ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿ 4 ಲಕ್ಷಕ್ಕೆ ಹೆಚ್ಚಳ; ಆರ್ಬಿಐ ಮಹತ್ವದ ನಿರ್ಧಾರ
Gold loan limit raised: ಸಹಕಾರಿ ಬ್ಯಾಂಕುಗಳಲ್ಲಿ ಬುಲೆಟ್ ರೀಪೇಮೆಂಟ್ ಸ್ಕೀಮ್ ಅಡಿಯಲ್ಲಿ ಒದಗಿಸುವ ಸಾಲದ ಮಿತಿಯನ್ನು 2 ಲಕ್ಷ ರುನಿಂದ 4 ಲಕ್ಷ ರುಗೆ ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ. ಇದಕ್ಕೆ ಕೆಲ ಷರುತ್ತುಗಳು ಅನ್ವಯ ಆಗುತ್ತವೆ. ಹಾಗೆಯೇ ಬ್ಯಾಂಕುಗಳು ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಆರ್ಬಿಐನ ಎಸ್ಡಿಎಫ್ ಸ್ಕೀಮ್ನಲ್ಲಿ ತೊಡಗಿಸುವ ಬದಲು ಹೆಚ್ಚು ಆದಾಯ ಕೊಡುವ ಸಾಲಕ್ಕೆ ವಿನಿಯೋಗಿಸಬಹುದು ಎಂದು ಸಲಹೆ ನೀಡಲಾಗಿದೆ.
ನವದೆಹಲಿ, ಅಕ್ಟೋಬರ್ 6: ಬುಲೆಟ್ ರೀಪೇಮೆಂಟ್ ಸ್ಕೀಮ್ ಅಡಿಯಲ್ಲಿ ನಗರ ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿಯನ್ನು (gold loan limit) ದ್ವಿಗುಣಗೊಳಿಸಲಾಗಿದೆ. ಈಗಿರುವ 2 ಲಕ್ಷ ರೂ ಮಿತಿಯನ್ನು 4 ಲಕ್ಷ ರುಪಾಯಿಗೆ ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ. ಮೂರು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳಲಾದ ಕೆಲ ಪ್ರಮುಖ ನಿರ್ಧಾರಗಳಲ್ಲಿ ಇದೂ ಒಂದು. ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಈ ವಿಚಾರ ತಿಳಿಸಿದರು.
ನಗರ ಸಹಕಾರಿ ಬ್ಯಾಂಕುಗಳು 2023ರ ಮಾರ್ಚ್ 31ಕ್ಕೆ ಆದ್ಯತಾ ವಲಯದಲ್ಲಿನ ಗುರಿಗಳನ್ನು ಪೂರ್ಣಗೊಳಿಸಿದಲ್ಲಿ, ಬುಲೆಟ್ ರೀಪೇಮೆಂಟ್ ಸ್ಕೀಮ್ ಅಡಿಯಲ್ಲಿ ಗ್ರಾಹಕರಿಗೆ 4 ಲಕ್ಷ ರೂವರೆಗೂ ಒಡವೆ ಸಾಲ ನೀಡಬಹುದು ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: ಆರ್ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ
ಏನಿದು ಬುಲೆಟ್ ರೀಪೇಮೆಂಟ್ ಸ್ಕೀಮ್?
ಮಾಮೂಲಿಯ ಬ್ಯಾಂಕ್ ಸಾಲದಲ್ಲಿ ತಿಂಗಳಿಗೆ ಇಎಂಐ ಕಟ್ಟಬೇಕಾಗುತ್ತದೆ. ಆದರೆ ಬುಲೆಟ್ ರೀಪೇಮೆಂಟ್ ಸ್ಕೀಮ್ನಲ್ಲಿ ಗ್ರಾಹಕರು ಕಂತುಗಳಲ್ಲಿ ಹಣ ಕಟ್ಟುವ ಬದಲು ಸಾಲದ ಅವಧಿಯ ಕೊನೆಯಲ್ಲಿ ಅಸಲು ಮತ್ತು ಬಡ್ಡಿ ಎಲ್ಲಾ ಸೇರಿ ಇಡೀ ಮೊತ್ತವನ್ನು ಒಮ್ಮೆಗೇ ಪಾವತಿಸಲು ಅವಕಾಶ ಇರುತ್ತದೆ. ಸಹಕಾರಿ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆಗಳಲ್ಲಿ ಒಡವೆ ಮೇಲೆ ತೆಗೆದುಕೊಳ್ಳುವ ಸಾಲಕ್ಕೆ ಸಾಮಾನ್ಯವಾಗಿ ಈ ಬುಲೆಟ್ ರೀಪೇಮೆಂಟ್ ಸ್ಕೀಮ್ ಇರುತ್ತದೆ.
2007ರವರೆಗೂ 1 ಲಕ್ಷ ರೂ ಮಾತ್ರವೇ ಇದ್ದದ್ದು ಮಿತಿ
2007ರವರೆಗೂ ಬುಲೆಟ್ ರೀಪೇಂಟ್ ಸೌಲಭ್ಯ ಇರುವ ಒಡವೆ ಸಾಲದ ಮಿತಿ 1 ಲಕ್ಷ ರೂ ಇತ್ತು. 2014ರಲ್ಲಿ ಇದನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಇದೀಗ 4 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ಗ್ರಾಹಕರಿಗೆ ಸಾಲ ಕೊಡುವಂತೆ ಬ್ಯಾಂಕುಗಳಿಗೆ ಉತ್ತೇಜನ
ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಕಡಿಮೆ ಬಡ್ಡಿದರದ ಎಸ್ಡಿಎಫ್ನಲ್ಲಿ ಇರಿಸುವ ಬದಲು, ಬೇರೆಡೆ ಸಾಲ ನೀಡಿ ಆದಾಯ ಗಳಿಸಲಿ ಎಂದು ಆರ್ಬಿಐ ಸಲಹೆ ನೀಡಿದೆ.
ಇನ್ನು, ಈ ಬಾರಿಯ ಎಂಪಿಸಿ ಸಭೆಯಲ್ಲಿ ಆರ್ಬಿಐ ತೆಗೆದುಕೊಂಡ ನಿರ್ಧಾರಗಳು ಬಹುತೇಕ ನಿರೀಕ್ಷಿತವೇ ಆಗಿವೆ. ರೆಪೋದರ ಶೇ. 6.5ರಲ್ಲಿ ಮುಂದುವರಿಸಿದೆ. ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಮತ್ತು ಜಿಡಿಪಿ ಬಗ್ಗೆ ಈ ಹಿಂದೆ ಮಾಡಿದ್ದ ಅಂದಾಜನ್ನೇ ಆರ್ಬಿಐ ಮುಂದುವರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Fri, 6 October 23