ನವದೆಹಲಿ: ಬಂಡವಾಳ ತೆರಿಗೆ ಅಥವಾ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gains Tax) ನಿಯಮದಲ್ಲಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಬದಲಾವಣೆ ತರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಸರಳೀಕರಣಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತೆರಿಗೆ ದರವನ್ನೂ (Tax Rate) ಪರಿಷ್ಕರಿಸುವ ಸಾಧ್ಯತೆ ಇದೆ. ಸದ್ಯ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ನಿಯಮಗಳು ಸ್ವಲ್ಪ ಸಂಕೀರ್ಣವಾಗಿದೆ. ಇದನ್ನು ಸರಳಗೊಳಿಸಿ ತರ್ಕಬದ್ಧಗೊಳಿಸಲು ಸರ್ಕಾರ ಒಲವು ಹೊಂದಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ನಿಯಮಗಳಲ್ಲಿ ಬದಲಾವಣೆಗೆ ಸಂಬಂಧಿಸಿ ಪರಿಶೀಲನೆ ನಡೆಸಲು ಸರ್ಕಾರ ರಚಿಸಿದ್ದ ಕಾರ್ಯಪಡೆಯು 2019ರಲ್ಲಿ ಶಿಫಾರಸು ಮಾಡಿದ್ದ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ವಿಮರ್ಶೆ ನಡೆಸುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯದ ನಿಯಮಗಳ ಪ್ರಕಾರ ಈಕ್ವಿಟಿಗಳು, ಪ್ರಿಫರೆನ್ಸ್ ಷೇರುಗಳು, ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ಗಳು, ಝೀರೋ ಕೂಪನ್ ಬಾಂಡ್ಗಳು ಹಾಗೂ ಯುಟಿಐ ಘಟಕಗಳನ್ನು ಸುಮಾರು 12 ತಿಂಗಳ ವರೆಗೂ ಹೊಂದಿದ್ದರೆ ದೀರ್ಘಾವಧಿಯ ಸ್ವತ್ತುಗಳೆಂದು ಪರಿಗಣಿಸಲಾಗುತ್ತದೆ. ಸಾಲ ಆಧಾರಿತ ಮ್ಯೂಚುವಲ್ ಫಂಡ್ಗಳು ಮತ್ತು ಆಭರಣಗಳನ್ನು 36 ತಿಂಗಳವರೆಗೂ ಹೊಂದಿದ್ದರೆ ದೀರ್ಘಾವಧಿಯ ಸ್ವತ್ತುಗಳೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮತ್ತೊಂದೆಡೆ, ರಿಯಲ್ ಎಸ್ಟೇಟ್ ಅಥವಾ ಸ್ಥಿರಾಸ್ತಿಗಳನ್ನು 24 ತಿಂಗಳ ವರೆಗೆ ಹೊಂದಿದ್ದರೆ ದೀರ್ಘಾವಧಿಯ ಸ್ವತ್ತುಗಳೆಂದು ಪರಿಗಣಿಸಲಾಗುತ್ತದೆ.
ಕಾರ್ಯಪಡೆ ಮಾಡಿದ್ದ ಶಿಫಾರಸುಗಳೇನು?
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಮಾಜಿ ಸದಸ್ಯ ಅಖಿಲೇಶ್ ರಂಜನ್ ನೇತೃತ್ವದ ಕಾರ್ಯಪಡೆ ಸ್ವತ್ತುಗಳನ್ನು ಪರಿಗಣಿಸುವ ಬಗ್ಗೆ ಕೆಲವು ಮಾನದಂಡಗಳನ್ನು ಶಿಫಾರಸು ಮಾಡಿತ್ತು. ಸ್ವತ್ತುಗಳನ್ನು ಈಕ್ವಿಟಿ, ನಾನ್-ಈಕ್ವಿಟಿ ಹಣಕಾಸು ಸ್ವತ್ತುಗಳು ಮತ್ತು ಇತರ ಆಸ್ತಿಗಳೆಂದು ಮೂರು ವಿಭಾಗಗಳಾಗಿ ಪರಿಗಣಿಸಬೇಕು ಎಂದು ಕಾರ್ಯಪಡೆ ಶಿಫಾರಸು ಮಾಡಿತ್ತು. ಸದ್ಯ ಸಾಲದ ಫಂಡ್ಗಳು ಮತ್ತು ರಿಯಕಲ್ ಎಸ್ಟೇಟ್ ಆಧಾರದಲ್ಲಿ ಸ್ವತ್ತುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅದು ತಿಳಿಸಿತ್ತು.
ಇದನ್ನೂ ಓದಿ: New ITR Form: ಏಕರೂಪದ ಐಟಿಆರ್ ಅರ್ಜಿ; ಪ್ರಯೋಜನಗಳು ಇಲ್ಲಿವೆ ನೋಡಿ
12 ತಿಂಗಳವರೆಗೆ ಬಳಿ ಇದ್ದ ಈಕ್ವಿಟಿಗಳ ಮಾರಾಟಕ್ಕೆ ಶೇಕಡಾ 10ರ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ವಿಧಿಸುವಂತೆ ಕಾರ್ಯಪಡೆ ಶಿಫಾರಸು ಮಾಡಿತ್ತು. 12 ತಿಂಗಳಿಗಿಂತ ಕಡಿಮೆ ಅವಧಿಗೆ ಇಟ್ಟುಕೊಂಡಿದ್ದ ಈಕ್ವಿಟಿಗಳನ್ನು ಮಾರಾಟ ಮಾಡಿದರೆ ಶೇಕಡಾ 15ರ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ವಿಧಿಸುವಂತೆ ಸಲಹೆ ನೀಡಿತ್ತು.
ಆದಾಗ್ಯೂ, ನಾನ್ ಈಕ್ವಿಟಿ ಹಣಕಾಸು ಸ್ವತ್ತುಗಳ ದೀರ್ಘಾವಧಿ ಗಳಿಕೆಗೆ ಶೇಕಡಾ 20ರ ತೆರಿಗೆ ವಿಧಿಸುಚವಂತೆ ಶಿಫಾರಸು ಮಾಡಿತ್ತು. ಇತರ ಆಸ್ತಿಗಳಿಗೆ 36 ತಿಂಗಳವರೆಗೆ ಇಟ್ಟುಕೊಂಡು ಮಾರಾಟ ಮಾಡಿದರೆ ಶೇಕಡಾ 20ರ ತೆರಿಗೆ ವಿಧಿಸುವಂಗತೆಯೂ ಸಲಹೆ ನೀಡಿತ್ತು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಉಲ್ಲೇಖಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Thu, 10 November 22