ನವದೆಹಲಿ, ಡಿಸೆಂಬರ್ 20: ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ (Central Goods and Services Tax Amendment Bill) ತರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ ಬಿಚ್ಚಿಟ್ಟಿದ್ದಾರೆ. ಸಿಜಿಎಸ್ಟಿ 2017 ಮತ್ತು ನ್ಯಾಯಮಂಡಳಿ ಸುಧಾರಣೆ ಕಾಯ್ದೆ 2021 (Tribunal Reforms Act) ಮಧ್ಯೆ ಇರುವ ಕೆಲ ವೈರುದ್ಧ್ಯಗಳನ್ನು ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ಎತ್ತಿತೋರಿಸಿದರು. ಈ ದೋಷಗಳನ್ನು ನಿವಾರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ.
ಸಿಜಿಎಸ್ಟಿ ಕಾಯ್ದೆ ಪ್ರಕಾರ ಮೇಲ್ಮನವಿ ನ್ಯಾಯಮಂಡಳಿಯ (GST Appellate tribunal) ಅಧ್ಯಕ್ಷ ಸ್ಥಾನಕ್ಕೆ ವಯೋಮಿತಿ 67 ವರ್ಷ ಇದ್ದರೆ, ಸದಸ್ಯರಿಗೆ 65 ವರ್ಷ ಇದೆ. ಟ್ರಿಬುನಲ್ ರಿಫಾರ್ಮ್ಸ್ ಆ್ಯಕ್ಟ್ 2021 ಪ್ರಕಾರ ಅಧ್ಯಕ್ಷ ಮೇಲ್ಮನವಿ ನ್ಯಾಯಮಂಡಳಿ ಸ್ಥಾನ ಮತ್ತು ಸದಸ್ಯ ಸ್ಥಾನಗಳಿಗೆ ಕ್ರಮವಾಗಿ 70 ಮತ್ತು 67 ವರ್ಷ ಇದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ಆಡಳಿತ ಸಿಬ್ಬಂದಿ ಮೂಲಕ ಮೇಲಿನ ವೈರುದ್ದ್ಯ ಅಂಶಗಳ ಬಗ್ಗೆ ಹಣಕಾಸು ಸಚಿವಾಲಯದ ಗಮನಕ್ಕೆ ತಂದರಂತೆ.
ಇದನ್ನೂ ಓದಿ: RBI: ಭಾರತದ ಫಾರೆಕ್ಸ್ ದರ ವ್ಯವಸ್ಥೆ ಮರುವರ್ಗೀಕರಿಸಿದ ಐಎಂಎಫ್ನ ಕ್ರಮಕ್ಕೆ ಭಾರತ ಅಸಮಾಧಾನ
ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 100ಯಲ್ಲಿ ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯ ರಚನೆ ಬಗ್ಗೆ ನಿರ್ದೇಶನ ಇದೆ. ಆ ಟ್ರಿಬಿನಲ್ ಸದಸ್ಯ ಸ್ಥಾನಕ್ಕೆ ಅರ್ಹತಾ ಮಾನದಂಡಗಳನ್ನು ತಿಳಿಸಲಾಗಿದೆ. 2019ರಲ್ಲಿ ಮದ್ರಾಸ್ ಹೈಕೋರ್ಟ್ ಜಿಎಸ್ಟಿ ಅಪೆಲ್ಲೇಟ್ ಟ್ರಿಬಿನಲ್ ರಚನೆಯನ್ನು ರದ್ದುಗೊಳಿಸಿತ್ತು. ಅದರ ತಾಂತ್ರಿಕ ಸದಸ್ಯರು ನ್ಯಾಯಾಂಗ ಸದಸ್ಯರಿಗಿಂತ ಹೆಚ್ಚಿನ ಸಂಖ್ಯೆಯಯಲ್ಲಿದ್ದರಿಂದ ಕೋರ್ಟ್ ಈ ತೀರ್ಪು ಹೊರಡಿಸಿತ್ತು.
2021ರ ಆಗಸ್ಟ್ ತಿಂಗಳಲ್ಲಿ ಟ್ರಿಬುನಲ್ ರಿಫಾರ್ಮ್ಸ್ ಆ್ಯಕ್ಟ್ 2021 ಅನ್ನು ಜಾರಿಗೆ ತರಲಾಯಿತು. ಎಲ್ಲಾ ನ್ಯಾಯಮಂಡಳಿತಗಳ ನೇಮಕಾತಿ ಪ್ರಕ್ರಿಯೆ ಮತ್ತು ಅರ್ಹತಾ ಮಾನದಂಡಗಳನ್ನು ಪ್ರಮಾಣೀಕೃತಗೊಳಿಸಲು ಈ ಕಾಯ್ದೆ ತರಲಾಗಿತ್ತು.
ಇದನ್ನೂ ಓದಿ: RBI Circular: ಎಐಎಫ್ ಮೇಲೆ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್ಬಿಐ ನಿರ್ಬಂಧ; ಸಾಲ ತೀರಿಕೆಗೆ ಸಾಲ ಸಿಗುವುದು ಇನ್ಮುಂದೆ ಕಷ್ಟ
ಇನ್ನು, ಕೋರ್ಟ್ ತೀರ್ಪುಗಳ ಆಧಾರದ ಮೇಲೆ ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಗೆ ಅಗತ್ಯ ಬದಲಾವಣೆ ತರುವ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಯಿತು. ಅದಾದ ಬಳಿಕ ಹಣಕಾಸು ಕಾಯ್ದೆ 2023 ಮೂಲಕ ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 110ಕ್ಕೆ ತಿದ್ದುಪಡಿ ಮಾಡಲಾಯಿತು.
ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿಗಳು ಟ್ರಿಬುನಲ್ ರಚನೆ ವಿಚಾರದಲ್ಲಿ ಮೇಲ್ಮನವಿ ನ್ಯಾಯಮಂಡಳಿ ಕಾಯ್ದೆ ಮತ್ತು ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಮಧ್ಯೆ ಭಿನ್ನತೆ ಇರುವುದನ್ನು ಎತ್ತಿತೋರಿಸಿದ್ದಾರೆ. ಹೀಗಾಗಿ ಎರಡನೇ ಬಾರಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ