AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

Who is responsible for paying credit card debt after death? ಕ್ರೆಡಿಟ್ ಕಾರ್ಡ್ ಹೊಂದಿರುವವರು ಮರಣ ಹೊಂದಿದರೆ ಅವರ ಸಾಲಕ್ಕೆ ಕುಟುಂಬದವರು ಜವಾಬ್ದಾರರಲ್ಲ. ಇದು ಭದ್ರತೆಯಿಲ್ಲದ ಸಾಲವಾಗಿರುವುದರಿಂದ, ಬ್ಯಾಂಕುಗಳು ಮೃತರ ಆಸ್ತಿಗಳಿಂದ ಸಾಲವನ್ನು ವಸೂಲಿ ಮಾಡುತ್ತವೆ. ಯಾವುದೇ ಆಸ್ತಿಯಿಲ್ಲದಿದ್ದರೆ, ಸಾಲವನ್ನು 'ಬ್ಯಾಡ್ ಡೆಟ್' ಎಂದು ಪರಿಗಣಿಸಲಾಗುತ್ತದೆ. ಜಂಟಿ ಕಾರ್ಡ್ ಹೊಂದಿದ್ದರೆ ಸಂಗಾತಿ ಬಾಧ್ಯರಾಗುತ್ತಾರೆ, ಆದರೆ ಆಡ್-ಆನ್ ಕಾರ್ಡ್‌ದಾರರಿಗೆ ಹೊಣೆಯಿಲ್ಲ. 'ಕ್ರೆಡಿಟ್ ಶೀಲ್ಡ್' ವಿಮೆ ಸಾಲ ತೀರಿಸಲು ಸಹಾಯ ಮಾಡುತ್ತದೆ.

ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?
ಕ್ರೆಡಿಟ್ ಕಾರ್ಡ್​
ನಯನಾ ರಾಜೀವ್
|

Updated on: Jul 12, 2026 | 11:16 AM

Share

ನವದೆಹಲಿ, ಜುಲೈ 12: ಇಂದಿನ ಡಿಜಿಟಲ್ ಯುಗದಲ್ಲಿ ಡೆಬಿಟ್ ಕಾರ್ಡ್‌ಗಳಿಗಿಂತ ಕ್ರೆಡಿಟ್ ಕಾರ್ಡ್‌(Credit Card)ಗಳ ಬಳಕೆ ಅತಿಯಾಗಿದೆ. ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಸುಲಭ ಇಎಂಐ (EMI) ಸೌಲಭ್ಯಗಳಿಗಾಗಿ ಜನರು ದೈನಂದಿನ ಶಾಪಿಂಗ್‌ನಿಂದ ಹಿಡಿದು ಪ್ರಯಾಣದ ಬುಕಿಂಗ್‌ವರೆಗೆ ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆದರೆ, ಒಂದು ವೇಳೆ ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿ ಬಿಲ್ ಪಾವತಿಸುವ ಮುನ್ನವೇ ಅನಿರೀಕ್ಷಿತವಾಗಿ ಮರಣ ಹೊಂದಿದರೆ, ಆ ಸಾಲವನ್ನು ಯಾರು ತೀರಿಸಬೇಕು? ಬ್ಯಾಂಕ್‌ಗಳು ಕುಟುಂಬದವರನ್ನು ಪಾವತಿಸುವಂತೆ ಒತ್ತಾಯಿಸಬಹುದೇ? ಈ ಪ್ರಶ್ನೆಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಕಠಿಣ ನಿಯಮ: ಕುಟುಂಬದವರು ಹಣ ನೀಡಬೇಕಾಗಿಲ್ಲ

ಕಾನೂನಿನ ಪ್ರಕಾರ, ಕ್ರೆಡಿಟ್ ಕಾರ್ಡ್ ಸಾಲವನ್ನು ‘ವೈಯಕ್ತಿಕ ಮತ್ತು ಭದ್ರತೆಯಿಲ್ಲದ ಸಾಲ’ ಎಂದು ಪರಿಗಣಿಸಲಾಗುತ್ತದೆ. ಕಾರ್ಡ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಅವರ ಸಂಗಾತಿ (ಪತ್ನಿ/ಪತಿ), ಮಕ್ಕಳು ಅಥವಾ ಪೋಷಕರು ತಮ್ಮ ಸ್ವಂತ ಹಣದಿಂದ ಆ ಬಿಲ್ ಅನ್ನು ಪಾವತಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ಮೃತರ ಕುಟುಂಬ ಸದಸ್ಯರ ಮೇಲೆ ಹಣ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ.

ಹಾಗಾದರೆ ಬ್ಯಾಂಕ್ ತನ್ನ ಹಣವನ್ನು ಹೇಗೆ ವಸೂಲಿ ಮಾಡುತ್ತದೆ?

ಕ್ರೆಡಿಟ್ ಕಾರ್ಡ್ ಸಾಲವು ವ್ಯಕ್ತಿಯ ಮರಣದ ನಂತರ ತಾನಾಗಿಯೇ ಮನ್ನವಾಗುವುದಿಲ್ಲ. ಬ್ಯಾಂಕ್ ಈ ಹಣವನ್ನು ಮೃತ ವ್ಯಕ್ತಿಯ ಮೃತರ ಹೆಸರಿನಲ್ಲಿರುವ ಸ್ವತ್ತುಗಳ ಮೂಲಕ ವಸೂಲಿ ಮಾಡುತ್ತದೆ.

ಆಸ್ತಿಗಳ ಮುಟ್ಟುಗೋಲು: ಮೃತ ವ್ಯಕ್ತಿಯ ಹೆಸರಿನಲ್ಲಿರುವ ಬ್ಯಾಂಕ್ ಉಳಿತಾಯ ಖಾತೆ, ಸ್ಥಿರ ಠೇವಣಿ (FD), ಷೇರು ಮಾರುಕಟ್ಟೆ ಹೂಡಿಕೆಗಳು, ಚಿನ್ನಾಭರಣ ಅಥವಾ ಸ್ವಂತ ಜಮೀನು ಅಥವಾ ಮನೆ ಇದ್ದರೆ, ಆ ಆಸ್ತಿಯನ್ನು ಉತ್ತರಾಧಿಕಾರಿಗಳಿಗೆ ವರ್ಗಾಯಿಸುವ ಮುನ್ನ ಬ್ಯಾಂಕ್ ತನ್ನ ಸಾಲದ ಮೊತ್ತವನ್ನು ಕಡಿತಗೊಳಿಸುವ ಅಥವಾ ವಸೂಲಿ ಮಾಡುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತದೆ.

ಕುಟುಂಬದವರು ತಮ್ಮ ಸ್ವಂತ ಹಣ ನೀಡಬೇಕಾಗಿಲ್ಲದಿದ್ದರೂ, ಮೃತರ ಹೆಸರಿನಲ್ಲಿದ್ದ ಆಸ್ತಿಯಿಂದ ಸಾಲದ ಮೊತ್ತ ಪಾವತಿಯಾಗುವವರೆಗೂ ಆ ಆಸ್ತಿಯನ್ನು ಕಾನೂನುಬದ್ಧವಾಗಿ ಬಳಸಲು ಅಥವಾ ಮಾರಾಟ ಮಾಡಲು ಬರುವುದಿಲ್ಲ.

ಸಾಲದ ವಿಲೇವಾರಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಮೃತ ವ್ಯಕ್ತಿಯ ಆಸ್ತಿ ಮತ್ತು ಸಾಲವನ್ನು ನಿರ್ವಹಿಸಲು ಒಬ್ಬ ‘ನಿರ್ವಾಹಕ’ ಕಡ್ಡಾಯವಾಗಿ ಬೇಕಾಗುತ್ತದೆ. ಮೃತ ವ್ಯಕ್ತಿ ಮೊದಲೇ ವಿಲ್ ಮಾಡಿದ್ದರೆ, ಅದರಲ್ಲಿ ಹೆಸರಿಸಲಾದ ಕಾರ್ಯನಿರ್ವಾಹಕನು ಮೃತರ ಆಸ್ತಿಯನ್ನು ಮಾರಿ ಅಥವಾ ಬ್ಯಾಂಕ್ ಖಾತೆಯಿಂದ ಮೊದಲು ಕ್ರೆಡಿಟ್ ಕಾರ್ಡ್ ಸೇರಿದಂತೆ ಎಲ್ಲಾ ಸಾಲಗಳನ್ನು ತೀರಿಸುತ್ತಾನೆ. ಅದರ ನಂತರ ಉಳಿದ ಆಸ್ತಿಯನ್ನು ವಾರಸುದಾರರಿಗೆ ಹಂಚಲಾಗುತ್ತದೆ.

ಮತ್ತಷ್ಟು ಓದಿ: 2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು, ಪರಿಹಾರವೇನು ಇತ್ಯಾದಿ ವಿವರ ಇಲ್ಲಿದೆ

ವಿಲ್ ಇಲ್ಲದಿದ್ದರೆ: ವ್ಯಕ್ತಿ ಯಾವುದೇ ಉಯಿಲು ಬರೆಯದೆ ಮೃತಪಟ್ಟರೆ, ನ್ಯಾಯಾಲಯವು ಒಬ್ಬ ಅಧಿಕೃತ ನಿರ್ವಾಹಕರನ್ನು ನೇಮಿಸುತ್ತದೆ. ಅವರ ಮೂಲಕವೇ ಸಾಲದ ಸೆಟಲ್ಮೆಂಟ್ ಪ್ರಕ್ರಿಯೆ ನಡೆಯುತ್ತದೆ. ಒಂದೊಮ್ಮೆ ಮೃತ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಆ ಸಾಲವನ್ನು ಬ್ಯಾಂಕ್ ‘ಬ್ಯಾಡ್ ಡೆಟ್’ ಅಂದರೆ ವಸೂಲಾಗದ ಸಾಲ ಎಂದು ಪರಿಗಣಿಸಿ ಮನ್ನಾ ಮಾಡಬೇಕಾಗುತ್ತದೆ.

ಜಂಟಿ ಕಾರ್ಡ್ ಮತ್ತು ಆ್ಯಡ್-ಆನ್ ಕಾರ್ಡ್‌ಗಳ ನಿಯಮ

ಒಂದೊಮ್ಮೆ ಕ್ರೆಡಿಟ್ ಕಾರ್ಡ್ ಅನ್ನು ಇಬ್ಬರು ಸೇರಿ (ಉದಾಹರಣೆಗೆ ಪತಿ ಮತ್ತು ಪತ್ನಿ) ಜಂಟಿಯಾಗಿ ಪಡೆದಿದ್ದರೆ ಮತ್ತು ಪ್ರಾಥಮಿಕ ಕಾರ್ಡ್‌ದಾರ ಮರಣ ಹೊಂದಿದರೆ, ಮತ್ತೊಬ್ಬ ಜಂಟಿ ಕಾರ್ಡ್‌ದಾರರು ಇಡೀ ಬಿಲ್ ಬಾಕಿಯನ್ನು ಪಾವತಿಸಲು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.

ಆ್ಯಡ್-ಆನ್ ಕಾರ್ಡ್ : ಮುಖ್ಯ ಕಾರ್ಡ್‌ದಾರರು ತಮ್ಮ ಕುಟುಂಬದವರಿಗೆ ಆ್ಯಡ್-ಆನ್ ಕಾರ್ಡ್  ಕೊಡಿಸಿದ್ದರೆ, ಮುಖ್ಯ ಕಾರ್ಡ್‌ದಾರರ ಮರಣದ ನಂತರ ಆ್ಯಡ್-ಆನ್ ಕಾರ್ಡ್ಕಾ ಬಳಸುವವರು ಬಿಲ್ ಕಟ್ಟಬೇಕಾಗಿಲ್ಲ. ಆದರೆ ಮುಖ್ಯ ಕಾರ್ಡ್ ಬ್ಲಾಕ್ ಆಗುವುದರಿಂದ ಆ್ಯಡ್-ಆನ್ ಕಾರ್ಡ್ ಕೂಡ ತಾನಾಗಿಯೇ ರದ್ದಾಗುತ್ತದೆ.

ವಿಮೆ ಸೌಲಭ್ಯ : ಇತ್ತೀಚಿನ ದಿನಗಳಲ್ಲಿ ಅನೇಕ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್‌ಗಳ ಜೊತೆಗೆ ‘ಕ್ರೆಡಿಟ್ ಶೀಲ್ಡ್’ ಅಥವಾ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತವೆ. ಕಾರ್ಡ್‌ದಾರರು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟರೆ, ಆ ಇನ್ಶೂರೆನ್ಸ್ ಕಂಪನಿಯೇ ಇಡೀ ಸಾಲವನ್ನು ಬ್ಯಾಂಕಿಗೆ ಪಾವತಿಸುತ್ತದೆ. ಕುಟುಂಬಸ್ಥರು ಮರಣ ಪ್ರಮಾಣಪತ್ರವನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಬಹುದು.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ : ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿ ಸತ್ತರೆ, ಆತನ ಸಾಲವನ್ನು ಪತ್ನಿ ಅಥವಾ ಮಕ್ಕಳು ತೀರಿಸಬೇಕೇ? ಉತ್ತರ: ಖಂಡಿತವಾಗಿಯೂ ಇಲ್ಲ. ಕ್ರೆಡಿಟ್ ಕಾರ್ಡ್ ಸಾಲವನ್ನು ಭದ್ರತೆಯಿಲ್ಲದ ವೈಯಕ್ತಿಕ ಸಾಲ (Unsecured Debt) ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಮೃತರ ಸಂಗಾತಿ, ಮಕ್ಕಳು ಅಥವಾ ಪೋಷಕರು ಈ ಬಿಲ್ ಪಾವತಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕುಗಳು ಸಹ ಕುಟುಂಬಸ್ಥರ ಮೇಲೆ ಹಣಕ್ಕಾಗಿ ಒತ್ತಡ ಹೇರುವಂತಿಲ್ಲ.

ಪ್ರಶ್ನೆ : ಮೃತ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಬಿಲ್ ಏನಾಗುತ್ತದೆ? ಉತ್ತರ: ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಉಳಿತಾಯ ಖಾತೆ, ಸ್ಥಿರ ಠೇವಣಿ (FD), ಜಮೀನು, ಮನೆ ಅಥವಾ ಯಾವುದೇ ಹೂಡಿಕೆಗಳು ಇಲ್ಲದಿದ್ದರೆ, ಬ್ಯಾಂಕ್ ಆ ಸಾಲವನ್ನು ಮೃತರ ಕುಟುಂಬದಿಂದ ವಸೂಲಿ ಮಾಡಲು ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಆ ಬಾಕಿಯನ್ನು ‘ಬ್ಯಾಡ್ ಡೆಟ್’ (Bad Debt – ವಸೂಲಾಗದ ಸಾಲ) ಎಂದು ಪರಿಗಣಿಸಿ ಸಂಪೂರ್ಣವಾಗಿ ಮನ್ನಾ ಮಾಡಬೇಕಾಗುತ್ತದೆ.

ಪ್ರಶ್ನೆ : ತಂದೆಯ ಹೆಸರಿನಲ್ಲಿದ್ದ ಕ್ರೆಡಿಟ್ ಕಾರ್ಡ್ ಸಾಲ ತೀರದಿದ್ದರೆ, ಅವರ ಹೆಸರಿನಲ್ಲಿದ್ದ ಮನೆಯನ್ನು ಮಕ್ಕಳು ಮಾರಾಟ ಮಾಡಬಹುದೇ? ಉತ್ತರ: ಸಾಲ ತೀರುವವರೆಗೂ ಮಾರಾಟ ಮಾಡಲು ಬರುವುದಿಲ್ಲ. ಮೃತರ ಕುಟುಂಬಸ್ಥರು ತಮ್ಮ ಸ್ವಂತ ಹಣ ನೀಡಬೇಕಾಗಿಲ್ಲದಿದ್ದರೂ, ಮೃತ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಬ್ಯಾಂಕಿಗೆ ಕಾನೂನುಬದ್ಧ ಹಕ್ಕು ಇರುತ್ತದೆ. ತಂದೆಯ ಆಸ್ತಿ ಅಥವಾ ಮನೆ ಮಕ್ಕಳ ಹೆಸರಿಗೆ ವರ್ಗಾವಣೆ ಆಗಬೇಕೆಂದರೆ ಅಥವಾ ಅದನ್ನು ಮಾರಾಟ ಮಾಡಬೇಕೆಂದರೆ, ಮೊದಲು ಆ ಆಸ್ತಿಯ ಮೌಲ್ಯದಿಂದ ಕ್ರೆಡಿಟ್ ಕಾರ್ಡ್ ಸಾಲವನ್ನು ಚುಕ್ತಾ ಮಾಡಬೇಕಾಗುತ್ತದೆ. ಸಾಲದ ಸೆಟಲ್ಮೆಂಟ್ ಆಗುವವರೆಗೂ ಆ ಆಸ್ತಿಯನ್ನು ಬಳಸಲು ಕಾನೂನುಬದ್ಧವಾಗಿ ಬರುವುದಿಲ್ಲ.

ಪ್ರಶ್ನೆ : ಮುಖ್ಯ ಕಾರ್ಡ್‌ದಾರರು ಮೃತಪಟ್ಟರೆ, ಕುಟುಂಬದವರು ಬಳಸುತ್ತಿದ್ದ ‘ಆ್ಯಡ್-ಆನ್’ ಕಾರ್ಡ್ ಬಿಲ್ ಯಾರು ಕಟ್ಟಬೇಕು? ಉತ್ತರ: ಮುಖ್ಯ ಕಾರ್ಡ್ ಹೊಂದಿದ್ದ ವ್ಯಕ್ತಿ ಮರಣ ಹೊಂದಿದರೆ, ಆ್ಯಡ್-ಆನ್ ಕಾರ್ಡ್ ಬಳಸುತ್ತಿದ್ದ ಕುಟುಂಬದ ಸದಸ್ಯರು ಆ ಬಿಲ್ ಕಟ್ಟಬೇಕಾಗಿಲ್ಲ. ಆ ಸಾಲವನ್ನೂ ಸಹ ಮುಖ್ಯ ಕಾರ್ಡ್‌ದಾರರ ಆಸ್ತಿಯಿಂದಲೇ ವಸೂಲಿ ಮಾಡಲಾಗುತ್ತದೆ. ಆದರೆ, ಮುಖ್ಯ ಕಾರ್ಡ್‌ದಾರರು ಮೃತಪಟ್ಟ ತಕ್ಷಣ ಮುಖ್ಯ ಕಾರ್ಡ್ ಬ್ಲಾಕ್ ಆಗುವುದರಿಂದ, ಅದರ ಅಡಿಯಲ್ಲಿ ನೀಡಲಾದ ಆ್ಯಡ್-ಆನ್ ಕಾರ್ಡ್‌ಗಳು ಸಹ ತಾನಾಗಿಯೇ ರದ್ದಾಗುತ್ತವೆ .

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us