
ಸರ್ಕಾರದ ಹಲವು ಸೇವಿಂಗ್ ಸ್ಕೀಮ್ಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು. ದೀರ್ಘಾವಧಿ ಹೂಡಿಕೆ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಉತ್ತಮ ಆಯ್ಕೆಯೇನೋ ಹೌದು. ತೆರಿಗೆ ಲಾಭವೂ ಸಿಗುತ್ತದೆ. ಆದರೆ, ಪಿಪಿಎಫ್ ಸ್ಕೀಮ್ನಲ್ಲಿ ಆಕರ್ಷಣೆ ಕಡಿಮೆ ಮಾಡುವ ಅಂಶಗಳೂ ಇವೆ. ಇದಕ್ಕಿಂತ ಬೇರೆ ಉತ್ತಮ ಆಯ್ಕೆಗಳಿರುವುದರಿಂದ ಪಿಪಿಎಫ್ ಅನಿವಾರ್ಯ ಎಂಬಂತಿಲ್ಲ. ಪಿಪಿಎಫ್ ದೀರ್ಘಾವಧಿಗೆ ಉತ್ತಮ ಉಳಿತಾಯ ಯೋಜನೆಯಾದರೂ (Long Term Investment Scheme) ಕೆಲ ಋಣಾತ್ಮಕ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ:
ಪಿಪಿಎಫ್ ಶೇ. 7.1ರಷ್ಟು ವಾರ್ಷಿಕ ಬಡ್ಡಿ ಆಫರ್ ಮಾಡುತ್ತದೆ. ಇದಕ್ಕೆ ಹೋಲಿಸಿದರೆ ಇಪಿಎಫ್ನಲ್ಲಿರುವ ನಮ್ಮ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಸಿಗುತ್ತದೆ. ಹೀಗಾಗಿ, ಸಂಬಳ ಪಡೆಯುವ ವರ್ಗದವರು ಪಿಪಿಎಫ್ ಬದಲು ವಾಲಂಟರಿ ಪ್ರಾವಿಡೆಂಟ್ ಫಂಡ್ ಅಥವಾ ವಿಪಿಎಫ್ಗೆ ಹಣ ಹೂಡಿಕೆ ಮಾಡಬಹುದು. ಇದರಿಂದ ಬಡ್ಡಿಯೂ ಹೆಚ್ಚು ಸಿಗುತ್ತದೆ, ತೆರಿಗೆಯ ಲಾಭವೂಇರುತ್ತದೆ.
ಸಂಬಳದ ಆದಾಯ ಇಲ್ಲದ ಐಟಿ ಪಾವತಿದಾರರಿಗೆ ಪಿಪಿಎಫ್ ಮೇಲಿನ ಹೂಡಿಕೆ ಉತ್ತಮ ಆಯ್ಕೆ ಆಗಬಹುದು.
ಪಿಪಿಎಫ್ ಖಾತೆ ತೆರೆದರೆ 15 ವರ್ಷದವರೆಗೂ ಪಾಲಿಸಬೇಕಾಗುತ್ತದೆ. ಹೀಗಾಗಿ, ದೀರ್ಘಾವಧಿ ಹೂಡಿಕೆ ಮಾಡಬಯಸುವವರಿಗೆಂದು ಈ ಯೋಜನೆ ರೂಪಿಸಲಾಗಿದೆ. ಆದರೆ, ಕಿರು ಅವಧಿಗೆ, ಅಂದರೆ ಐದು ವರ್ಷದೊಳಗೆ ಹೂಡಿಕೆ ಮಾಡಬಯಸುವವರಿಗೆ ಪಿಪಿಎಫ್ ಅನನುಕೂಲವೆನಿಸುತ್ತದೆ. ಅವರು ಎಸ್ಐಪಿ, ಆರ್ಡಿ, ಎಫ್ಡಿ ಇತ್ಯಾದಿ ಯೋಜನೆಗಳಿಗೆ ಮೊರೆಹೋಗಬಹುದು.
ನೀವು ಒಮ್ಮೆ ಪಿಪಿಎಫ್ ಖಾತೆ ತೆರೆದರೆ 15 ವರ್ಷ ಕಟ್ಟುತ್ತಾ ಹೋಗಬೇಕು. ಒಂದು ವೇಳೆ ನಿಮಗೆ ಈ ಹೂಡಿಕೆ ಬೇಡವೆಂದೋ ಅಥವಾ ತುರ್ತಾಗಿ ಹಣ ಬೇಕಾಗಿ ಬಂತೋ ಆಗ ಅವಧಿಗೆ ಮುನ್ನ ನಿಮಗೆ ಬೇಕಾದಾಗ ಹಿಂಪಡೆಯಲು ಆಗಲ್ಲ. ಐದು ವರ್ಷದ ಬಳಿಕ ಹೂಡಿಕೆ ಹಿಂಪಡೆಯಲು ಅವಕಾಶ ಇದೆಯಾದರೂ ಅದು ತಲೆನೋವು ಕೊಡುವ ಷರತ್ತುಗಳಿವೆ.
ಪ್ರಾಣಾಪಾಯ ತರಬಲ್ಲ ರೋಗ ಇದ್ದರೆ; ಮಕ್ಕಳ ಉನ್ನತ ಶಿಕ್ಷಣ ವೆಚ್ಚ ಇದ್ದರೆ; ಖಾತೆದಾರರು ವಿದೇಶಕ್ಕೆ ಹೋಗುತ್ತಿದ್ದರೆ ಆಗ 5 ವರ್ಷದ ಬಳಿಕ ಪಿಪಿಎಫ್ ಖಾತೆಯನ್ನು ನಿಲ್ಲಿಸಬಹುದು. ಈ ರೀತಿ ಪೂರ್ವಾವಧಿಗೆ ಪಿಪಿಎಫ್ ಖಾತೆ ನಿಲ್ಲಿಸಿದರೆ ಶೇ. 1ರಷ್ಟು ಬಡ್ಡಿ ಮುರಿದುಕೊಳ್ಳಲಾಗುತ್ತದೆ.
ಆದರೆ, ಪಿಪಿಎಫ್ನಲ್ಲಿ ಒಂದು ಅನುಕೂಲವೆಂದರೆ ವರ್ಷಕ್ಕೆ 1.5 ಲಕ್ಷ ರೂವರೆಗೂ ನಾವು ಠೇವಣಿ ಇಡಬಹುದು. 500 ರೂ ಕೂಡ ಇಡಬಹುದು. ಪಿಪಿಎಫ್ ಮೇಲೆ ಹೂಡಿಕೆ ಸಾಕು ಎಂದನಿಸಿದವರು ಪೂರ್ಣಾವಧಿಯವರೆಗೆ ವರ್ಷಕ್ಕೆ 500 ರೂ ಕಟ್ಟುತ್ತಾ ಅದನ್ನು ಜೀವಂತವಾಗಿಟ್ಟುಕೊಳ್ಳುವ ಅವಕಾಶವೂ ಇದೆ.
Published On - 7:03 pm, Thu, 11 May 23