Stock market investors wealth: ಎರಡು ದಿನದಲ್ಲಿ 11.23 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಷೇರುಪೇಟೆ ಹೂಡಿಕೆದಾರರು
ಷೇರು ಮಾರುಕಟ್ಟೆ ಹೂಡಿಕೆದಾರರು ಎರಡು ದಿನದ ವಹಿವಾಟಿನಲ್ಲಿ 11.23 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಜಾಗತಿಕ ಒಮಿಕ್ರಾನ್ ಸೋಂಕು ಆರ್ಥಿಕ ಚೇತರಿಕೆಗೆ ಅಪಾಯ ಒಡ್ಡುವ ಆತಂಕದ ಹಿನ್ನೆಲೆಯಲ್ಲಿ ಷೇರುಗಳು ಸುಮಾರು ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದು, ಹೂಡಿಕೆದಾರರು ಎರಡು ದಿನಗಳಲ್ಲಿ 11,23,010.78 ಕೋಟಿ ರೂಪಾಯಿಗಳಷ್ಟು (11.23 ಲಕ್ಷ ಕೋಟಿ ರೂಪಾಯಿ) ನಷ್ಟ ಅನುಭವಿಸುವಂತಾಯಿತು. ಏಕೆಂದರೆ ಜಾಗತಿಕ ಮಾರಾಟದ ನಡುವೆ ದೇಶೀಯ ಷೇರು ಮಾರುಕಟ್ಟೆಯು ತೀವ್ರ ಹೊಡೆತ ಮುಂದುವರಿಸಿದೆ. ಒಮಿಕ್ರಾನ್ ಸುತ್ತ ಹೆಚ್ಚುತ್ತಿರುವ ಕಳವಳದಿಂದಾಗಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿಯಿತು. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,182.53 ಪಾಯಿಂಟ್‌ಗಳನ್ನು ಕುಸಿದು, 55,829.21 ಪಾಯಿಂಟ್ಸ್ಗೆ ಇಳಿದಿತ್ತು. ಶುಕ್ರವಾರದಂದು ಸೆನ್ಸೆಕ್ಸ್ 889.40 ಪಾಯಿಂಟ್‌ಗಳು ಅಥವಾ ಶೇ1.54ರಷ್ಟು ಕುಸಿದು, 57,011.74 ಪಾಯಿಂಟ್ಸ್ಗೆ ತಲುಪಿತ್ತು.
ಬಿಎಸ್‌ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಎರಡು ದಿನಗಳಲ್ಲಿ 11,23,010.78 ಕೋಟಿ ರೂಪಾಯಿ ಇಳಿಕೆ ಕಂಡು, 2,52,79,340.30 ಕೋಟಿಗೆ ತಲುಪಿದೆ. ದುರ್ಬಲ ಜಾಗತಿಕ ಟ್ರೆಂಡ್ ನಂತರ ಮಾರುಕಟ್ಟೆಗಳು ಭಾರಿ ಮಾರಾಟದ ಒತ್ತಡವನ್ನು ಅನುಭವಿಸಿದ ಕಾರಣ ಹೂಡಿಕೆದಾರರ ಸಂಪತ್ತು ಶುಕ್ರವಾರ 4.65 ಲಕ್ಷ ಕೋಟಿ ರೂಪಾಯಿಗಳಷ್ಟು ಕುಸಿಯಿತು. ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮುಂದುವರಿಸಿದರು. ತಜ್ಞರು ಹೇಳುವಂತೆ, “ವಿಶ್ವದಾದ್ಯಂತ ಹೆಚ್ಚುತ್ತಿರುವ ಒಮಿಕ್ರಾನ್ ಕೊರೊನಾ ಪ್ರಕರಣಗಳ ಮಧ್ಯೆ ಭಾರತೀಯ ಮಾನದಂಡಗಳು ಇಂದು ಕುಸಿತದಲ್ಲಿ ವಹಿವಾಟು ಆರಂಭಿಸಿತು. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ವಿದೇಶಿ ಹಣದ ನಿರಂತರ ನಿವ್ವಳ ಹೊರಹರಿವಿನೊಂದಿಗೆ ಟ್ರೇಡರ್ಗಳು ಬಹಳ ಎಚ್ಚರವಾಗಿದ್ದಾರೆ. ಇದುವರೆಗೆ ಡಿಸೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಗಳಿಂದ 17,696 ಕೋಟಿ ರೂಪಾಯಿ ಹೊರಹೋಗಿದೆ.”
ನಿರಂತರ ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಭಾವನೆಗಳ ಮೇಲೆ ತೂಗುತ್ತಿದೆ. ಸೆನ್ಸೆಕ್ಸ್ನಲ್ಲಿ ಬಜಾಜ್ ಫೈನಾನ್ಸ್ ಪ್ರಮುಖವಾಗಿ ನಷ್ಟ ಅನುಭವಿಸಿದ್ದು, ಸುಮಾರು ಶೇ 4ರಷ್ಟು ಕುಸಿದಿತ್ತು. ಆ ನಂತರ ಟಾಟಾ ಸ್ಟೀಲ್, ಎಸ್‌ಬಿಐ, ಎನ್‌ಟಿಪಿಸಿ, ಮಹೀಂದ್ರಾ ಅಂಡ್ ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್ ಇಳಿಕೆ ಕಂಡಿದ್ದರೆ, ಸನ್ ಫಾರ್ಮಾ ಏಕೈಕ ಲಾಭದಾಯಕವಾಗಿದೆ. ಹಿಂದಿನ ಸೆಷನ್‌ನಲ್ಲಿ, 30-ಷೇರುಗಳ ಗುಚ್ಛವಾದ ಬಿಎಸ್‌ಇ- ಸೆನ್ಸೆಕ್ಸ್ 889.40 ಪಾಯಿಂಟ್‌ಗಳು ಅಥವಾ ಶೇ 1.54ರಷ್ಟು ಕಡಿಮೆಯಾಗಿ 57,011.74ಕ್ಕೆ ಕೊನೆಗೊಂಡಿತ್ತು. ಅದೇ ರೀತಿ, ಎನ್‌ಎಸ್‌ಇ ನಿಫ್ಟಿ 263.20 ಪಾಯಿಂಟ್ ಅಥವಾ ಶೇ 1.53ರಷ್ಟು ಕುಸಿದು, 16,985.20ಕ್ಕೆ ತಲುಪಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ, ಏಕೆಂದರೆ ಶುಕ್ರವಾರ 2,069.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಮಾಹಿತಿಯ ಪ್ರಕಾರ ತಿಳಿಯುತ್ತದೆ. ಏರುತ್ತಿರುವ ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ಗಳ ಹಿಂಜರಿತ, ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು, ಎಫ್‌ಐಐಗಳ ನಿರಂತರ ಮಾರಾಟ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿನ ಬೆಳವಣಿಗೆಯ ವೇಗವು ಕಳೆದ ವಾರ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿವೆ ವಿಶ್ಲೇಷಕರು ಹೇಳುತ್ತಾರೆ.
“ಈ ನೆಗೆಟಿವ್ ಅಂಶಗಳು ಮುಂದುವರಿಯುತ್ತವೆ. ವಿಶೇಷವಾಗಿ ಎಫ್ಐಐಗಳು ಮಾರಾಟವನ್ನು ಮುಂದುವರಿಸಿದರೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿತದ ಬಗ್ಗೆ ಕಳವಳವನ್ನು ಉಂಟು ಮಾಡುತ್ತದೆ. ಆದರೆ ನೆಗೆಟಿವ್ ಭಾವನೆಗಳು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿಲ್ಲ. ಒಮಿಕ್ರಾನ್ ವೇರಿಯಂಟ್ ವೇಗವಾಗಿ ಹರಡುತ್ತಿದ್ದರೂ ಭಯಪಡುವಂತೆ ಇದೆ ಎಂಬುದು ಸಾಬೀತಾಗಿಲ್ಲ. ಅಲ್ಲದೆ, ಮೌಲ್ಯಮಾಪನಗಳು ಆಕರ್ಷಕವಾದಾಗ ಎಫ್‌ಐಐಗಳು ಶೀಘ್ರದಲ್ಲೇ ಖರೀದಿದಾರರಾಗಿ ಬದಲಾಗುತ್ತವೆ,” ಎಂದು ಅಭಿಪ್ರಾಯ ಪಡುತ್ತಾರೆ.
ಏಷ್ಯಾದ ಇತರೆಡೆಗಳಲ್ಲಿ, ಶಾಂಘೈ, ಹಾಂಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಧ್ಯದ ಅವಧಿ ಸೆಷನ್ ವ್ಯವಹಾರಗಳಲ್ಲಿ ಭಾರೀ ನಷ್ಟದೊಂದಿಗೆ ವಹಿವಾಟು ಮಾಡುತ್ತಿದ್ದವು. ಏಕೆಂದರೆ ಕೊವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಇರುವ ಕಳವಳಗಳು ಜಾಗತಿಕ ಭಾವನೆಯನ್ನು ಘಾಸಿಗೊಳಿಸಿವೆ. ಈ ಮಧ್ಯೆ, ಅಂತರರಾಷ್ಟ್ರೀಯ ತೈಲ ಬೆಂಚ್ಮಾರ್ಕ್ ಆದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ 2.45ರಷ್ಟು ಕುಸಿದು, 71.72 USDಗೆ ಇಳಿದಿದೆ.
Published On - 1:49 pm, Mon, 20 December 21