ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್

Rs 2,000 Notes: ಮೈ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು. ಸೆಪ್ಟೆಂಬರ್ 30ರವರೆಗೂ ಅವುಗಳನ್ನು ಮರಳಿಸಲು ಡೆಡ್​ಲೈನ್ ನೀಡಲಾಗಿತ್ತು. ಬಳಿಕ ಅಕ್ಟೋಬರ್ 7ಕ್ಕೆ ಗಡುವನ್ನು ವಿಸ್ತರಿಸಲಾಯಿತು. ಇದೀಗ ಈ ವಿಸ್ತರಿತ ಡೆಡ್​ಲೈನ್ ಕೂಡ ಮುಗಿದಿದೆ. ಇನ್ನೀಗ ದೇಶಾದ್ಯಂತ 19 ಆರ್​ಬಿಐ ಇಷ್ಯೂ ಆಫೀಸ್​ಗಳಲ್ಲಿ 2,000 ರೂ ನೋಟುಗಳನ್ನು ವಿನಿಮಯ ಮಾಡಬಹುದಾಗಿದೆ.

ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್
2,000 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2023 | 10:29 AM

ನವದೆಹಲಿ, ಅಕ್ಟೋಬರ್ 8: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ವಿನಿಯಮ ಮಾಡಲು ಅಕ್ಟೋಬರ್ 7ರವರೆಗೂ ಇದ್ದ ಡೆಡ್​ಲೈನ್ ಮುಗಿದಿದೆ. ಆದರೆ, ಆರ್​ಬಿಐನ ಕೆಲ ಕಚೇರಿಗಳಲ್ಲಿ (RBI Issue Offices) ನೋಟು ವಿನಿಮಯಕ್ಕೆ ಇನ್ನೂ ಕೂಡ ಅವಕಾಶ ಇದೆ. ಎಷ್ಟು ದಿನಗಳವರೆಗೆ ಈ ಅವಕಾಶ ಇರುತ್ತದೆಂಬುದು ನಿರ್ದಿಷ್ಟವಾಗಿಲ್ಲ. ಆರ್​ಬಿಐನಿಂದ ಮುಂದಿನ ನಿರ್ದೇಶನ ಬರುವವರೆಗೂ ಈ ಅವಕಾಶ ಇರುತ್ತದೆ. ಕಳೆದ ವಾರ ಆರ್​ಬಿಐ ನೀಡಿದ ಮಾಹಿತಿ ಪ್ರಕಾರ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ 2,000 ರೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಇದರಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯೂ ಒಂದು.

2023ರ ಮೇ 19ರಂದು ಆರ್​ಬಿಐ 2,000 ರೂ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಳ್ಳುತ್ತಿರುವುದಾಗಿ ತಿಳಿಸಿತು. ಈ ನೋಟಿನ ಬಾಳಿಕೆ ಅವಧಿ ಮುಗಿದಿದ್ದರಿಂದ ಬ್ಯಾಂಕಿಂಗ್ ಪ್ರಕ್ರಿಯೆಯ ಭಾಗವಾಗಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಆರ್​ಬಿಐ ತಿಳಿಸಿತು.

ನೋಟುಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಲು ಅಥವಾ ಬೇರೆ ನೋಟುಗಳೊಂದಿಗೆ ವಿನಿಮಯ ಮಾಡಲು ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಯಿತು. ಬಳಿಕ ಡೆಡ್​ಲೈನ್ ಅನ್ನು ಅಕ್ಟೋಬರ್ 7ರವರೆಗೂ ವಿಸ್ತರಿಸಿತು. ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ನೋಟು ವಿನಿಮಯ ಮಾಡುವ ಅವಕಾಶ ಇತ್ತು. ಈಗ ಅಕ್ಟೋಬರ್ 7ರ ವಿಸ್ತರಿತ ಡೆಡ್​ಲೈನ್ ಕೂಡ ಮುಗಿದು ಹೋಗಿದೆ. ಆದರೂ 2,000 ರೂ ನೋಟು ಅಮಾನ್ಯವಾಗಿಲ್ಲ. ಈಗಲೂ ಕೂಡ ಈ ನೋಟುಗಳನ್ನು ವಿನಿಮಯ ಮಾಡಬಹುದು. ಆದರೆ, ನಿರ್ದಿಷ್ಟ ಆರ್​ಬಿಐ ಕಚೇರಿಗಳಲ್ಲಿ ಮಾತ್ರವೇ ಇದಕ್ಕೆ ಅವಕಾಶ ಇದೆ.

ಇದನ್ನೂ ಓದಿ: ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಈವರೆಗೆ ಮರಳಿರುವುದು ಎಷ್ಟು? ಆರ್​ಬಿಐ ನೀಡಿದ ಮಾಹಿತಿ ಇದು

2,000 ರೂ ನೋಟು ವಿನಿಮಯಕ್ಕೆ ನಿರ್ದಿಷ್ಟಪಡಿಸಿದ 19 ಆರ್​ಬಿಐ ಇಷ್ಯೂ ಕಚೇರಿಗಳಿರುವ ನಗರಗಳು

  1. ಅಹ್ಮದಾಬಾದ್
  2. ಬೆಂಗಳೂರು
  3. ಭುವನೇಶ್ವರ್
  4. ಮುಂಬೈ
  5. ನವಿ ಮುಂಬೈ
  6. ಭೋಪಾಲ್
  7. ಲಕ್ನೋ
  8. ಚಂಡೀಗಡ
  9. ಚೆನ್ನೈ
  10. ಗುವಾಹಟಿ
  11. ಹೈದರಾಬಾದ್
  12. ಜಮ್ಮು
  13. ಜೈಪುರ್
  14. ಕಾನಪುರ್
  15. ಕೋಲ್ಕತಾ
  16. ನಾಗಪುರ್
  17. ನವದೆಹಲಿ
  18. ಪಾಟ್ನಾ
  19. ತಿರುವನಂತಪುರಂ

ಇದನ್ನೂ ಓದಿ: 52ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಪ್ರಮುಖ ನಿರ್ಧಾರಗಳೇನು? ಸಿರಿಧ್ಯಾನದ ಮೇಲಿನ ಸರಕು-ಸೇವೆ ತೆರಿಗೆ ಇಳಿಸಿದ ಕೇಂದ್ರ

ಇಲ್ಲಿ ಮೇಲಿನ ಪಟ್ಟಿಯಲ್ಲಿರುವ ನಗರಗಳಲ್ಲಿನ ಆರ್​ಬಿಐ ಕಚೇರಿಗಳಲ್ಲಿ ಇಷ್ಯೂ ವಿಭಾಗಕ್ಕೆ ಹೋಗಿ ಅಲ್ಲಿ ಎಷ್ಟು ಪ್ರಮಾಣದ 2,000 ರೂ ನೋಟುಗಳನ್ನು ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಗೆ ಠೇವಣಿ ಇಡಬಹುದು, ಅಥವಾ ನೋಟು ವಿನಿಮಯ ಮಾಡಿಕೊಳ್ಳಬಹುದು. ನೀವು ನೋಟು ವಿನಿಮಯ ಮಾಡುವುದಾದರೆ ಸೂಕ್ತ ಐಡಿ ಪ್ರೂಫ್ ಒದಗಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ