
ನವದೆಹಲಿ, ಆಗಸ್ಟ್ 1: ವಾಣಿಜ್ಯ ಬಳಕೆಯ ಅಡುಗೆ ಅನಿಲ ಬಳಸುವವರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 19 ಕೆಜಿ ಕಮರ್ಷಿಯಲ್ LPG ಸಿಲಿಂಡರ್ (LPG Cylinder) ಬೆಲೆಯನ್ನು 200 ರೂಪಾಯಿಗೂ ಹೆಚ್ಚು ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ. ಸದ್ಯ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ LPG ಸಿಲಿಂಡರ್ ದರ202 ರೂ. ಕಡಿತಗೊಳಿಸಲಾಗಿದೆ. ಕೋಲ್ಕತ್ತಾದಲ್ಲಿ 209 ರೂ. ಬೆಲೆ ಇಳಿಕೆಯಾಗಿದೆ. ಬೆಲೆ ಪರಿಷ್ಕರಣೆಯ ಬಳಿಕ ಕೋಲ್ಕತ್ತಾದಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2,872.50 ರೂ. ಆಗಿದೆ.
ಈಗಿನ ದರ ಇಳಿಕೆಯೊಂದಿಗೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಸತತ ಎರಡನೇ ತಿಂಗಳು ಇಳಿಕೆಯಾದಂತಾಗಿದೆ. ಜುಲೈ 1ರಂದು ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ ₹183.50ರಷ್ಟು ಕಡಿಮೆಯಾಗಿತ್ತು. ಆಗ ಸಿಲಿಂಡರ್ ಬೆಲೆ ₹2,930ಕ್ಕೆ ಇಳಿಕೆಯಾಗಿತ್ತು. ಇದೇ ವೇಳೆ 5 ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್ ಬೆಲೆಯನ್ನೂ ₹13ರಷ್ಟು ಕಡಿತಗೊಳಿಸಲಾಗಿತ್ತು. ದೆಹಲಿಯಲ್ಲಿ ಇದರ ಬೆಲೆ ₹808.50ಕ್ಕೆ ಇಳಿಕೆಯಾಗಿತ್ತು.
Prices of 19 kg commercial LPG cylinders have been reduced by Rs 209 in Kolkata and Rs 202 in Delhi today. With this revision, a 19 kg commercial cylinder will cost Rs 2,872.50 in Kolkata starting today. There is no change in the prices of domestic LPG cylinders: Sources pic.twitter.com/N754OIBURK
— ANI (@ANI) August 1, 2026
ಗೃಹ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇತ್ತೀಚಿನ ದರ ಇಳಿಕೆಯಿಂದ ರೆಸ್ಟೋರೆಂಟ್, ಹೋಟೆಲ್, ಕ್ಯಾಟರಿಂಗ್ ಸೇರಿದಂತೆ ವಾಣಿಜ್ಯ ಬಳಕೆದಾರರಿಗೆ ಕೊಂಚ ಮಟ್ಟಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಅಡುಗೆ ಅನಿಲವು ಇಂತಹ ಉದ್ಯಮಗಳ ಪ್ರಮುಖ ನಿರ್ವಹಣಾ ವೆಚ್ಚವಾಗಿರುವುದರಿಂದ, ಬೆಲೆ ಇಳಿಕೆ ಒಟ್ಟಾರೆ ಆಹಾರ ಮತ್ತು ಆತಿಥ್ಯ ಕ್ಷೇತ್ರದ ಮೇಲಿನ ವೆಚ್ಚದ ಒತ್ತಡವನ್ನು ತಗ್ಗಿಸಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಎಲ್‌ಪಿಜಿ ಮಾರುಕಟ್ಟೆಯಲ್ಲಿನ ಪೂರೈಕೆ ಆತಂಕ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ವಾಣಿಜ್ಯ ಬಳಕೆದಾರರು ಹೆಚ್ಚಿನ ಇಂಧನ ವೆಚ್ಚ ಎದುರಿಸಿದ್ದರು. ಇದೀಗ ಸತತ ಎರಡನೇ ತಿಂಗಳ ದರ ಇಳಿಕೆ, ಇತ್ತೀಚಿನ ಏರಿಕೆಯಿಂದ ಭಾಗಶಃ ರಿಲಾಕ್ಸ್ ನೀಡಿದಂತಾಗಿದೆ.
ಇನ್ನು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಇಂಧನ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಎರಡು ದಿನಗಳ ಬಳಿಕ ಈ ದರ ಪರಿಷ್ಕರಣೆ ನಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:50 am, Sat, 1 August 26