ರಾಜ್ಯಗಳಿಗೆ ಅಕ್ಟೋಬರ್​ನ ತೆರಿಗೆ ಪಾಲು ಹಂಚಿದ ಕೇಂದ್ರ; ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

|

Updated on: Oct 11, 2024 | 11:33 AM

Tax devolution to state on October 2024: ಕೇಂದ್ರ ಸರ್ಕಾರ ಅಕ್ಟೋಬರ್ 10ರಂದು ವಿವಿಧ ರಾಜ್ಯಗಳಿಗೆ ಒಟ್ಟು 1,78,173 ಕೋಟಿ ರೂ ತೆರಿಗೆ ಪಾಲು ಹಂಚಿಕೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 6,498 ಕೋಟಿ ರೂ ಸಿಕ್ಕಿದೆ. ಉತ್ತರಪ್ರದೇಶಕ್ಕೆ 31,000 ಕೋಟಿ ರೂಗೂ ಅಧಿಕ ಮೊತ್ತ ಸಿಕ್ಕಿದ್ದು, ಅತಿಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯವೆನಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಸರ್ಕಾರ ಈ ಹಂಚಿಕೆ ಮಾಡುತ್ತದೆ.

ರಾಜ್ಯಗಳಿಗೆ ಅಕ್ಟೋಬರ್​ನ ತೆರಿಗೆ ಪಾಲು ಹಂಚಿದ ಕೇಂದ್ರ; ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?
ಜಿಎಸ್​ಟಿ
Follow us on

ನವದೆಹಲಿ, ಅಕ್ಟೋಬರ್ 11: ಕೇಂದ್ರ ಸರ್ಕಾರ ತನಗೆ ಸಂದಾಯವಾಗಿ ಜಿಎಸ್​ಟಿ ತೆರಿಗೆಯಲ್ಲಿ 1,78,173 ಕೋಟಿ ರೂ ಮೊತ್ತವನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಹಬ್ಬದ ಸೀಸನ್ ಇರುವುದರಿಂದ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲು ನೆರವಾಗಲು ಕೇಂದ್ರ ಸರ್ಕಾರ ಮುಂಗಡವಾಗಿ ಒಂದು ಕಂತನ್ನು ಹೆಚ್ಚುವರಿಯಾಗಿ ನೀಡಿದೆ. ಇದರಿಂದಾಗಿ ಈ ಬಾರಿ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲು ಎರಡು ಪಟ್ಟು ಹೆಚ್ಚಿದೆ. ತೆರಿಗೆ ಹಂಚಿಕೆಯಲ್ಲಿ ಉತ್ತರಪ್ರದೇಶಕ್ಕೆ ಸಿಂಹಪಾಲು ಮುಂದುವರಿದಿದೆ. 1.78 ಲಕ್ಷ ಕೋಟಿ ರೂ ಪೈಕಿ ಉತ್ತರಪ್ರದೇಶಕ್ಕೆ 31,962 ಕೋಟಿ ರೂ ಸಿಕ್ಕಿದೆ. ಮಹಾರಾಷ್ಟ್ರ ಬಿಟ್ಟರೆ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ಕರ್ನಾಟಕವು ತೆರಿಗೆ ಹಂಚಿಕೆ ಪ್ರಮಾಣದಲ್ಲಿ 10ನೇ ಸ್ಥಾನದಲ್ಲಿದೆ. ತಮಿಳುನಾಡು, ಆಂಧ್ರಪ್ರದೇಶಗಳಿಗೆ ಕರ್ನಾಟಕಕ್ಕಿಂತಲೂ ಹೆಚ್ಚು ತೆರಿಗೆ ಹಂಚಿಕೆ ಆಗಿದೆ.

ಕೇಂದ್ರ ಸರ್ಕಾರ 2024-25ರ ಹಣಕಾಸು ವರ್ಷಕ್ಕೆ 12.20 ಲಕ್ಷ ಕೋಟಿ ರೂ ತೆರಿಗೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. 89,086 ರೂಗಳ 14 ಕಂತುಗಳಲ್ಲಿ ಈ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ.

2024ರ ಅಕ್ಟೋಬರ್​ನಲ್ಲಿ ರಾಜ್ಯಗಳಿಗೆ ಕೇಂದ್ರ ಹಂಚಿಕೆ ಮಾಡಿದ ತೆರಿಗೆ ಪಾಲು

ಒಟ್ಟು ತೆರಿಗೆ ಹಂಚಿಕೆ: 1,78,173 ಕೋಟಿ ರೂ

  1. ಉತ್ತರಪ್ರದೇಶ: 31,962 ಕೋಟಿ ರೂ
  2. ಬಿಹಾರ: 17,921 ಕೋಟಿ ರೂ
  3. ಮಧ್ಯಪ್ರದೇಶ: 13,987 ಕೋಟಿ ರೂ
  4. ಪಶ್ಚಿಮ ಬಂಗಾಳ: 13,404 ಕೋಟಿ ರೂ
  5. ಮಹಾರಾಷ್ಟ್ರ: 11,255 ಕೋಟಿ ರೂ
  6. ರಾಜಸ್ಥಾನ: 10,737 ಕೋಟಿ ರೂ
  7. ಒಡಿಶಾ: 8,068 ಕೋಟಿ ರೂ
  8. ತಮಿಳುನಾಡು: 7,268 ಕೋಟಿ ರೂ
  9. ಆಂಧ್ರಪ್ರದೇಶ: 7,211 ಕೋಟಿ ರೂ
  10. ಕರ್ನಾಟಕ: 6,498 ಕೋಟಿ ರೂ
  11. ಗುಜರಾತ್: 6,197 ಕೋಟಿ ರೂ
  12. ಛತ್ತೀಸ್​ಗಡ: 6,070 ಕೋಟಿ ರೂ
  13. ಜಾರ್ಖಂಡ್: 5,892 ಕೋಟಿ ರೂ
  14. ಅಸ್ಸಾಂ: 5,573 ಕೋಟಿ ರೂ
  15. ತೆಲಂಗಾಣ: 3,745 ಕೋಟಿ ರೂ
  16. ಕೇರಳ: 3,430 ಕೋಟಿ ರೂ
  17. ಪಂಜಾಬ್: 3,220 ಕೋಟಿ ರೂ
  18. ಅರುಣಾಚಲಪ್ರದೇಶ: 3,131 ಕೋಟಿ ರೂ
  19. ಉತ್ತರಾಖಂಡ್: 1,992 ಕೋಟಿ ರೂ
  20. ಹರ್ಯಾಣ: 1,947 ಕೋಟಿ ರೂ
  21. ಹಿಮಾಚಲಪ್ರದೇಶ: 1,479 ಕೋಟಿ ರೂ
  22. ಮೇಘಾಲಯ: 1,367 ಕೋಟಿ ರೂ
  23. ಮಣಿಪುರ್: 1,276 ಕೋಟಿ ರೂ
  24. ತ್ರಿಪುರ: 1,261 ಕೋಟಿ ರೂ
  25. ನಾಗಾಲ್ಯಾಂಡ್: 1,014 ಕೋಟಿ ರೂ
  26. ಮಿಝೋರಾಂ: 891 ಕೋಟಿ ರೂ
  27. ಸಿಕ್ಕಿಂ: 691 ಕೋಟಿ ರೂ
  28. ಗೋವಾ: 688 ಕೋಟಿ ರೂ

ಇದನ್ನೂ ಓದಿ: ಅಂಬಾನಿ ಸಾಮ್ರಾಜ್ಯಕ್ಕಿಂತಲೂ ಟಾಟಾ ಗ್ರೂಪ್​ನದ್ದು ಹೆಚ್ಚು ಮಾರುಕಟ್ಟೆ ಬಂಡವಾಳ; ರತನ್ ಟಾಟಾ ಚಮತ್ಕಾರ

ಹಣಕಾಸು ಆಯೋಗದ ಶಿಫಾರಸು ಪ್ರಕಾರ ಹಂಚಿಕೆ

ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಶಿಫಾರಸು ಪ್ರಕಾರ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡುತ್ತದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ 2026ರ ಮಾರ್ಚ್ ತಿಂಗಳವರೆಗೂ ತೆರಿಗೆ ಹಂಚಿಕೆ ಆಗುತ್ತದೆ. ಅದಾದ ಬಳಿಕ, ಅಂದರೆ 2026ರ ಏಪ್ರಿಲ್​ನಿಂದ 16ನೇ ಹಣಕಾಸು ಆಯೋಗದ ಶಿಫಾರಸುಗಳು ಜಾರಿಗೆ ಬರುತ್ತದೆ. ಸರ್ಕಾರ ಈಗಾಗಲೇ 16ನೇ ಹಣಕಾಸು ಆಯೋಗವನ್ನು ರಚಿಸಿದ. ಅದು ತನ್ನ ಶಿಫಾರಸುಗಳನ್ನು 2025ರ ಅಕ್ಟೋಬರ್ 31ರ ಒಳಗಾಗಿ ಸಲ್ಲಿಸಬೇಕಾಗುತ್ತದೆ.

15ನೇ ಹಣಕಾಸು ಆಯೋಗದ ತೆರಿಗೆ ಹಂಚಿಕೆ ಸೂತ್ರ ಹೀಗಿದೆ…

ರಾಜ್ಯಗಳ ಆದಾಯ, ಜನಸಂಖ್ಯೆ, ವಿಸ್ತೀರ್ಣ, ತೆರಿಗೆ ಸಂಗ್ರಹ ಹೀಗೆ ಬೇರೆ ಬೇರೆ ಅಂಶಗಳನ್ನು ನಿರ್ದಿಷ್ಟ ಆದ್ಯತಾನುಸಾರ ಪರಿಗಣಿಸಿ ತೆರಿಗೆ ಹಂಚಿಕೆಯ ಸೂತ್ರವನ್ನು ಮುಂದಿಡುತ್ತದೆ ಹಣಕಾಸು ಆಯೋಗ. 15ನೇ ಹಣಕಾಸು ಆಯೋಗ ಯಾವ್ಯಾವ ಅಂಶಗಳನ್ನು ಪರಿಗಣಿಸಿದೆ, ಮತ್ತು ಅವುಗಳಿಗೆ ಎಷ್ಟು ಆದ್ಯತೆ ಕೊಟ್ಟಿದೆ ಎಂಬ ವಿವರ ಇಲ್ಲಿದೆ:

  1. ಆದಾಯ ಅಂತರ: ಶೇ. 45
  2. ಪ್ರದೇಶದ ವಿಸ್ತೀರ್ಣತೆ: ಶೇ. 15
  3. ಜನಸಂಖ್ಯೆ: ಶೇ. 15
  4. ಜನಸಂಖ್ಯಾ ನಿಯಂತ್ರಣ ಪ್ರಯತ್ನ: ಶೇ. 12.5
  5. ಅರಣ್ಯ ಮತ್ತು ಪರಿಸರ: ಶೇ. 10
  6. ತೆರಿಗೆ ಮತ್ತು ಹಣಕಾಸು ಪ್ರಯತ್ನ: ಶೇ. 2.5

ಇದನ್ನೂ ಓದಿ: ರತನ್ ನಂತರ ಟಾಟಾ ಗ್ರೂಪ್ ವಾರಸುದಾರರು ಯಾರು? ಮಾಯಾ, ಲಿಯಾ, ನೆವಿಲ್ಲೆ ಟಾಟಾ ಪೈಕಿ ಯಾರಿಗೆ ಸಿಗುತ್ತೆ ಮುಂದಾಳತ್ವ?

ಇಲ್ಲಿ ಇನ್ಕಮ್ ಡಿಸ್ಟೆನ್ಸ್ ಅಥವಾ ಆದಾಯ ಅಂತರ ಎಂದರೆ ಇಡೀ ದೇಶದ ಒಟ್ಟಾರೆ ಸರಾಸರಿ ತಲಾದಾಯಕ್ಕೆ ಹೋಲಿಸಿದರೆ ಒಂದು ರಾಜ್ಯದ ತಲಾದಾಯ ಎಷ್ಟಿದೆ ಎನ್ನುವುದು. ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಪ್ರಮುಖ ರಾಜ್ಯಗಳು ಅಸಮಾಧಾನಗೊಂಡಿವೆ. ತಮ್ಮ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ಅವುಗಳ ವಾದ. ತೆರಿಗೆ ಹಂಚಿಕೆ ಸೂತ್ರದಲ್ಲಿ ಇಡಲಾಗಿರುವ ಮಾನದಂಡ ಮತ್ತು ಆದ್ಯತೆಗಳನ್ನು ಬದಲಿಸಬೇಕು ಎಂಬುದು ಈ ರಾಜ್ಯಗಳ ಒತ್ತಾಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ