ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್​ಗಳಲ್ಲಿ ಸಖತ್ ಹೆಚ್ಚಳ

|

Updated on: Dec 23, 2024 | 5:39 PM

CPSEs show great growth in 2023-24: ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್​ಪ್ರೈಸಸ್ ಎನಿಸಿರುವ ಕೇಂದ್ರ ಸರ್ಕಾರಿ ಉದ್ದಿಮೆಗಳು ಖಾಸಗಿ ಕ್ಷೇತ್ರದ ಕಂಪನಿಗಳನ್ನೂ ಮೀರಿಸುವಂತೆ ಲಾಭ ಮಾಡುತ್ತಿವೆ. ವರದಿ ಪ್ರಕಾರ 2023-24ರಲ್ಲಿ 272 ಸಿಪಿಎಸ್​ಇಗಳ ಆದಾಯ 36.08 ಲಕ್ಷ ಕೋಟಿ ರೂ ಇದೆ. ನಿವ್ವಳ ಲಾಭ 3.22 ಲಕ್ಷ ಕೋಟಿ ರೂ ಇದೆ. 66 ಲಿಸ್ಟೆಡ್ ಸಿಪಿಎಸ್​ಇಗಳಿದ್ದು ಇವುಗಳ ಮಾರುಕಟ್ಟೆ ಬಂಡವಾಳವೂ ಸಖತ್ ಏರಿಕೆ ಆಗಿದೆ.

ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್​ಗಳಲ್ಲಿ ಸಖತ್ ಹೆಚ್ಚಳ
ಹೆಚ್​​ಎಎಲ್
Follow us on

ನವದೆಹಲಿ, ಡಿಸೆಂಬರ್ 23: ಕೇಂದ್ರೀಯ ಸಾರ್ವಜನಿಕ ವಲಯ ಉದ್ದಿಮೆಗಳು 2023-24ರ ಹಣಕಾಸು ವರ್ಷದಲ್ಲಿ ಭರ್ಜರಿ ಲಾಭ ಹೆಚ್ಚಳ ಕಂಡಿವೆ. 2022-23ರ ವರ್ಷದಲ್ಲಿ ನಿವ್ವಳ ಲಾಭದಲ್ಲಿ ಶೇ. 15ರಷ್ಟು ಇಳಿಕೆ ಕಂಡಿದ್ದ ಕೇಂದ್ರ ಸರ್ಕಾರಿ ಉದ್ದಿಮೆಗಳು 2023-24ರಲ್ಲಿ ಶೇ. 47ರಷ್ಟು ಏರಿಕೆ ಕಂಡಿವೆ. ಭಾರತದಲ್ಲಿ ಸದ್ಯ ಒಟ್ಟಾರೆ 272 ಕಾರ್ಯಶೀಲ ಸಿಪಿಎಸ್​ಇಗಳಿವೆ. 2022-23ರಲ್ಲಿ ಇವುಗಳು ಗಳಿಸಿದ ಒಟ್ಟಾರೆ ನಿವ್ವಳ ಲಾಭ 2.18 ಲಕ್ಷ ಕೋಟಿ ರೂ ಇತ್ತು. 2023-24ರಲ್ಲಿ ಇದು 3.22 ಲಕ್ಷ ಕೋಟಿ ರೂಗೆ ಏರಿಕೆ. ಆಗಿದೆ. ಈ ಉದ್ದಿಮೆಗಳಿಂದ ಸರ್ಕಾರದ ಖಜಾನೆಗೂ ಸಾಕಷ್ಟು ಸೇರ್ಪಡೆಯಾಗಲು ಸಹಾಯವಾಗಿದೆ. ಸಿಪಿಎಸ್​ಇಗಳಿಂದ ನಿವ್ವಳ ಲಾಭ ಹೆಚ್ಚಾದರೂ ಒಟ್ಟಾರೆ ಆದಾಯ ಶೇ. 4.7ರಷ್ಟು ಇಳಿಕೆ ಆಗಿ 36.08 ಲಕ್ಷ ಕೋಟಿ ರೂ ಮುಟ್ಟಿದೆ.

ಪೆಟ್ರೋಲಿಯಮ್ ಕ್ಷೇತ್ರದ ಸಿಪಿಎಸ್​ಇಗಳ ಲಾಭದಲ್ಲಿ ಗಣನೀಯ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಒಎನ್​ಜಿಸಿ ಸಂಸ್ಥೆ 2023-24ರಲ್ಲಿ ಗಳಿಸಿದ ನಿವ್ವಳ ಲಾಭ 40,526 ಕೋಟಿ ರೂ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಎನ್​ಜಿಸಿಯ ಲಾಭದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೂ ಕೂಡ ಇದು ಸರ್ಕಾರಿ ಉದ್ದಿಮೆಗಳ ಪೈಕಿ ಅತಿಹೆಚ್ಚು ಕಂಡ ಲಾಭ ಗಳಿಕೆ ಎನಿಸಿದೆ. ಮತ್ತೊಂದು ಪೆಟ್ರೋಲಿಯಂ ಸಂಸ್ಥೆಯಾದ ಇಂಡಿಯನ್ ಆಯಿಲ್​ನ ನಿವ್ವಳ ಲಾಭದಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ. 2023-24ರಲ್ಲಿ ಅದರ ಲಾಭ ಗಳಿಕೆ 39,619 ಕೋಟಿ ರೂ ಇದೆ.

ಇದನ್ನೂ ಓದಿ: 2024ರಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಳಮಳ ಮಧ್ಯೆಯೂ ಮಿಂಚಿನಂತೆ ಸಂಚರಿಸಿದ ಭಾರತದ ಆರ್ಥಿಕತೆ

ಕೇಂದ್ರೀಯ ಸರ್ಕಾರಿ ಉದ್ದಿಮೆಗಳಲ್ಲಿ ನಷ್ಟ ಕಂಡವೂ ಇವೆ. ಜಿಯೋ ಮತ್ತು ಏರ್ಟೆಲ್​ಗೆ ಸ್ಪರ್ಧೆ ಒಡ್ಡುತ್ತಿರುವ ಬಿಎಸ್ಸೆನ್ನೆಲ್ 5,371 ಕೋಟಿ ರೂನಷ್ಟು ನಷ್ಟ ಕಂಡಿದೆ. ರಾಷ್ಟ್ರೀಯ ಇಸ್ಪಾಟ್ ನಿಗಮ್ ಲಿ (ಆರ್​ಐಎನ್​ಎಲ್) 4,849 ಕೋಟಿ ರೂನಷ್ಟು ನಷ್ಟ ಕಂಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಭರಪೂರ ಡಿವಿಡೆಂಡ್ಸ್ ಕೊಟ್ಟ ಸಿಪಿಎಸ್​ಇಗಳು…

ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು 2023-24ರಲ್ಲಿ ನೀಡಿದ ಲಾಭಾಂಶದಲ್ಲಿ ಶೇ. 16.3ರಷ್ಟು ಹೆಚ್ಚಳ ಆಗಿದೆ. ಲಾಭಾಂಶದಲ್ಲಿ 1.05 ಲಕ್ಷ ಕೋಟಿ ರೂನಿಂದ 1.23 ಲಕ್ಷ ಕೋಟಿ ರೂ ಏರಿಕೆ ಆಗಿದೆ.

ಇದನ್ನೂ ಓದಿ: ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್​ಲೈನ್ ವಿಸ್ತರಣೆಗೆ ಆದೇಶ

ಇನ್ನು, 272 ಸಿಪಿಎಸ್​ಇಗಳ ಪೈಕಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವಂತಹ ಸಂಸ್ಥೆಗಳ ಸಂಖ್ಯೆ 66 ಇದೆ. ಈ 66 ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ಶೇ. 121ರಷ್ಟು ಹೆಚ್ಚಳವಾಗಿ 37.23 ಲಕ್ಷ ಕೋಟಿ ರೂ ಮುಟ್ಟಿದೆ. ಎನ್​ಟಿಪಿಸಿ, ಒಎನ್​ಜಿಸಿ, ಹೆಚ್​​ಎಎಲ್, ಕೋಲ್ ಇಂಡಿಯಾ, ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆಗಳಿಂದ ಅತಿಹೆಚ್ಚು ಡಿವಿಡೆಂಡ್ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ