ನವದೆಹಲಿ, ಅಕ್ಟೋಬರ್ 9: ಹಬ್ಬದ ಋತುವಿನ ಮಧ್ಯದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ (DA- dearness allowance) ಭಾಗ್ಯ ಸಿಗಲಿದೆ. ವರದಿಗಳ ಪ್ರಕಾರ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ನಡುವೆ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಏರಿಸಲಾಗುತ್ತದೆ. ಜನವರಿಯ ಏರಿಕೆಯನ್ನು ಮಾರ್ಚ್ 24ರಂದು ಪ್ರಕಟಿಸಲಾಗಿತ್ತು. ಇದೀಗ ಜುಲೈ ಪಾಳಿಯ ಏರಿಕೆಯನ್ನು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಈ ಬಾರಿ ಶೇ. 3ರಷ್ಟು ಡಿಎ ಮತ್ತು ಡಿಆರ್ ಏರಿಸಲು ಶಿಫಾರಸು ಮಾಡಲಾಗಿದ್ದರೂ ಸರ್ಕಾರ ಶೇ. 4ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಜನವರಿಯ ಏರಿಕೆಯೂ ಕೂಡ ಶೇ. 4ರಷ್ಟು ಆಗಿತ್ತು. ಸದ್ಯ ಡಿಎ ಮತ್ತು ಡಿಆರ್ ಶೇ. 42ರಷ್ಟಿದೆ. ಈಗ ನಾಲ್ಕ ಪ್ರತಿಶತದಷ್ಟು ಹೆಚ್ಚಾದರೆ ಅದರ ಪ್ರಮಾಣ ಶೇ. 46ಕ್ಕೆ ಏರುತ್ತದೆ.
ಡಿಎ ಎಂಬುದು ಹಣದುಬ್ಬರದ ಪರಿಣಾಮವನ್ನು ಸಮಗೊಳಿಸಲು ಸಂಬಳದ ಜೊತೆಗೆ ನೀಡುವ ಹೆಚ್ಚುವರಿ ಭತ್ಯೆಯಾಗಿರುತ್ತದೆ. ವೇತನ ಆಯೋಗದ ಶಿಫಾರಸಿನ ಮೇರೆಗೆ ಡಿಎ ಮತ್ತು ಡಿಆರ್ ನೀಡಲಾಗುತ್ತದೆ. ಮೂಲ ವೇತನಕ್ಕೆ (ಬೇಸಿಕ್ ಸ್ಯಾಲರಿ) ಹೆಚ್ಚುವರಿಯಾಗಿ ಇದು ಇರುತ್ತದೆ.
ಇದನ್ನೂ ಓದಿ: ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್
ಒಬ್ಬ ಉದ್ಯೋಗಿಯ ಸಂಬಳ 60,000 ರೂ ಇದ್ದು, ಅದರಲ್ಲಿ ಮೂಲ ವೇತನದ ಪ್ರಮಾಣವು 25,000 ರೂ ಇದೆ ಎಂದಿಟ್ಟುಕೊಳ್ಳಿ. ಈ ಮೂಲ ವೇತನಕ್ಕೆ ಡಿಎ ಶೇ. 42 ಎಂದರೆ 10,500 ರೂ ಆಗುತ್ತದೆ. ಈಗ ಶೇ. 4ರಷ್ಟು ಡಿಎ ಹೆಚ್ಚಾದರೆ ಶೇ. 46 ಆಗುತ್ತದೆ. ಅಂದರೆ ಡಿಎ ಮೊತ್ತ 11,500 ರೂ ಆಗುತ್ತದೆ. 10,500 ರೂ ಇದ್ದದ್ದು 1,000 ರೂನಷ್ಟು ಡಿಎ ಹೆಚ್ಚಳವಾಗುತ್ತದೆ. 60,000 ರೂ ಇದ್ದ ಸಂಬಳ 61,000 ರೂಗೆ ಹೆಚ್ಚಾಗುತ್ತದೆ.
ಡಿಎ ಎಂಬುದನ್ನು ಹಾಲಿ ಸೇವೆಯಲ್ಲಿರುವ ಉದ್ಯೋಗಿಗಳಿಗೆ ನೀಡುವ ಭತ್ಯೆಯಾಗಿದೆ. ಡಿಆರ್ ಎಂಬುದು ಸೇವೆಯಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರಿಗೆ ಕೊಡಲಾಗುತ್ತದೆ. ಬೆಲೆ ಏರಿಕೆಯ ಬಿಸಿ ತಾಕದಿರಲೆಂದು ಸಂಬಳ ಅಥವಾ ಪಿಂಚಣಿಗೆ ಹೆಚ್ಚುವರಿಯಾಗಿ ಕೊಡುವ ಹಣ ಇದು.
ಇದನ್ನೂ ಓದಿ: ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿ 4 ಲಕ್ಷಕ್ಕೆ ಹೆಚ್ಚಳ; ಆರ್ಬಿಐ ಮಹತ್ವದ ನಿರ್ಧಾರ
ಹಣದುಬ್ಬರದ ಆಧಾರದ ಮೇಲೆ ಡಿಎ ಅನ್ನು ಲೆಕ್ಕ ಮಾಡಲಾಗುತ್ತದೆ. ಅದಕ್ಕೆಂದು ಸಮಿತಿ ಇದ್ದು, ಅದು ಪ್ರತೀ ಬಾರಿಯೂ ಡಿಎ ಹೆಚ್ಚಳಕ್ಕೆ ಶಿಫಾರಸು ಮಾಡುತ್ತದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಕ್ಕ ಬಳಿಕ ಡಿಎ ಘೋಷಣೆ ಮಾಡಲಾಗುತ್ತದೆ. ಈಗ ನವೆಂಬರ್ನಲ್ಲಿ ಡಿಎ ಘೋಷಿಸಿದರೂ ಅದನ್ನು ಜುಲೈನಿಂದಲೇ ಅನ್ವಯ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ