ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್ಗಳಲ್ಲಿ ಸಖತ್ ಹೆಚ್ಚಳ
CPSEs show great growth in 2023-24: ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್ ಎನಿಸಿರುವ ಕೇಂದ್ರ ಸರ್ಕಾರಿ ಉದ್ದಿಮೆಗಳು ಖಾಸಗಿ ಕ್ಷೇತ್ರದ ಕಂಪನಿಗಳನ್ನೂ ಮೀರಿಸುವಂತೆ ಲಾಭ ಮಾಡುತ್ತಿವೆ. ವರದಿ ಪ್ರಕಾರ 2023-24ರಲ್ಲಿ 272 ಸಿಪಿಎಸ್ಇಗಳ ಆದಾಯ 36.08 ಲಕ್ಷ ಕೋಟಿ ರೂ ಇದೆ. ನಿವ್ವಳ ಲಾಭ 3.22 ಲಕ್ಷ ಕೋಟಿ ರೂ ಇದೆ. 66 ಲಿಸ್ಟೆಡ್ ಸಿಪಿಎಸ್ಇಗಳಿದ್ದು ಇವುಗಳ ಮಾರುಕಟ್ಟೆ ಬಂಡವಾಳವೂ ಸಖತ್ ಏರಿಕೆ ಆಗಿದೆ.
ನವದೆಹಲಿ, ಡಿಸೆಂಬರ್ 23: ಕೇಂದ್ರೀಯ ಸಾರ್ವಜನಿಕ ವಲಯ ಉದ್ದಿಮೆಗಳು 2023-24ರ ಹಣಕಾಸು ವರ್ಷದಲ್ಲಿ ಭರ್ಜರಿ ಲಾಭ ಹೆಚ್ಚಳ ಕಂಡಿವೆ. 2022-23ರ ವರ್ಷದಲ್ಲಿ ನಿವ್ವಳ ಲಾಭದಲ್ಲಿ ಶೇ. 15ರಷ್ಟು ಇಳಿಕೆ ಕಂಡಿದ್ದ ಕೇಂದ್ರ ಸರ್ಕಾರಿ ಉದ್ದಿಮೆಗಳು 2023-24ರಲ್ಲಿ ಶೇ. 47ರಷ್ಟು ಏರಿಕೆ ಕಂಡಿವೆ. ಭಾರತದಲ್ಲಿ ಸದ್ಯ ಒಟ್ಟಾರೆ 272 ಕಾರ್ಯಶೀಲ ಸಿಪಿಎಸ್ಇಗಳಿವೆ. 2022-23ರಲ್ಲಿ ಇವುಗಳು ಗಳಿಸಿದ ಒಟ್ಟಾರೆ ನಿವ್ವಳ ಲಾಭ 2.18 ಲಕ್ಷ ಕೋಟಿ ರೂ ಇತ್ತು. 2023-24ರಲ್ಲಿ ಇದು 3.22 ಲಕ್ಷ ಕೋಟಿ ರೂಗೆ ಏರಿಕೆ. ಆಗಿದೆ. ಈ ಉದ್ದಿಮೆಗಳಿಂದ ಸರ್ಕಾರದ ಖಜಾನೆಗೂ ಸಾಕಷ್ಟು ಸೇರ್ಪಡೆಯಾಗಲು ಸಹಾಯವಾಗಿದೆ. ಸಿಪಿಎಸ್ಇಗಳಿಂದ ನಿವ್ವಳ ಲಾಭ ಹೆಚ್ಚಾದರೂ ಒಟ್ಟಾರೆ ಆದಾಯ ಶೇ. 4.7ರಷ್ಟು ಇಳಿಕೆ ಆಗಿ 36.08 ಲಕ್ಷ ಕೋಟಿ ರೂ ಮುಟ್ಟಿದೆ.
ಪೆಟ್ರೋಲಿಯಮ್ ಕ್ಷೇತ್ರದ ಸಿಪಿಎಸ್ಇಗಳ ಲಾಭದಲ್ಲಿ ಗಣನೀಯ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಒಎನ್ಜಿಸಿ ಸಂಸ್ಥೆ 2023-24ರಲ್ಲಿ ಗಳಿಸಿದ ನಿವ್ವಳ ಲಾಭ 40,526 ಕೋಟಿ ರೂ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಎನ್ಜಿಸಿಯ ಲಾಭದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೂ ಕೂಡ ಇದು ಸರ್ಕಾರಿ ಉದ್ದಿಮೆಗಳ ಪೈಕಿ ಅತಿಹೆಚ್ಚು ಕಂಡ ಲಾಭ ಗಳಿಕೆ ಎನಿಸಿದೆ. ಮತ್ತೊಂದು ಪೆಟ್ರೋಲಿಯಂ ಸಂಸ್ಥೆಯಾದ ಇಂಡಿಯನ್ ಆಯಿಲ್ನ ನಿವ್ವಳ ಲಾಭದಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ. 2023-24ರಲ್ಲಿ ಅದರ ಲಾಭ ಗಳಿಕೆ 39,619 ಕೋಟಿ ರೂ ಇದೆ.
ಇದನ್ನೂ ಓದಿ: 2024ರಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಳಮಳ ಮಧ್ಯೆಯೂ ಮಿಂಚಿನಂತೆ ಸಂಚರಿಸಿದ ಭಾರತದ ಆರ್ಥಿಕತೆ
ಕೇಂದ್ರೀಯ ಸರ್ಕಾರಿ ಉದ್ದಿಮೆಗಳಲ್ಲಿ ನಷ್ಟ ಕಂಡವೂ ಇವೆ. ಜಿಯೋ ಮತ್ತು ಏರ್ಟೆಲ್ಗೆ ಸ್ಪರ್ಧೆ ಒಡ್ಡುತ್ತಿರುವ ಬಿಎಸ್ಸೆನ್ನೆಲ್ 5,371 ಕೋಟಿ ರೂನಷ್ಟು ನಷ್ಟ ಕಂಡಿದೆ. ರಾಷ್ಟ್ರೀಯ ಇಸ್ಪಾಟ್ ನಿಗಮ್ ಲಿ (ಆರ್ಐಎನ್ಎಲ್) 4,849 ಕೋಟಿ ರೂನಷ್ಟು ನಷ್ಟ ಕಂಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಭರಪೂರ ಡಿವಿಡೆಂಡ್ಸ್ ಕೊಟ್ಟ ಸಿಪಿಎಸ್ಇಗಳು…
ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು 2023-24ರಲ್ಲಿ ನೀಡಿದ ಲಾಭಾಂಶದಲ್ಲಿ ಶೇ. 16.3ರಷ್ಟು ಹೆಚ್ಚಳ ಆಗಿದೆ. ಲಾಭಾಂಶದಲ್ಲಿ 1.05 ಲಕ್ಷ ಕೋಟಿ ರೂನಿಂದ 1.23 ಲಕ್ಷ ಕೋಟಿ ರೂ ಏರಿಕೆ ಆಗಿದೆ.
ಇದನ್ನೂ ಓದಿ: ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್ಲೈನ್ ವಿಸ್ತರಣೆಗೆ ಆದೇಶ
ಇನ್ನು, 272 ಸಿಪಿಎಸ್ಇಗಳ ಪೈಕಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವಂತಹ ಸಂಸ್ಥೆಗಳ ಸಂಖ್ಯೆ 66 ಇದೆ. ಈ 66 ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ಶೇ. 121ರಷ್ಟು ಹೆಚ್ಚಳವಾಗಿ 37.23 ಲಕ್ಷ ಕೋಟಿ ರೂ ಮುಟ್ಟಿದೆ. ಎನ್ಟಿಪಿಸಿ, ಒಎನ್ಜಿಸಿ, ಹೆಚ್ಎಎಲ್, ಕೋಲ್ ಇಂಡಿಯಾ, ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆಗಳಿಂದ ಅತಿಹೆಚ್ಚು ಡಿವಿಡೆಂಡ್ ಸಿಕ್ಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ