ಜಾಗತಿಕವಾಗಿ ಹಣದುಬ್ಬರದ ಮೇಲೆ ಹೆಚ್ಚುತ್ತಿರುವ ಆತಂಕದ ಮಧ್ಯೆ ಅಪಾಯದ ಭಾವನೆಗಳನ್ನು ಅನುಸರಿಸಿ, ತನ್ನ ಎರಡು ದಿನಗಳ ಏರಿಕೆ ಸರಪಳಿಯನ್ನು ಕಳಚಿದ್ದು, ರೂಪಾಯಿಯು ಗುರುವಾರ ಅಮೆರಿಕ ಡಾಲರ್‌ಗೆ (US Dollar) ವಿರುದ್ಧವಾಗಿ 15 ಪೈಸೆಗಳಷ್ಟು ಕುಸಿತ ಕಂಡು 77.40 (ತಾತ್ಕಾಲಿಕ)ಕ್ಕೆ ಕೊನೆಗೊಂಡಿತು. ದುರ್ಬಲ ದೇಶೀಯ ಷೇರುಗಳು, ವಿದೇಶೀ ಮಾರುಕಟ್ಟೆಗಳಲ್ಲಿ ಯುಎಸ್ ಡಾಲರ್ ಏರಿಕೆ ಮತ್ತು ನಿರಂತರ ವಿದೇಶಿ ಫಂಡ್ ಹೊರಹರಿವು ರೂಪಾಯಿಯ ಮೇಲೆ ತೂಗುತ್ತಿದೆ. ಇದು ಯುಎಸ್ ಡಾಲರ್ ವಿರುದ್ಧ ಸಾರ್ವಕಾಲಿಕ ಇಂಟ್ರಾ-ಡೇ ಕನಿಷ್ಠ ಮಟ್ಟ 77.63ಕ್ಕೆ ಕುಸಿದಿದೆ ಎಂದು ವಿದೇಶೀ ವಿನಿಮಯ ವಹಿವಾಟುದಾರರು ತಿಳಿಸಿದ್ದಾರೆ. ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು ಗ್ರೀನ್‌ಬ್ಯಾಕ್ ವಿರುದ್ಧ 77.52ಕ್ಕೆ ತೀವ್ರವಾಗಿ ಕಡಿಮೆಯಾಗಿದೆ ಮತ್ತು ದಿನದ ವಹಿವಾಟಿನಲ್ಲಿ 77.36ರಿಂದ 77.63ರ ವ್ಯಾಪ್ತಿಯಲ್ಲಿ ಚಲಿಸಿತು. ರೂಪಾಯಿ ಅಂತಿಮವಾಗಿ 77.40ಕ್ಕೆ ಕೊನೆಗೊಂಡಿದ್ದು, ಅದರ ಹಿಂದಿನ ಮುಕ್ತಾಯಕ್ಕಿಂತ 15 ಪೈಸೆ ಕಡಿಮೆಯಾಗಿದೆ.
ಡಾಲರ್ ಎದುರು ರೂಪಾಯಿ ಬುಧವಾರ 77.25ಕ್ಕೆ ಸ್ಥಿರವಾಗಿತ್ತು. ಮೇ 9ರಂದು ಗ್ರೀನ್‌ಬ್ಯಾಕ್ ವಿರುದ್ಧ ದೇಶೀಯ ಘಟಕವು ದಾಖಲೆಯ ಕನಿಷ್ಠ 77.44ರಲ್ಲಿ ಮುಚ್ಚಿತ್ತು. ಏಪ್ರಿಲ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಅಮೆರಿಕದಲ್ಲಿನ ಚಿಲ್ಲರೆ ಹಣದುಬ್ಬರ ದತ್ತಾಂಶವು ಯುಎಸ್ ಫೆಡರಲ್ ರಿಸರ್ವ್‌ನಿಂದ ಆಕ್ರಮಣಕಾರಿ ದರ ಹೆಚ್ಚಳದ ಆತಂಕವನ್ನು ಹೆಚ್ಚಿಸಿದ ನಂತರ ಜಾಗತಿಕ ಷೇರು ಮಾರುಕಟ್ಟೆಗಳು ಹಿನ್ನಡೆ ಅನುಭವಿಸಿದ್ದು, ಇದು ಬೆಳವಣಿಗೆಗೆ ಅಡ್ಡಿ ಆಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ದೇಶೀಯ ಈಕ್ವಿಟಿ ಮಾರುಕಟ್ಟೆಯ ಕಡೆ ನೋಡುವುದಾದರೆ, ಬಿಎಸ್‌ಇ ಸೆನ್ಸೆಕ್ಸ್ 1,158.08 ಪಾಯಿಂಟ್‌ಗಳು ಅಥವಾ ಶೇ 2.14 ಕಡಿಮೆಯಾಗಿ 52,930.31ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 359.10 ಪಾಯಿಂಟ್ ಅಥವಾ ಶೇ 2.22ರಷ್ಟು ಕುಸಿದು, 15,808ಕ್ಕೆ ತಲುಪಿದೆ.
ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.52ರಷ್ಟು ಏರಿಕೆಯಾಗಿ 104.39ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ. ಅವರು ಷೇರು ವಿನಿಮಯದ ಮಾಹಿತಿಯ ಪ್ರಕಾರ, ರೂ. 3,609.35 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೇ 2.32ರಷ್ಟು ಕುಸಿದು, ಯುಎಸ್ಡಿ 105.02ಕ್ಕೆ ಇಳಿದಿದೆ.
ಗ್ರಾಹಕ ಬೆಲೆ ಸೂಚ್ಯಂಕ (CPI) ಮತ್ತು ಕೈಗಾರಿಕಾ ಉತ್ಪಾದನೆ ಡೇಟಾವು ದಿನದ ನಂತರ ಬಿಡುಗಡೆ ಮಾಡಲು ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಹಣದುಬ್ಬರ ಅಂದಾಜುಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಮತ್ತು ಹಣದುಬ್ಬರ ತಹಬಂದಿಗೆ ತರಲು ದರ ಹೆಚ್ಚಳವನ್ನು ಪರಿಗಣಿಸುತ್ತದೆ, ಇದು ಅದರ ಗುರಿಯ ಮಟ್ಟಕ್ಕಿಂತ ಹೆಚ್ಚಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಜೂನ್ 6 ಮತ್ತು ಜೂನ್ 8ರ ಮಧ್ಯೆ ಸಭೆ ಸೇರಲಿದೆ. ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2ರಿಂದ 6ರ ವ್ಯಾಪ್ತಿಯಲ್ಲಿ ಇರಿಸಲು ಸರ್ಕಾರದಿಂದ ಆದೇಶಿಸಲಾಗಿದೆ.
ಅಮೆರಿಕದ ಬ್ರೋಕರೇಜ್ ಮೋರ್ಗನ್ ಸ್ಟಾನ್ಲಿ ಬುಧವಾರ ಜಾಗತಿಕ ಬೆಳವಣಿಗೆಗಳ ಮೇಲೆ 2022-23 ಮತ್ತು 2023-24ಕ್ಕೆ ತನ್ನ ಭಾರತದ ಬೆಳವಣಿಗೆಯ ಅಂದಾಜನ್ನು 30 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ ಮತ್ತು ಹಣದುಬ್ಬರದಂತಹ ಸೂಚಕಗಳು ಮುಂದೆ “ಕೆಟ್ಟದ್ದಾಗಲಿದೆ” ಎಂದು ಎಚ್ಚರಿಸಿದೆ. ಆರ್‌ಬಿಐ ಸೇರಿದಂತೆ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ನೀತಿ ದರಗಳನ್ನು ಬಿಗಿಗೊಳಿಸುವುದರಿಂದ ಮುಂದಿನ 6ರಿಂದ 8 ತಿಂಗಳಲ್ಲಿ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಮೂಲಗಳ ಪ್ರಕಾರ ಚೇತರಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೊತೆಗೆ, ಯುಎಸ್ ಫೆಡರಲ್ ರಿಸರ್ವ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಸೇರಿದಂತೆ ಹಲವಾರು ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರವನ್ನು ನಿಯಂತ್ರಿಸಲು ತಮ್ಮ ಮಾನದಂಡದ ಸಾಲದ ದರಗಳನ್ನು ಹೆಚ್ಚಿಸಿದ್ದು, ಇದು ರಷ್ಯಾ-ಉಕ್ರೇನ್ ಸಂಘರ್ಷದಿಂದ ಉಲ್ಬಣಗೊಂಡಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: USD Vs Rupee Value: ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ನೆಲ ಕಚ್ಚಲು ಇಲ್ಲಿವೆ ಕಾರಣಗಳು
Published On - 11:59 pm, Thu, 12 May 22