ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಆಗಿರುವ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ ಖರೀದಿಸಿದ್ದು, ವಾಕ್ ಸ್ವಾತಂತ್ರ್ಯ ಮತ್ತು ಚರ್ಚೆಗಳ ತಾಣವಾಗಿದ್ದ ಅತ್ಯಂತ ಪ್ರಭಾವಿ ಪಬ್ಲಿಕ್ ಜಾಲತಾಣ ಕಂಪನಿ ಇದೀಗ ಖಾಸಗಿ ಕಂಪನಿಯಾಗಿದೆ. ಎಲಾನ್ ಟ್ವಿಟರ್ ಅನ್ನು 3.36 ಲಕ್ಷ ಕೋಟಿಗೆ (44 ಬಿಲಿಯನ್ ಡಾಲರ್) ಖರೀದಿಸಿದ್ದಾರೆ. ಹದಿನಾರು ವರ್ಷ ಹಳೆಯ ಟ್ವಿಟರ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ವಹಿವಾಟು ಇದು ಎನ್ನಲಾಗಿದೆ. ಇದೀಗ ಮಸ್ಕ್ ಅವರು ಟ್ವಿಟರ್ (Twitter) ಅನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡ ನಂತರ ಟ್ರಂಪ್ ಅವರಿಗೆ ಮತ್ತೆ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ರಿಪಬ್ಲಿಕನ್ ಪಕ್ಷದ ಸಂಸದರು ‘ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಮುಕ್ತಗೊಳಿಸಲು ಇದು ಸೂಕ್ತ ಸಮಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕ್ ಪಕ್ಷವು 209 ಸಂಸದರನ್ನು ಒಳಗೊಂಡಿರುವ ಹೌಸ್ ರಿಪಬ್ಲಿಕನ್ಸ್ ಟ್ವಿಟರ್ ಖಾತೆಯು ಟ್ರಂಪ್ ಅವರ ಹೆಸರು ಪ್ರಸ್ತಾಪಿಸಿದೆ. ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಟ್ವಿಟರ್ ನಿರ್ಬಂಧವನ್ನು ಮುಕ್ತಗೊಳಿಸಲು ಇದು ಸಕಾಲ ಎಂದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ನಡೆದ ಜನವರಿ 6 ದಂಗೆ ವೇಳೆ, ಟ್ವಿಟರ್ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ನಿರ್ಬಂಧಿಸಿತ್ತು. ಟ್ರಂಪ್ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದ ಟ್ವಿಟರ್ ನಂತರ ಅವರ ಮೇಲೆ ನಿರ್ಬಂಧ ವಿಧಿಸಿತ್ತು. ಆ ಸಮಯದಲ್ಲಿ, ಟ್ರಂಪ್ ಸರಿಸುಮಾರು 89 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು.
ಇನ್ನು ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಭಾರತ ಮೂಲದ ಪರಾಗ್ ಅಗರವಾಲ್ ಈ ಬಗ್ಗೆ ಮಾತನಾಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ಮುಗಿದ ಬಳಿಕ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಒಂದು ವರ್ಷ ಕಳೆದರೂ ಅದನ್ನು ಮರಳಿ ನೀಡಿಲ್ಲ. ಈಗ ಮಸ್ಕ್ ಅವರು ಟ್ವಿಟರ್ ಅನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡ ನಂತರ ಟ್ರಂಪ್ ಅವರಿಗೆ ಮತ್ತೆ ಅವಕಾಶ ಸಿಗಲಿದೆಯೇ ಎಂದು ಸಿಬ್ಬಂದಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, “ಖರೀದಿ ಒಪ್ಪಂದ ಮುಗಿದ ಬಳಿಕ ಸಂಸ್ಥೆ ಯಾವ ದಿಕ್ಕಿನಲ್ಲಿ ಹೋಗಲಿದೆ ಎನ್ನುವುದು ನಮಗೆ ತಿಳಿದಿಲ್ಲ. ಎಲಾನ್ ಅವರ ಜತೆ ಮಾತನಾಡಲು ಅವಕಾಶ ಸಿಕ್ಕಾಗ, ಅವರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅವರಿಗೇ ಕೇಳಬೇಕೆಂದು ನಾನು ನಂಬಿದ್ದೇನೆ,” ಎಂದು ಅಗರವಾಲ್ ಹೇಳಿದ್ದಾರೆ.
ಇದರ ನಡುವೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ ಖಾತೆಯನ್ನು ಮರು ಚಾಲನೆಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ಬ್ಯಾನ್ ಮಾಡಿದ ಬಳಿಕ ಟ್ವಿಟರ್ಗೆ ಸೆಡ್ಡು ಹೊಡೆದಿದ್ದ ಟ್ರಂಪ್, ತಮ್ಮದೇ ವೇದಿಕೆಯಾದ ಟ್ರೂತ್ ಸೋಶಿಯಲ್ ಆರಂಭಿಸಿದ್ದರು. ಈ ವೇದಿಕೆ ಮೇಲೆಯೇ ಹೆಚ್ಚು ಗಮನ ಹರಿಸುವುದಾಗಿ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರಂತೆ. ನಾನು ಟ್ವಿಟರ್ಗೆ ಮರಳುತ್ತಿಲ್ಲ. ನಾನು ಸತ್ಯದ ದಾರಿಯಲ್ಲೇ ಉಳಿಯಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
Elon Musk: ಟ್ವಿಟರ್ ನನಗೆ ತುಂಬಾ ಇಷ್ಟ, ಇದಕ್ಕೆ ಎಷ್ಟು?: 2017 ರಲ್ಲಿ ಎಲಾನ್ ಮಸ್ಕ್ ಮಾಡಿದ ಟ್ವೀಟ್ ವೈರಲ್
Parag Agarwal: ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ರನ್ನು ಕೆಲಸದಿಂದ ತೆಗೆದಲ್ಲಿ 300 ಕೋಟಿ ರೂ.ಗೂ ಹೆಚ್ಚು ಪರಿಹಾರ