ರತನ್ ನಂತರ ಟಾಟಾ ಗ್ರೂಪ್ ವಾರಸುದಾರರು ಯಾರು? ಮಾಯಾ, ಲಿಯಾ, ನೆವಿಲ್ಲೆ ಟಾಟಾ ಪೈಕಿ ಯಾರಿಗೆ ಸಿಗುತ್ತೆ ಮುಂದಾಳತ್ವ?
Tata Group successors: ರತನ್ ಟಾಟಾ ನಿಧನದ ಬಳಿಕ ಈಗ ಟಾಟಾ ಗ್ರೂಪ್ನ ಮುಂದಿನ ವಾರಸುದಾರ ಯಾರು ಎನ್ನವು ಪ್ರಶ್ನೆ ಉದ್ಭವಿಸಿದೆ. ರತನ್ ಟಾಟಾಗೆ ಇಬ್ಬರು ಸಹೋದರರಿದ್ದಾರೆ. ಒಬ್ಬರು ಬಿಸಿನೆಸ್ನಿಂದ ದೂರ ಉಳಿದಿದ್ದಾರೆ. ಇನ್ನೊಬ್ಬ ಸಹೋದರ ಇದ್ದು, ಅವರ ಮೂವರು ಮಕ್ಕಳು ಟಾಟಾ ಬಿಸಿನೆಸ್ಗಳಲ್ಲಿ ಸಕ್ರಿಯವಾಗಿದ್ದಾರೆ. ಮಾಯಾ ಟಾಟಾ, ಲಿಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಪೈಕಿ ಒಬ್ಬರು ಟಾಟಾ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಬಹುದು.
ಮುಂಬೈ, ಅಕ್ಟೋಬರ್ 10: ಭಾರತ ಕಂಡ ಅತ್ಯಂತ ಮೇರು ವ್ಯಕ್ತಿತ್ವಗಳು ಮತ್ತು ಉದ್ಯಮಿಗಳಲ್ಲಿ ಪ್ರಮುಖರೆನಿಸಿರುವ ರತನ್ ಟಾಟಾ ನಿಧನರಾಗಿದ್ದಾರೆ. ಈಗ ಟಾಟಾ ಗ್ರೂಪ್ ಉದ್ಯಮ ಸಾಮ್ರಾಜ್ಯಕ್ಕೆ ಮುಂದಿನ ಮುಂದಾಳುಗಳು ಯಾರು ಎನ್ನುವ ಪ್ರಶ್ನೆ ಸಹಜವಾಗಿ ಎದುರಾಗಿದೆ. ಟಾಟಾ ಗ್ರೂಪ್ನಲ್ಲಿ ರತನ್ ಟಾಟಾ ಬಿಟ್ಟರೆ ಅವರ ಕುಟುಂಬದ ಇತರ ಸದಸ್ಯರ ಹೆಸರುಗಳು ಅಷ್ಟೇನೂ ಪ್ರಚಾರದಲ್ಲಿ ಇಲ್ಲ. ರತನ್ಜಿ ಅವಿವಾಹಿತರಾಗಿದ್ದು, ಕೊನೆಯವರೆಗೂ ಬ್ರಹ್ಮಚಾರಿಯಾಗಿ ಉಳಿದರು. ಅವರಿಗೆ ಮಕ್ಕಳಿಲ್ಲ. ಈ ಕಾರಣಕ್ಕೆ ಟಾಟಾ ಗ್ರೂಪ್ಗೆ ಮುಂದಿನ ವಾರಸುದಾರರು ಯಾರು ಎಂಬುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರತನ್ ಟಾಟಾ ಅವರಿಗೆ ಸಂತಾನ ಇಲ್ಲ. ಹೀಗಾಗಿ, ಅವರ ಕುಟುಂಬದ ಇತರ ಸದಸ್ಯರ ಹೆಸರು ಟಾಟಾ ಗ್ರೂಪ್ ವಾರಸುದಾರಿಕೆಗೆ ಪರಿಗಣಿಸಲಾಗುತ್ತಿದೆ. ರತನ್ ಟಾಟಾ ಅವರಿಗೆ ಇಬ್ಬರು ಸಹೋದರರಿದ್ದಾರೆ. ಜಿಮ್ಮಿ ಟಾಟಾ ಮತ್ತು ನೋಯಲ್ ಟಾಟಾ (Noel Tata) ಅವರು ಆ ಇಬ್ಬರು ಬ್ರದರ್ಸ್. ರತನ್ ತಂದೆ ನವಲ್ ಟಾಟಾ ಅವರಿಗೆ ಇಬ್ಬರು ಪತ್ನಿಯರು. ರತನ್ ಮತ್ತು ಜಿಮ್ಮಿ ಅವರು ಮೊದಲ ಪತ್ನಿಯ ಮಕ್ಕಳು. ನೋಯಲ್ ಟಾಟಾ ಅವರು ಎರಡನೇ ಪತ್ನಿಯ ಮಕ್ಕಳು.
ಇಲ್ಲಿ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ಬಿಸಿನೆಸ್ಗಳಿಂದ ದೂರವೇ ಉಳಿದು ಪ್ರಶಾಂತವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೊಬ್ಬ ಸಹೋದರ ನೋಯಲ್ ಟಾಟಾ ಅವರಿಗೆ ಮೂವರು ಮಕ್ಕಳಿದ್ದಾರೆ. ಲಿಯಾ ಟಾಟಾ, ಮಾಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಅವರ ಹೆಸರುಗಳು ಈಗ ಟಾಟಾ ಗ್ರೂಪ್ ವಾರಸುದಾರಿಕೆಗೆ ಕೇಳಿಬರುತ್ತಿವೆ. ಮೂವರೂ ಕೂಡ ಗ್ರೂಪ್ನ ಬೇರೆ ಬೇರೆ ಬಿಸಿನೆಸ್ಗಳನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಬಗ್ಗೆ ಗೌರವ, ಆದರ ಹೊಂದಿದ್ದ ರತನ್ ಟಾಟಾ; ಹೇಗಿತ್ತು ಈ ರಾಜ್ಯದೊಂದಿಗೆ ಅವರ ಸಂಬಂಧ?
ಲಿಯಾ ಟಾಟಾ
ಸ್ಪೇನ್ನಲ್ಲಿ ಬಿಸಿನೆಸ್ ಉನ್ನತ ಶಿಕ್ಷಣ ಪಡೆದ ಲಿಯಾ ಅವರು (Leah Tata) ಟಾಟಾ ಗ್ರೂಪ್ನ ಹೋಟೆಲ್ ಉದ್ದಿಮೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಟಾಟಾ ಉದ್ದಿಮೆ ಬೆಳೆಯಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮಾಯಾ ಟಾಟಾ
ವಾರ್ವಿಕ್ ಯೂನಿವರ್ಸಿಟಿಯಲ್ಲಿ ಓದಿದ ಮಾಯಾ ಟಾಟಾ ಅವರು ಗ್ರೂಪ್ನ ಡಿಜಿಟಲ್ ಕಾರ್ಯಗಳನ್ನು ನಿಭಾಯಿಸಿದ್ದಾರೆ. ಟಾಟಾ ಆಪೋರ್ಚುನಿಟೀಸ್ ಫಂಡ್, ಟಾಟಾ ಡಿಜಿಟಲ್ನಲ್ಲಿ ಇವರ ಶ್ರಮ ಇದೆ. ಹಾಗೆಯೆ, ಟಾಟಾ ಗ್ರೂಪ್ನ ಸೂಪರ್ ಆ್ಯಪ್ ಆದ ಟಾಟಾ ನ್ಯೂ (Tata Neu) ಆರಂಭಿಸಲು ಈಕೆಯೇ ಪ್ರಮುಖ ಸೂತ್ರಧಾರಿ.
ನೆವಿಲ್ಲೆ ಟಾಟಾ
ಟಾಟಾ ಗ್ರೂಪ್ನ ಟ್ರೆಂಟ್ ಸಂಸ್ಥೆಗೆ ಸೇರಿದ ಸ್ಟಾರ್ ಬಜಾರ್ ಅನ್ನು ನೆವಿಲ್ಲೆ ಟಾಟಾ (Neville Tata) ಮುನ್ನಡೆಸುತ್ತಿದ್ದಾರೆ. ರೀಟೇಲ್ ಬಿಸಿನೆಸ್ ಅನ್ನು ಬೆಳೆಸಲು ಇವರ ಚಾಣಾಕ್ಷ್ಯತನ ಗಮನ ಸೆಳೆದಿದೆ.
ಇದನ್ನೂ ಓದಿ: ನೀವಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳುವುದು ಕಷ್ಟ, ರತನ್ ಟಾಟಾ ನಿಧನ, ಮಾಜಿ ಪ್ರೇಯಸಿ ಸಿಮಿ ಭಾವುಕ ಪೋಸ್ಟ್
ನವಲ್ ಟಾಟಾ ಅವರ ಈ ಮೇಲಿನ ಮೂವರು ಮಕ್ಕಳ ಪೈಕಿ ನವಿಲ್ಲೆ ಟಾಟಾ ಮಾತ್ರವೇ ಗಂಡು. ಇನ್ನಿಬ್ಬರೂ ಹೆಣ್ಮಕ್ಕಳೇ. ಬಿಸಿನೆಸ್ನಲ್ಲಿ ಸಮರ್ಥ ಎನಿಸಿರುವ ನೆವಿಲ್ಲೆ ಟಾಟಾ ಅವರಿಗೆ ವಾರಸುದಾರಿಕೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ, ಮಾಯಾ ಟಾಟಾ ಅವರ ಹೆಸರೂ ಸಾಕಷ್ಟು ಕೇಳಿಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ