ಹಣದುಬ್ಬರದ ತಲೆನೋವು ಬಿಟ್ಟರೆ, ಭಾರತದ ಆರ್ಥಿಕತೆಯ ಸದ್ಯೋಭವಿಷ್ಯ ಉತ್ತಮ: ಸರ್ಕಾರದ ವರದಿ

|

Updated on: Mar 22, 2024 | 6:49 PM

Monthly Economic Review in February: 2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಗೆ ಶುಭ ಸೂಚನೆಗಳಿವೆ ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ. ಫೆಬ್ರುವರಿ ತಿಂಗಳ ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಭಾರತದ ಸದ್ಯೋಭವಿಷ್ಯದ ಆರ್ಥಿಕತೆ ಬಗ್ಗೆ ಸರ್ಕಾರ ತನ್ನದೇ ಲೆಕ್ಕಾಚಾರ ಹಾಕಿದೆ. ರೆಡ್ ಸೀ ಬಿಕ್ಕಟ್ಟಿನಿಂದ ಉದ್ಭವಿಸಬಹುದಾದ ಹಣದುಬ್ಬರ ಸಮಸ್ಯೆ ಮುಂತಾದ ಕೆಲವನ್ನು ಹೊರತುಪಡಿಸಿ ಉಳಿದಂತೆ ಆರ್ಥಿಕತೆಗೆ ಶುಭ ದಿನಗಳಿವೆ ಎಂದು ಹೇಳಿದೆ.

ಹಣದುಬ್ಬರದ ತಲೆನೋವು ಬಿಟ್ಟರೆ, ಭಾರತದ ಆರ್ಥಿಕತೆಯ ಸದ್ಯೋಭವಿಷ್ಯ ಉತ್ತಮ: ಸರ್ಕಾರದ ವರದಿ
ನಿರ್ಮಲಾ ಸೀತಾರಾಮನ್, ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಮಾರ್ಚ್ 22: ಮುಂಬರುವ ಹಣಕಾಸು ವರ್ಷದಲ್ಲಿ (2024-25) ಭಾರತಕ್ಕೆ ಆರ್ಥಿಕವಾಗಿ ಶುಭ ಸೂಚನೆಗಳನ್ನು ಸರ್ಕಾರ ಗುರುತಿಸಿದೆ. ಹಣಕಾಸು ಸಚಿವಾಲಯ ಇಂದು ಶುಕ್ರವಾರ ಬಿಡುಗಡೆ ಮಾಡಿದ ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ (monthly economic review report) ಆರ್ಥಿಕತೆ ಬಗ್ಗೆ ಸಕಾರಾತ್ಮಕ ಅಂಶಗಳನ್ನು ಹೇಳಿದೆ. ಜೊತೆಗೆ ಕಚ್ಚಾ ತೈಲ ಬೆಲೆ (crude oil prices) ಹೆಚ್ಚಳ, ಜಾಗತಿಕ ಸರಬರಾಜು ಸರಪಳಿಯ ಅಡಚಣೆಗಳ (supply chain disruption) ಸಂಕಟ ಹಾಗು ಹಣದುಬ್ಬರದ ಅಪಾಯದ ಕತ್ತಿ ಜೊತೆ ಜೊತೆಗೆ ಇರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ರೆಡ್ ಸೀ ಬಿಕ್ಕಟ್ಟಿನಿಂದ ತೊಂದರೆ

ಹಿಂದೂ ಮಹಾಸಾಗರದಲ್ಲಿ ಏಷ್ಯಾ ಆಫ್ರಿಕಾ ಮಧ್ಯೆ ಇರುವ ರೆಡ್ ಸೀ ಸಮುದ್ರ ಪ್ರದೇಶದಲ್ಲಿ ಬಂಡುಕೋರರಿಂದ ನಡೆಯುತ್ತಿರುವ ದಾಳಿ ಘಟನೆಗಳು ಜಾಗತಿಕ ವ್ಯಾವಹಾರಿಕ ಲೋಕವನ್ನು ನಡುಗಿಸುತ್ತಿವೆ. ಬಹಳಷ್ಟು ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಧಕ್ಕೆಯಾಗಿದೆ. ಭಾರತದ ಫೆಬ್ರುವರಿ ತಿಂಗಳ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಈ ರೆಡ್ ಸೀ ಬಿಕ್ಕಟ್ಟನ್ನು ಪ್ರಸ್ತಾಪಿಸಲಾಗಿದೆ. ಈ ಬಿಕ್ಕಟ್ಟಿನಿಂದಾಗಿ ತೈಲ ಬೆಲೆಗಳು ಹೆಚ್ಚಾಗಬಹುದು. ಅದರ ಪರಿಣಾಮವಾಗಿ ಹಣದುಬ್ಬರ ಏರಿಕೆ ಆಗಬಹುದು. ಅಂತಿಮವಾಗಿ ಆರ್ಥಿಕ ಬೆಳವಣಿಗೆಯ ವೇಗದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ವೈಮಾನಿಕ ದಾಳಿ; ಮಹಿಳೆ, ಮಕ್ಕಳು ಸೇರಿದಂತೆ 8 ಮಂದಿ ಸಾವು

ವಿಶ್ವದ ಶೇ 30ರಷ್ಟು ಸರಕು ಸಾಗಣೆ ಹಡಗುಗಳು ಈ ರೆಡ್ ಸೀ ಮೂಲಕವೇ ಹಾದು ಹೋಗುತ್ತವೆ. ವಿಶ್ವದ ಶೇ. 12ರಷ್ಟು ವ್ಯವಹಾರಗಳು ಈ ಸರಕು ಸಾಗಣೆ ಹಡುಗಗಳಿಂದ ಆಗುತ್ತವೆ. ಅದರಲ್ಲೂ ಪೆಟ್ರೋಲ್, ಡೀಸಲ್ ಇತ್ಯಾದಿ ವಸ್ತುಗಳ ಸಾಗಣೆ ಹೆಚ್ಚಿರುತ್ತದೆ. ರೆಡ್ ಸೀ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ದುಬಾರಿ ಆಗಬಹುದು. ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಎಡೆ ಮಾಡಿಕೊಡಬಹುದು ಎಂಬ ಭಯ ಇದೆ.

ಚೀನಾ, ಜಪಾನ್, ಭಾರತ, ಸೌತ್ ಕೊರಿಯಾ ಮೊದಲಾದ ದೇಶಗಳು ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತವೆ. ಇದು ಇಲ್ಲೆಲ್ಲಾ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳಕ್ಕೆ ನಾಂದಿ ಹಾಡಬಹುದು. ಭಾರತದ ಶೇ. 80ರಷ್ಟು ತೈಲ ಅವಶ್ಯಕತೆಯನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಹೀಗಾಗಿ, ಭಾರತದ ಮೇಲೂ ಬೆಲೆ ಏರಿಕೆ ಸಾಧ್ಯತೆಯ ತೂಗುಗತ್ತಿ ಇದೆ.

ಇದನ್ನೂ ಓದಿ: ಅಮೆರಿಕದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ಚೀಫ್ ರಾಜೀನಾಮೆ

ಕುತೂಹಲ ಎಂದರೆ ರೆಡ್ ಸೀ ಪ್ರದೇಶದಲ್ಲಿ ಹೌತಿಗಳ ಉಪದ್ರವ ಶುರುವಾಗಿ ತಿಂಗಳುಗಳೇ ಆಗಿವೆ. ಆದರೂ ಕೂಡ ಭಾರತದ ರಫ್ತು ಮತ್ತು ಆಮದಿನ ಮೇಲೆ ಈವರೆಗೆ ಹೆಚ್ಚಿನ ಪರಿಣಾಮ ಬೀರಿರುವಂತೆ ತೋರುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಅಂಕಿ ಅಂಶ ಬಿಡುಗಡೆ ಆಗಬೇಕಷ್ಟೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ