ನವದೆಹಲಿ, ಅಕ್ಟೋಬರ್ 17: ಭಾರತದಲ್ಲಿ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿ ನೇರ ತೆರಿಗೆ ಸಂಗ್ರಹ ಕಳೆದ 10 ವರ್ಷದಿಂದ ಗಣನೀಯವಾಗಿ ಹೆಚ್ಚುತ್ತಿದೆ. ಆದಾಯ ತೆರಿಗೆ ಇಲಾಖೆ ಇಂದು ಗುರುವಾರ ಬಿಡುಗಡೆ ಮಾಡಿದ ಟೈಮ್ ಸೀರೀಸ್ ಡಾಟಾದಲ್ಲಿ ನೇರ ತೆರಿಗೆ ಸಂಗ್ರಹ ಹೇಗೆ ಹೆಚ್ಚುತ್ತಾ ಹೋಗಿದೆ ಎನ್ನುವುದನ್ನು ತೋರಿಸಿದೆ. 2014-15ರ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ 6.96 ಲಕ್ಷ ಕೋಟಿ ರೂನಷ್ಟು ನೇರ ತೆರಿಗೆ ಸಂಗ್ರಹ ಸಿಕ್ಕಿತ್ತು. ಹತ್ತು ವರ್ಷದ ಬಳಿಕ, ಅಂದರೆ 2023-24ರ ವರ್ಷದಲ್ಲಿ ಸಂಗ್ರಹವಾದ ನೇರ ತೆರಿಗೆಗಳ ಮೊತ್ತ 19.60 ಲಕ್ಷ ಕೋಟಿ ರೂ. ಹತ್ತು ವರ್ಷದಲ್ಲಿ ನೇರ ತೆರಿಗೆಗಳ ಸಂಗ್ರಹದಲ್ಲಿ ಬರೋಬ್ಬರಿ ಶೇ. 182ರಷ್ಟು ಹೆಚ್ಚಳವಾಗಿದೆ.
ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಗಳ ಸಂಗ್ರಹದಲ್ಲೂ ಸಾಕಷ್ಟು ಏರಿಕೆ ಆಗಿದೆ. ಕಾರ್ಪೊರೇಟ್ ಟ್ಯಾಕ್ಸ್ ಕಲೆಕ್ಷನ್ಗಳು ಹತ್ತು ವರ್ಷದಲ್ಲಿ ಎರಡು ಪಟ್ಟು ಬೆಳೆದಿವೆ. 2014-15ರಲ್ಲಿ 4.29 ಲಕ್ಷ ಕೋಟಿ ಇದ್ದ ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹ 2023-24ರಲ್ಲಿ 9.11 ಲಕ್ಷ ಕೋಟಿ ರೂಗೆ ಏರಿದೆ. ಕಾರ್ಪೊರೇಟ್ ಟ್ಯಾಕ್ಸ್ಗೆ ಹೋಲಿಸಿದರೆ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಸಂಗ್ರಹದಲ್ಲಿ ಇನ್ನೂ ಭರ್ಜರಿ ಏರಿಕೆ ಆಗಿದೆ.
ಇದನ್ನೂ ಓದಿ: ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶ ಶೇ. 14ರಷ್ಟು ಹೆಚ್ಚಳ; ಬೆಂಗಳೂರಿನಲ್ಲೇ ಹೆಚ್ಚು ಪೋಸ್ಟಿಂಗ್ಸ್
ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2014-15ರಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ 2.66 ಲಕ್ಷ ಕೋಟಿ ರೂ ಇತ್ತು. ಇದು 2023-24ರಲ್ಲಿ ಬರೋಬ್ಬರಿ 10.45 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ.
ಹಾಗೆಯೇ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವವರ ಸಂಖ್ಯೆಯಲ್ಲೂ ಗಮನಾರ್ಹವೆನಿಸುವ ಹೆಚ್ಚಳವಾಗಿದೆ. 2014-15ರಲ್ಲಿ 4.04 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು. ಹತ್ತು ವರ್ಷದ ಬಳಿಕ ಐಟಿ ರಿಟರ್ನ್ ಸಲ್ಲಿಸುವವರ ಸಂಖ್ಯೆ 8.61 ಕೋಟಿಯಾಗಿದೆ. ಅಂದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಾಗುವ ಸಂಖ್ಯೆ ಹತ್ತು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ.
ಆದಾಯ ತೆರಿಗೆ ಪಾವತಿದಾರರ ಸಂಖ್ಯೆಯಲ್ಲೂ ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಳವಾಗಿದೆ. 2014-15ರ ಅಸೆಸ್ಮೆಂಟ್ ವರ್ಷದಲ್ಲಿ 5.70 ಕೋಟಿ ತೆರಿಗೆ ಪಾವತಿದಾರರಿದ್ದರು. 2023-24 ಅಸೆಸ್ಮೆಂಟ್ ವರ್ಷದಲ್ಲಿ ಇವರ ಸಂಖ್ಯೆ 10.41 ಕೋಟಿಗೆ ಏರಿದೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಭಾರತದಲ್ಲಿ 400 ಕೋಟಿ ವ್ಯಾಕ್ಸಿನ್ ಡೋಸ್ ತಯಾರಿಕೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ
ಇನ್ನು ಜಿಡಿಪಿ ಮತ್ತು ನೇರ ತೆರಿಗೆ ನಡುವಿನ ಅನುಪಾತ ಹತ್ತು ವರ್ಷದಲ್ಲಿ ಶೇ. 5.55ರಿಂದ ಶೇ. 6.64ಕ್ಕೆ ಏರಿಕೆ ಆಗಿದೆ. ಅಂದರೆ 2014-15ರ ಹಣಕಾಸು ವರ್ಷದಲ್ಲಿ ಜಿಡಿಪಿಯಲ್ಲಿ ನೇರ ತೆರಿಗೆಯ ಪಾಲು ಶೇ. 5.55ರಷ್ಟಿತ್ತು. 2023-24ರಲ್ಲಿ ಈ ಪಾಲು ಶೇ. 6.64ಕ್ಕೆ ಹೆಚ್ಚಳವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Thu, 17 October 24