
ನವದೆಹಲಿ, ನವೆಂಬರ್ 17: ದೀಪಾವಳಿ ಹಬ್ಬದ ಅವಧಿಯಲ್ಲಿ ದೇಶಾದ್ಯಂತ ಡಿಜಿಟಲ್ ಪಾವತಿಗಳಲ್ಲಿ ಭಾರಿ ಏರಿಕೆಯಾಗಿದ್ದು, ಯುಪಿಐ ವಹಿವಾಟು ಮೌಲ್ಯವು ಗರಿಷ್ಠ 31.53 ಲಕ್ಷ ಕೋಟಿ ರೂ ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಹಬ್ಬದ ಸಮಯದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಖರೀದಿಗಳು ಹೆಚ್ಚಾಗಿರುವುದೇ ಈ ದೈತ್ಯ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.
ಈ ಬಾರಿ ದೀಪಾವಳಿ ಸೀಸನ್ ನವೆಂಬರ್ ಮೊದಲ ವಾರದಲ್ಲಿ ಇತ್ತು. ಇದರಿಂದಾಗಿ ಅಕ್ಟೋಬರ್ ತಿಂಗಳಲ್ಲಿ ವ್ಯಾಪಾರ ವಹಿವಾಟು ಬಹಳ ಜೋರಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಯುಪಿಐ ಮೂಲಕ ನಡೆದ ಹಣದ ವಹಿವಾಟು ಮೌಲ್ಯ 29.37 ಲಕ್ಷ ಕೋಟಿ ರೂ. ಅಕ್ಟೋಬರ್ ತಿಂಗಳಲ್ಲಿ ಇದು 31.53 ಲಕ್ಷ ಕೋಟಿ ರೂ ಆಗಿದೆ. 2025ರ ಅಕ್ಟೋಬರ್ ತಿಂಗಳಲ್ಲಿ ಆದ 27.27 ಲಕ್ಷ ಕೋಟಿ ರೂಗೆ ಹೋಲಿಸಿದರೆ ಈ ವರ್ಷದ ಹಬ್ಬದ ಸೀಸನ್‌ನಲ್ಲಿ ಯುಪಿಐ ವಹಿವಾಟು ಗಣನೀಯವಾಗಿ ಹೆಚ್ಚಿದೆ.
ಇದನ್ನೂ ಓದಿ: ಈ ಟಿಪ್ಸ್ ಪಾಲಿಸಿ ನಿವೃತ್ತಿ ಜೀವನಕ್ಕೆ ಈಗಿನಿಂದಲೇ ದುಡ್ಡು ಉಳಿಸಿ
ಈ ವರ್ಷದ ಅಕ್ಟೋಬರ್ನಲ್ಲಿ ಯುಪಿಐ ವಹಿವಾಟು ಗಮನಿಸಿದರೆ ದಿನಕ್ಕೆ ಸರಾಸರಿ ಒಂದು ಲಕ್ಷ ಕೋಟಿ ರೂ ಹಣದ ಚಲಾವಣೆಯು ಯುಪಿಐ ಮೂಲಕ ಆಗಿರುವುದು ಕಂಡುಬರುತ್ತದೆ. ಯುಪಿಐ ಅಸ್ತಿತ್ವಕ್ಕೆ ಬಂದ ಬಳಿಕ ಯಾವುದೇ ತಿಂಗಳಲ್ಲಿ ಸರಾಸರಿ ವಹಿವಾಟು ಒಂದು ಲಕ್ಷ ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ.
ಇನ್ನು, ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಶುರುವಾಗುವವರೆಗೂ, ಅಂದರೆ, ಮೊದಲ ನಾಲ್ಕು ದಿನದಲ್ಲಿ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಬರೋಬ್ಬರಿ 1.29 ಲಕ್ಷ ಕೋಟಿ ರೂ ಇತ್ತು. ಈ ಟ್ರೆಂಡ್ ಗಮನಿಸಿದರೆ ನವೆಂಬರ್ನಲ್ಲಿ ಯುಪಿಐ ವಹಿವಾಟು ದಾಖಲೆ ಮುರಿಯುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಭಾರತದ ನಿರುದ್ಯೋಗ ದರ ಶೇ. 4.9ಕ್ಕೆ ಇಳಿಕೆ; ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ
ಯುಪಿಐ ವಹಿವಾಟಿಗೆ ಎಂಡಿಆರ್ ಶುಲ್ಕ ವಿಧಿಸುವ ಕ್ರಮ ಇನ್ನೂ ಜಾರಿಗೆ ಬಂದಿಲ್ಲ. ದೊಡ್ಡ ಮೌಲ್ಯದ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ಹಾಕುವ ಪ್ರಸ್ತಾಪ ಇದೆ. ಇದು ವ್ಯಾಪಾರಿಗಳಿಗೆ ವಿಧಿಸುವ ಶುಲ್ಕ. ಗ್ರಾಹಕರಿಗೆ ಈ ಶುಲ್ಕದ ಹೊರೆ ಬೀಳದಂತೆ ಎಚ್ಚರ ವಹಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಎಂಡಿಆರ್ ಶುಲ್ಕ ವ್ಯವಸ್ಥೆಯನ್ನು ಬಹಳಷ್ಟು ಮಂದಿ ವಿರೋಧಿಸುತ್ತಿದ್ದಾರೆ. ಇದರಿಂದ ಯುಪಿಐ ಇಕೋಸಿಸ್ಟಂ ದುರ್ಬಲಗೊಳ್ಳಬಹುದು. ಮತ್ತೆ ಕ್ಯಾಷ್ ಎಕನಾಮಿ ಬಲಿಷ್ಠಗೊಳ್ಳಬಹುದು ಎನ್ನುವ ಆತಂಕವನ್ನು ಹಲವು ವ್ಯಕ್ತಪಡಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ