
ವಾಷಿಂಗ್ಟನ್, ಡಿಸೆಂಬರ್ 11: ಇಲ್ಲಿಗೆ ಬಂದು ಓದಿದ ಬುದ್ಧಿವಂತರನ್ನು ವಾಪಸ್ ಭಾರತಕ್ಕೆ ಕಳುಹಿಸೋದ್ಹೇಗ್ರೀ… ಶೇಮ್ ಶೇಮ್… ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವರಸೆಯ ಹೊಸ ವರ್ಶನ್. ಟ್ರಂಪ್ ಅವರು ವಲಸಿಗರಿಗಾಗಿ ‘ಗೋಲ್ಡ್ ಕಾರ್ಡ್’ ವೀಸಾ ಉತ್ಪನ್ನವನ್ನು ಅನಾವರಣಗೊಳಿಸುತ್ತಾ, ತಮ್ಮ ಹೊಸ ನೀತಿಯ ಸಾಧಕಗಳನ್ನು ವಿವರಿಸಿದ್ದಾರೆ. ಈ ಹೊಸ ನೀತಿಯ ಪ್ರಕಾರ, ಹಣಬಲ ಮತ್ತು ಬುದ್ಧಿಬಲ ಎರಡೂ ಇರುವ ವಲಸಿಗರು ಮಾತ್ರ ಅಮೆರಿಕಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಾ, ಪೌರತ್ವ ಪಡೆಯಲು ಅವಕಾಶ ಇರುತ್ತದೆ.
ಈ ಹೊಸ ನೀತಿಯಿಂದ ಡೊನಾಲ್ಡ್ ಟ್ರಂಪ್ ಒಂದೇ ಕಲ್ಲಿಗೆ ಎರಡು ಹಣ್ಣುಗಳನ್ನು ಉದುರಿಸಲು ನೋಡುತ್ತಿದ್ದಾರೆ. ಒಂದು, ಅಮೆರಿಕಕ್ಕೆ ಬಹಳ ಕೊರತೆಯಾಗಿರುವ ಪ್ರತಿಭೆಗಳನ್ನು ಸೆಳೆಯುವುದು. ಇನ್ನೊಂದು ಫಲ ಎಂದರೆ, ಅನವಶ್ಯಕ ವಲಸೆಯನ್ನು ನಿರ್ಬಂಧಿಸುವುದು.
ಅಮೆರಿಕದ ಹೊಸ ‘ಗೋಲ್ಡ್ ಕಾರ್ಡ್’ ವೀಸಾ ನೀತಿ ಪ್ರಕಾರ, ಅಮೆರಿಕಕ್ಕೆ ವಲಸೆ ಹೋಗಬಯಸುವ ವ್ಯಕ್ತಿಗಳು ಒಂದು ಮಿಲಿಯನ್ ಡಾಲರ್ ಹಣವನ್ನು ದಾನವಾಗಿ ಸರ್ಕಾರಕ್ಕೆ ಕೊಡಬೇಕು. ಒಂದು ಮಿಲಿಯನ್ ಡಾಲರ್ ಎಂದರೆ ಸುಮಾರು 9 ಕೋಟಿ ರೂಪಾಯಿ ಆಗುತ್ತದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಶೇ. 19, ಭಾರತಕ್ಕೆ ಶೇ. 50 ಸುಂಕ ಹಾಕಿದ್ದೇಕೆ ಅಮೆರಿಕ? ರಘುರಾಮ್ ರಾಜನ್ ಹೇಳಿದ್ದಿದು
ಗೋಲ್ಡ್ ಕಾರ್ಡ್ ವೀಸಾಗೆ ಅರ್ಜಿ ಸಲ್ಲಿಸುವವರು ಮೊದಲಿಗೆ ಅಮೆರಿಕದ ಗೃಹ ಭದ್ರತೆ ಇಲಾಖೆಗೆ 15,000 ಡಾಲರ್ (ಸುಮಾರು 14 ಲಕ್ಷ ರೂ) ಹಣವನ್ನು ಪ್ರೋಸಸಿಂಗ್ ಫೀ ಆಗಿ ಕೊಡಬೇಕು. ಈ ಹಣ ನಾನ್-ರೀಫಂಡಬಲ್. ಅಂದರೆ ನಿಮಗೆ ವೀಸಾ ಸಿಗಲಿ, ಬಿಡಲಿ, ಈ ಹಣ ವಾಪಸ್ ಬರೋದಿಲ್ಲ. ಇದಾದ ಬಳಿಕ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಅಮೆರಿಕಕ್ಕೆ ಅನುಕೂಲವಾಗಿ ಪರಿಣಮಿಸಬಲ್ಲಷ್ಟು ಬುದ್ಧಿಮಂತಿಕೆ, ನಿಷ್ಠೆ ನಿಮ್ಮಲ್ಲಿದೆಯಾ ಎಂದು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ನಂತರ, ನೀವು ಅಮೆರಿಕದ ಹಣಕಾಸು ಇಲಾಖೆಗೆ ಒಂದು ಮಿಲಿಯನ್ ಡಾಲರ್ ಅನ್ನು ಡೊನೇಟ್ ಮಾಡಬೇಕಾಗುತ್ತದೆ.
ವಿದೇಶೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಯಸುವ ಅಮೆರಿಕನ್ ಕಂಪನಿಗಳು, ಪ್ರತೀ ಉದ್ಯೋಗಿಗೆ ಎರಡು ಮಿಲಿಯನ್ ಡಾಲರ್ ಲೆಕ್ಕದಲ್ಲಿ ಹಣವನ್ನು ಸರ್ಕಾರಕ್ಕೆ ದಾನವಾಗಿ ಕೊಡಬೇಕು. ಸುಮಾರು 18 ಕೋಟಿ ರೂ ಅನ್ನು ಸರ್ಕಾರಕ್ಕೆ ಕೊಡಬೇಕು. ಹಾಗಾದಾಗ, ಗೋಲ್ಡ್ ಕಾರ್ಡ್ ವೀಸಾ ಸಿಗುತ್ತದೆ. ಇದರ ಜೊತೆಗೆ ಪ್ರೋಸಸಿಂಗ್ ಫೀ ಇತ್ಯಾದಿಯನ್ನೂ ಕಂಪನಿಯೇ ಸ್ಪಾನ್ಸರ್ ಮಾಡಬೇಕು.
ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?
ಇಲ್ಲಿಯೂ ಕೂಡ ಉದ್ಯೋಗಿಯು ಪ್ರತಿಭಾನ್ವಿತನಾಗಿರಬೇಕು ಎಂಬ ಷರತ್ತು ಇರುತ್ತದೆ. ಈ ವ್ಯಕ್ತಿ ಐದು ವರ್ಷ ಅಮೆರಿಕದಲ್ಲಿ ಇದ್ದು ತನ್ನ ತಾಕತ್ತು ಸಾಬೀತುಪಡಿಸಿದ ಬಳಿಕ ಅವರಿಗೆ ಆ ದೇಶದ ಪೌರತ್ವ ಸಿಗುತ್ತದೆ. ಒಂದು ವೇಳೆ, ಅವರಿಗೆ ಪೌರತ್ವ ಸಿಕ್ಕ ಬಳಿಕ ಅವರ ಹೆಸರಿನಲ್ಲಿ ಸರ್ಕಾರಕ್ಕೆ ಮಾಡಿದ್ದ ಎರಡು ಮಿಲಿಯನ್ ಡಾಲರ್ ಡೊನೇಶನ್ ಅನ್ನು ಬೇರೊಬ್ಬ ಉದ್ಯೋಗಿಯ ಹೆಸರಿಗೆ ವರ್ಗಾಯಿಸಲು ಕಂಪನಿಗಳಿಗೆ ಅವಕಾಶ ಇರುತ್ತದೆ.
ಅಮೆರಿಕದ ಯೂನಿವರ್ಸಿಟಿಗಳಲ್ಲಿ ಓದಿದ ವಿದೇಶೀ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಲ್ಲೇ ನೇಮಕಾತಿ ಮಾಡಿಕೊಳ್ಳುವ ಕಾರ್ಯಕ್ಕೂ ಈ ಗೋಲ್ಡ್ ಕಾರ್ಡ್ ವೀಸಾ ನೀತಿ ಅನ್ವಯ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Thu, 11 December 25