ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಇಂಡಿಯಾ (ಎನ್ಎಸ್ಇ)ನಿಂದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್ಎಫ್ಎಲ್) ಈಕ್ವಿಟಿ ಷೇರು ವಹಿವಾಟನ್ನು ಅಮಾನತು ಮಾಡಲಾಗಿದೆ. ಈ ನಿಷೇಧವು ಜೂನ್ 14, 2021ರಿಂದ ಜಾರಿಗೆ ಬರಲಿದೆ ಎಂದು ಎರಡು ಎಕ್ಸ್ಚೇಂಜ್ನ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಿಎಸ್ಇ ಮತ್ತು ಎನ್ಎಸ್ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ (NCLT), ಮುಂಬೈ ಪೀಠವು ಒಪ್ಪಿಕೊಂಡಿರುವಂಥ ತೀರುವಳಿ ಯೋಜನೆ ಬಗ್ಗೆ ಜೂನ್ 8ನೇ ತಾರೀಕಿನಂದು ಡಿಎಚ್ಎಫ್ಎಲ್ನಿಂದ ಎಕ್ಸ್ಚೇಂಜ್ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಎಸ್ಇ ಮತ್ತು ಎನ್ಎಸ್ಇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರಿಂದ ಕಂಪೆನಿಯ ಈಕ್ವಿಟಿ ಷೇರುಗಳು ಡಿಲಿಸ್ಟ್ ಆಗುತ್ತವೆ ಎನ್ನಲಾಗಿದೆ.
ಡಿಎಚ್ಎಫ್ಎಲ್ಗೆ ಪಿರಾಮಲ್ ಸಮೂಹ ಯಶಸ್ವಿ ಬಿಡ್ ಮಾಡಿದ್ದು, ತೀರುವಳಿ ಯೋಜನೆಗೆ ಎನ್ಸಿಎಲ್ಟಿ ಒಪ್ಪಿಗೆ ನೀಡಿದೆ. ಡಿಎಚ್ಎಫ್ಎಲ್ ಷೇರಿನ ವಹಿವಾಟು ನಡೆಸಲು ಒಪ್ಪಿಗೆ ನೀಡಿದ್ದಾಗಿಯೂ ಷೇರಿಗೆ ಶೂನ್ಯ ಮೌಲ್ಯ ಎಂದು ಕಟ್ಟಲಾಗಿದೆ. ಬಿಎಸ್ಇ ಮತ್ತು ಎನ್ಎಸ್ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ಡಿಎಚ್ಎಫ್ಎಲ್ ಜೂನ್ 9ರಂದು ಹೇಳಿರುವ ಪ್ರಕಾರ, ಈಕ್ವಿಟಿ ಷೇರಿಗೆ ಯಾವುದೇ ಮೌಲ್ಯವಿಲ್ಲ. ಇದು ಕಂಪೆನಿಯ ಲಿಕ್ವಿಡೇಷನ್ ಮೌಲ್ಯದ ಪ್ರಕಾರ ಆಗಿರುವಂಥದ್ದು. ಇದನ್ನು ಅಂದಾಜು ಮಾಡಿರುವವರು ನೋಂದಾಯಿತ ಮೌಲ್ಯಮಾಪಕರು. ಅವರನ್ನು ನೇಮಕ ಮಾಡಿರುವುದು Insolvency and Bankruptcy Board of India (Insolvency Resolution Process for Corporate Persons) ನಿಯಮಾವಳಿ, 2016 ಅಡಿಯಲ್ಲಿ.
ಇನ್ನೂ ಮುಂದುವರಿದು, ಕಂಪೆನಿ ಹೇಳಿರುವಂತೆ ತೀರುವಳಿ ಯೋಜನೆಗೆ ಒಪ್ಪಿರುವಂಥ ಎನ್ಸಿಎಲ್ಟಿ ಲಿಖಿತ ಆದೇಶಕ್ಕಾಗಿ ಕಾಯಲಾಗುತ್ತಿದೆ. ಉಳಿದ ಮಾಹಿತಿಗಳು ಉಳಿದಂತೆ ಹಾಗೇ ಇವೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಡಿಎಚ್ಎಫ್ಎಲ್ ಷೇರನ್ನು ಈ ವಾರದ ಆರಂಭದಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಜತೆಗೆ ಗರಿಷ್ಠ ಮಟ್ಟ ಶೇ 10ರಷ್ಟು ಏರಿಕೆಗೂ ಅನುಮತಿಸಿತ್ತು. ಎನ್ಎಸ್ಇಯಲ್ಲಿ 14 ಕೋಟಿ ಷೇರು ವಹಿವಾಟಾಗಿತ್ತು. ಜೂನ್ 8ನೇ ತಾರೀಕಿನಂದು 200 ಕೊಟಿ ಮೌಲ್ಯದ 9 ಕೋಟಿ ಷೇರುಗಳನ್ನು ಹೂಡಿಕೆದಾರರು ಡೆಲಿವರಿ ತೆಗೆದುಕೊಂಡಿದ್ದರು.
ಈಕ್ವಿಟಿ ಷೇರುಗಳ ಬೆಲೆ ಸೊನ್ನೆ ಎಂದು ತಿಳಿಸಿದ ಮೇಲೆ ಡಿಎಚ್ಎಫ್ಎಲ್ ಷೇರುಗಳನ್ನು ವಹಿವಾಟು ನಡೆಸುವುದಕ್ಕೆ ಎರಡೂ ಎಕ್ಸ್ಚೇಂಜ್ನಲ್ಲಿ ಅವಕಾಶ ನೀಡಲಾಗಿತ್ತು. ಜೂನ್ 9ನೇ ತಾರೀಕಿನಂದು ಡಿಎಚ್ಎಫ್ಎಲ್ನ 50 ಲಕ್ಷ ಷೇರು ವಹಿವಾಟಾಗಿತ್ತು. ಈ ಬೆಳವಣಿಗೆಗೆ ತಜ್ಞರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಹೂಡಿಕೆದಾರರ ಹಿತ ಕಾಯುವ ಕಾರಣಕ್ಕೆ ಆದಷ್ಟು ಬೇಗ ಡಿಎಚ್ಎಫ್ಎಲ್ ಷೇರಿನ ವಹಿವಾಟು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಿಎಚ್ಎಫ್ಎಲ್ ಎಂಬುದು ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ. ಮುಖ್ಯವಾಗಿ ಹೌಸಿಂಗ್ ಫೈನಾನ್ಸ್ ಮೇಲೆ ಗಮನ ಹರಿಸುತ್ತಿತ್ತು/ 2019ರ ಮಧ್ಯಭಾಗದಲ್ಲಿ ಕಂಪೆನಿಯಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತು. ಕಂಪೆನಿಯ ಕಮರ್ಷಿಯಲ್ ಪೇಪರ್, ಅಲ್ಪಾವಧಿಯ ಸಾಲಪತ್ರಗಳನ್ನು ಕಳೆದ ವರ್ಷದ ಜೂನ್ನಲ್ಲಿ ಡಿಗೆ, ಅಂದರೆ ಡಿಫಾಲ್ಟ್ಗೆ (ಮರುಪಾವತಿಸದಿರುವುದು) ಇಳಿಸಲಾಯಿತು. ಕಂಪೆನಿಯಿಂದ ಹಲವು ಪಾವತಿ ಮಾಡಲು ಆಗಲಿಲ್ಲ. ಕಂಪೆನಿಯು ದಿವಾಳಿ ಆದ ಮೇಲೆ ಅಂದಾಜು 90,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಾಲಗಾರರಿಗೆ ಬಾಕಿ ಇತ್ತು. 2019ರ ನವೆಂಬರ್ನಲ್ಲಿ ಆರ್ಬಿಐನಿಂದ ಡಿಎಚ್ಎಫ್ಎಲ್ ತೀರುವಳಿಗೆ ಐಬಿಸಿ (ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್)ಗೆ ಸೂಚಿಸಲಾಯಿತು. ಅಡಮಾನದ ಮೇಲೆ ಸಾಲ ನೀಡುವ ವ್ಯವಹಾರ ಮಾಡುವ ಸಂಸ್ಥೆಯನ್ನು ಐಬಿಸಿಗೆ ಸೂಚಿಸಿದ ಮೂರನೇ ಸಂಸ್ಥೆ ಡಿಎಚ್ಎಫ್ಎಲ್. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಎನ್ಸಿಎಲ್ಟಿಗೆ ರೆಫರ್ ಮಾಡಿದ ಮೊದಲ ಕಂಪೆನಿ ಕೂಡ ಡಿಎಚ್ಎಫ್ಎಲ್.
ಇದನ್ನೂ ಓದಿ: ಡಿಎಚ್ಎಫ್ಎಲ್ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು
(DHFL trading in shares suspend by BSE and NSE from June 14, 2021. Here is the reasons behind explained)
Published On - 12:27 am, Sun, 13 June 21