SBI E-Bank Guarantee: ಇ-ಬ್ಯಾಂಕ್ ಖಾತರಿ ಸೌಲಭ್ಯ ಆರಂಭಿಸಿದ ಎಸ್​ಬಿಐ; ಪಡೆಯಲು ಏನು ಮಾಡಬೇಕು?

| Updated By: Ganapathi Sharma

Updated on: Jan 13, 2023 | 4:20 PM

ಇ-ಬ್ಯಾಂಕ್ ಗ್ಯಾರಂಟೀ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್​​​ಇಎಸ್​ಎಲ್ ಪೋರ್ಟಲ್​ನಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ಬ್ಯಾಂಕ್​ನಿಂದ ಹೆಚ್ಚುವರಿ ದೃಢೀಕರಣ ಪಡೆಯುವುದು ಬೇಕಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

SBI E-Bank Guarantee: ಇ-ಬ್ಯಾಂಕ್ ಖಾತರಿ ಸೌಲಭ್ಯ ಆರಂಭಿಸಿದ ಎಸ್​ಬಿಐ; ಪಡೆಯಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
Follow us on

ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್ (NeSL) ಸಹಭಾಗಿತ್ವದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಇ-ಬ್ಯಾಂಕ್ ಖಾತರಿ ಅಥವಾ ಇ-ಬ್ಯಾಂಕ್ ಗ್ಯಾರಂಟೀ (e-BG) ಯೋಜನೆ ಆರಂಭಿಸಿದೆ. ಇ-ಸ್ಟಾಂಪಿಂಗ್ ಮತ್ತು ಇ-ಸಿಗ್ನೇಚರ್​ಗೆ ಪರ್ಯಾಯವಾಗಿ ಇ-ಬಿಜಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಪ್ರಸ್ತುತ ಬ್ಯಾಂಕ್​ ಸ್ಟಾಂಪಿಂಗ್ ಮತ್ತು ಸಿಗ್ನೇಚರ್ ಮೂಲಕ ಗ್ಯಾರಂಟೀ ನೀಡುತ್ತಿದೆ. ಇ-ಸ್ಟ್ಯಾಂಪ್​ ಮತ್ತು ಇ-ಸಿಗ್ನೇಚರ್ ಲಕ್ಷಣಗಳನ್ನು ಒಳಗೊಂಡಿರುವ ಎನ್​ಇಎಸ್​ಎಲ್​​ನ ಡಿಜಿಟಲ್ ಡಾಕ್ಯುಮೆಂಟ್ ಎಕ್ಸ್​ಕ್ಯೂಷನ್​ (ಡಿಡಿಇ) ತಂತ್ರಜ್ಞಾನ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯವನ್ನು ಸರಳವಾಗಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಬ್ಯಾಂಕ್ ಗ್ರಾಹಕರಿಗೆ ಏನು ಪ್ರಯೋಜನ?

ಬ್ಯಾಂಕ್ ಗ್ರಾಹಕರು ಮತ್ತು ಇತರ ಫಲಾನುಭವಿಗಳು ಈಗಾಗಲೇ ಎನ್​ಇಎಸ್​ಎಲ್ ಫ್ಲಾಟ್​ಫಾರ್ಮ್ ಸೇವೆ ಪಡೆಯುವವರಾಗಿದ್ದರೆ ಹೆಚ್ಚಿನ ದೃಢೀಕರಣ ಇಲ್ಲದೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ಪಡೆಯಲಿದ್ದಾರೆ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಸೇವೆ ಒದಗಿಸಲು ಬೇಕಾಗುವ ಹೆಚ್ಚುವರಿ ಸಮಯವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ಹೇಳಿದೆ. ಡಿಜಿಟಲ್ ಸೇವೆಗಳನ್ನು ನೀಡುವಲ್ಲಿ ಎಸ್​ಬಿಐ ಸದಾ ಮುಂಚೂಣಿಯಲ್ಲಿದೆ. ಎನ್​​ಇಎಸ್​ಎಲ್ ಜತೆ ಸೇರಿ ಗ್ರಾಹಕರಿಗೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ನೀಡಲು ಸಂತಸವಾಗುತ್ತಿದೆ ಎಂದು ಎಸ್​ಬಿಐ ಅಶ್ಯಕ್ಷ ದಿನೇಶ್ ಕುಮಾರ್ ಖರಾ ತಿಳಿಸಿದ್ದಾರೆ. ಎಸ್​​ಬಿಐನ ಸುಸ್ಥಿರ ಮತ್ತು ಗ್ರಾಹಕಸ್ನೇಹಿ ಬ್ಯಾಂಕಿಂಗ್ ಸೇವೆಗಳಿಗೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ.

ಇ-ಬ್ಯಾಂಕ್ ಗ್ಯಾರಂಟೀ ಎಂದರೇನು?

ಎನ್​​​ಇಎಸ್​ಎಲ್ ಹೇಳುವಂತೆ, ಗ್ರಾಹಕರ ದೈಹಿಕ ಹಾಜರಾತಿ ಇಲ್ಲದೆ ಆನ್​ಲೈನ್ ಮೂಲಕವೇ ಬ್ಯಾಂಕ್ ಗ್ಯಾರಂಟೀ ಒದಗಿಸುವುದನ್ನು ಇ-ಬ್ಯಾಂಕ್ ಗ್ಯಾರಂಟೀ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಬ್ಯಾಂಕ್ ಗ್ಯಾರಂಟೀ ನಿಡುವ ಪ್ರಕ್ರಿಯೆ 3-4 ದಿನಗಳ ಬದಲಾಗಿ ಕೆಲವೇ ನಿಮಿಷಗಳಲ್ಲಿ ಮುಗಿದುಹೋಗಲಿದೆ. ಇ-ಬ್ಯಾಂಕ್ ಗ್ಯಾರಂಟೀ ಪ್ರಕ್ರಿಯೆ ಕೆಲವೊಂದು ಡಿಜಿಟಲ್ ಹಂತಗಳ ಮೂಲಕ ನಡೆಯುತ್ತದೆ. ಅವುಗಳು ಹೀಗಿವೆ; ಬ್ಯಾಂಕ್ ಗ್ಯಾರಂಟೀ ಅರ್ಜಿ, ಪ್ರಿವೀವ್ ಮತ್ತು ಕನ್ಫರ್ಮೇಶನ್, ಕಾಗದರಹಿತ ಇ-ಸ್ಟ್ಯಾಂಪಿಂಗ್, ಇ-ಸೈನಿಂಗ್, ಎನ್​​​ಇಎಸ್​ಎಲ್ ಪೋರ್ಟಲ್​ನಲ್ಲಿ ಅಂತಿಮ ಹಂತದ ಬ್ಯಾಂಕ್ ಗ್ಯಾರಂಟೀ ಒದಗಿಸುವುದು, ಅಧಿಸೂಚನೆ ಹೊರಡಿಸುವುದು ಮತ್ತು ಗ್ರಾಹಕರಿಗೆ ಅಂತಿಮ ಬ್ಯಾಂಕ್ ಗ್ಯಾರಂಟೀ ಒದಗಿಸುವುದು.

ಇ-ಬ್ಯಾಂಕ್ ಗ್ಯಾರಂಟೀ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್​​​ಇಎಸ್​ಎಲ್ ಪೋರ್ಟಲ್​ನಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ಬ್ಯಾಂಕ್​ನಿಂದ ಹೆಚ್ಚುವರಿ ದೃಢೀಕರಣ ಪಡೆಯುವುದು ಬೇಕಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ