬಜಾಜ್ ಫಿನ್ಸರ್ವ್ ಶೇ -3.64
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 11:14 am, Mon, 20 December 21