ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್ಲೈನ್ ವಿಸ್ತರಣೆಗೆ ಆದೇಶ
Bombay HC gives relief to tax payers: ವಿಳಂಬವಾಗಿ ಐಟಿಆರ್ ಸಲ್ಲಿಸುತ್ತಿರುವವರು, ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸುತ್ತಿರುವವರು ಡಿಸೆಂಬರ್ 31ರವರೆಗೂ ಕಾಲಾವಕಾಶ ಹೊಂದಿದ್ದಾರೆ. ಆದರೆ, ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಪಡೆಯುವ ಅವಕಾಶವು ಅಪ್ಡೇಟೆಡ್ ಸಾಫ್ಟ್ವೇರ್ನಲ್ಲಿ ಇಲ್ಲವಾಗಿದೆ. ಈ ಕಾರಣಕ್ಕೆ ಬಾಂಬೆ ಹೈಕೋರ್ಟ್ ಐಟಿಆರ್ ಸಲ್ಲಿಕೆಯ ಡೆಡ್ಲೈನ್ ಅನ್ನು ಕನಿಷ್ಠ ಜನವರಿ 15ರವರೆಗಾದರೂ ವಿಸ್ತರಿಸಬೇಕೆಂದು ಸಿಬಿಡಿಟಿಗೆ ಆದೇಶಿಸಿದೆ.
ಮುಂಬೈ, ಡಿಸೆಂಬರ್ 23: ವಿಳಂಬದ ಮತ್ತು ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರಂದು ಇದ್ದ ಡೆಡ್ಲೈನ್ ಅನ್ನು ವಿಸ್ತರಿಸುವಂತೆ ಬಾಂಬೆ ಹೈಕೋರ್ಟ್ನಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನಿರ್ದೇಶಿಸಲ್ಪಟ್ಟಿದೆ. 2024-25ರ ಮೌಲ್ಯಮಾಪನ ವರ್ಷದ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಗಡುವು ಇದೆ. ಆದರೆ, ಐಟಿಆರ್ ಯುಟಿಲಿಟಿಯಲ್ಲಿನ ಬದಲಾದ ಕ್ರಮಗಳ ಸಮಸ್ಯೆಯಿಂದಾಗಿ ಡೆಡ್ಲೈನ್ ವಿಸ್ತರಿಸುವಂತೆ ಐಪಿಎಲ್ವೊಂದು ಸಲ್ಲಿಕೆಯಾಗಿತ್ತು. ಟ್ಯಾಕ್ಸ್ ಕನ್ಸಲ್ಟೆಂಟ್ಸ್ ಚೇಂಬರ್ನಿಂದ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಐಟಿಆರ್ ಸಲ್ಲಿಕೆಯ ಗಡುವನ್ನು ಕನಿಷ್ಠ ಜನವರಿ 15ರವರೆಗಾದರೂ ವಿಸ್ತರಿಸುವಂತೆ ಸಿಬಿಡಿಟಿಗೆ ಸೂಚಿಸಿದೆ.
ರಿಬೇಟ್ ನಿರಾಕರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್
ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ಟ್ಯಾಕ್ಸ್ ರಿಬೇಟ್ ಅವಕಾಶ ಸಿಗುತ್ತದೆ. ಆದರೆ, ರಿಟರನ್ ಫೈಲಿಂಗ್ ಮಾಡಲು ಬಳಸುವ ಯುಟಿಲಿಟಿ ಸಾಫ್ಟ್ವೇರ್ನಲ್ಲಿ ಮಾಡಲಾಗಿರುವ ಬದಲಾವಣೆಗಳಿಂದಾಗಿ ಈ ರಿಬೇಟ್ ಅವಕಾಶ ಸಿಗುತ್ತಿಲ್ಲ. 2024ರ ಜುಲೈ 5ರಂದು ಸಾಫ್ಟ್ವೇರ್ ಅಪ್ಡೇಟ್ ಆದಾಗಿನಿಂದ ಈ ಸಮಸ್ಯೆ ಕಾಣಿಸಿದೆ. ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಕ್ಲೇಮ್ ಮಾಡುವ ಅವಕಾಶವನ್ನು ಇದು ತೋರಿಸುತ್ತಿಲ್ಲ. ಹೀಗಾಗಿ, ಟ್ಯಾಕ್ಸ್ ಕನ್ಸಲ್ಟೆಂಟ್ಗಳ ಸಂಘಟನೆಯು ಬಾಂಬೆ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿತ್ತು.
ಇದನ್ನೂ ಓದಿ: ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್
ಐಟಿ ಕಾಯ್ದೆಯ 87ಎ ಸೆಕ್ಷನ್ನ ಅಡಿಯಲ್ಲಿ ಸಿಗುವ ರಿಬೇಟ್ ಬಹಳ ಮುಖ್ಯ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 7 ಲಕ್ಷ ರೂವರೆಗಿನ ಆದಾಯದ ಮಿತಿಯಲ್ಲಿದ್ದರೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಅಂದರೆ ತೆರಿಗೆ ಪಾವತಿಸು ಅವಶ್ಯಕತೆ ಇರುವುದಿಲ್ಲ. ಈ ರಿಬೇಟ್ ಇಲ್ಲವೆಂದರೆ ಟ್ಯಾಕ್ಸ್ ಸ್ಲ್ಯಾಬ್ ದರದ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ. ಇದರಿಂದ ಮಧ್ಯಮ ಆದಾಯ ಮತ್ತು ಕೆಳ ಮಧ್ಯಮ ಆದಾಯ ಗುಂಪಿನ ಜನರಿಗೆ ತೆರಿಗೆ ಹೊರೆ ಬೀಳುತ್ತದೆ.
ಬಾಂಬೆ ಹೈಕೋರ್ಟ್ ಈ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ. ಯಾವುದೋ ತಾಂತ್ರಿಕ ದೋಷದಿಂದ ಈ ಪ್ರಮುಖ ತೆರಿಗೆ ಹಕ್ಕನ್ನು ನಿರಾಕರಿಸಲಾಗುವುದು ಸರಿಯಲ್ಲ ಎಂದಿರುವ ಉಚ್ಚ ನ್ಯಾಯಾಲಯ, ವಿಳಂಬಿತ ಐಟಿಆರ್ ಸಲ್ಲಿಕೆಯ ಡೆಡ್ಲೈನ್ ಅನ್ನು ವಿಸ್ತರಿಸಬೇಕೆಂದು ಆದೇಶಿಸಿದೆ.
ಇದನ್ನೂ ಓದಿ: ಸಾಫ್ಟ್ಪವರ್ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ವಿಳಂಬವಾಗಿ ರಿಟನ್ಸ್ ಸಲ್ಲಿಸುತ್ತಿರುವವರಿಗೆ ದಂಡ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಆ ವೇಳೆಗೆ ಐಟಿಆರ್ ಸಲ್ಲಿಕೆ ಮಾಡಲಾಗದವರಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಆದರೆ, 5,000 ರೂ ದಂಡ ಕಟ್ಟಬೇಕಾಗುತ್ದೆ. ಐದು ಲಕ್ಷ ರೂಗಿಂತ ಕಡಿಮೆ ಟ್ಯಾಕ್ಸಬಲ್ ಇನ್ಕಮ್ ಇರುವವರು 1,000 ರೂ ಮಾತ್ರವೇ ದಂಡ ಕಟ್ಟಬಹುದು. ಜುಲೈ 31ಕ್ಕೆ ಮುನ್ನವೇ ಐಟಿಆರ್ ಸಲ್ಲಿಸಿ, ಬಳಿಕ ಪರಿಷ್ಕೃತ ರಿಟರ್ನ್ ಸಲ್ಲಿಸುತ್ತಿರುವವರು ದಂಡ ಪಾವತಿಸುವ ಪ್ರಮೇಯ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ