ಅಮೆರಿಕದ ರಾಬಿನ್ಹುಡ್ ಮಾರ್ಕೆಟ್ಸ್ನ ಸಹ-ಸಂಸ್ಥಾಪಕ ಬೈಜು ಭಟ್ ಚೀಫ್ ರಾಜೀನಾಮೆ
Robinhood Markets Chief Creative Officer Baiju Bhatt Resigns: ಅಮೆರಿಕದ ರಾಬಿನ್ಹುಡ್ ಮಾರ್ಕೆಟ್ಸ್ನ ಸಹ-ಸಂಸ್ಥಾಪಕ ಬೈಜು ಭಟ್ ರಾಜೀನಾಮೆ ನೀಡಿದ್ದಾರೆ. ಚೀಫ್ ಕ್ರಿಯೇಟಿವ್ ಆಫೀಸರ್ ಸ್ಥಾನದಿಂದ ಅವರು ಕೆಳಗಿಳಿದಿದ್ದಾರೆ. 2013ರಲ್ಲಿ ಅವರು ಮತ್ತು ವ್ಲಾದಿಮಿರ್ ಟೆನೆವ್ ಇಬ್ಬರೂ ಸೇರಿ ರಾಬಿನ್ಹುಡ್ ಕಂಪನಿಯನ್ನು ಕಟ್ಟಿದ್ದರು. ಭಾರತ ಮೂಲದ ಬೈಜು ಭಟ್ ಮುಂದಿನ ದಿನಗಳಲ್ಲಿ ಬೇರೆ ಹೊಸ ಬಿಸಿನೆಸ್ಗಳನ್ನು ಆರಂಭಿಸುವ ಸಾಧ್ಯತೆ ಇದೆ. ವ್ಲಾದಿಮಿರ್ ಟೆನೆವ್ ರಾಬಿನ್ಹುಡ್ನಲ್ಲಿ ಸಿಇಒ ಆಗಿ ಮುಂದುವರಿಯಲಿದ್ದಾರೆ.
ಕ್ಯಾಲಿಫೋರ್ನಿಯಾ, ಮಾರ್ಚ್ 22: ಅಮೆರಿಕದ ಟ್ರೇಡಿಂಗ್ ಕಂಪನಿಯಾದ ರಾಬಿನ್ಹುಡ್ ಮಾರ್ಕೆಟ್ಸ್ನ ಸಹ-ಸಂಸ್ಥಾಪಕ ಬೈಜು ಭಟ್ (Baiju Bhatt) ತಮ್ಮ ಚೀಫ್ ಕ್ರಿಯೇಟಿವ್ ಆಫೀಸರ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಒಂದು ದಶಕದ ಕಾಲ ಕಂಪನಿಯ ಉನ್ನತ ಹುದ್ದೆಯಲ್ಲಿದ್ದು ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲದ ಬೈಜು ಭಟ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಕೆಲ ವರದಿ ಪ್ರಕಾರ ಅವರು ಬೇರೆ ಬಿಸಿನೆಸ್ಗಳನ್ನು ಆರಂಭಿಸುವ ಸಲುವಾಗಿ ರಾಬಿನ್ಹುಡ್ ಮಾರ್ಕೆಟ್ಸ್ನಿಂದ (Robinhood Markets) ನಿರ್ಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬೈಜು ಭಟ್ ಅವರು ರಾಬಿನ್ಹುಡ್ನ ನಿರ್ದೇಶಕ ಮಂಡಳಿಯಲ್ಲಿ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಬೈಜು ಭಟ್ ತನ್ನ ಸಹಪಾಠಿಯೊಂದಿಗೆ ಕಟ್ಟಿದ ಕಂಪನಿ ರಾಬಿನ್ಹುಡ್
ಬೈಜು ಪ್ರಫುಲ್ಕುಮಾರ್ ಭಟ್ ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಮತ್ತು ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲಸಿದವರು. ಬೈಜು ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ಟಾನ್ಫೋರ್ಡ್ನಲ್ಲಿ ಓದುವಾಗ ಸಹಪಾಠಿಯಾಗಿದ್ದ ಬಲ್ಗೇರಿಯಾ ಮೂಲದ ವ್ಲಾದಿಮಿರ್ ಟೆನೆವ್ ಅವರ ಜೊತೆ ಸೇರಿ 2013ರಲ್ಲಿ ರಾಬಿನ್ಹುಡ್ ಎಂಬ ಟ್ರೇಡಿಂಗ್ ಪ್ಲಾಟ್ಫಾರ್ಮ್ ಆರಂಭಿಸಿದರು.
ಇದನ್ನೂ ಓದಿ: ಅಂಬಾನಿ ಕುಟುಂಬದ ಹೊಸ ಸ್ಟಾರ್ ಅನ್ಮೋಲ್; ಅಪ್ಪ ಅನಿಲ್ ಅಂಬಾನಿಗೆ ಸಿಕ್ಕಿದೆ ಮಗನ ಬಲ
ರಾಬಿನ್ಹುಡ್ ಹೆಸರು ನೀವು ಕೇಳಿರಬಹುದು. ಅದು ಖ್ಯಾತ ದರೋಡೆಕೋರನ ಹೆಸರು. ಶ್ರೀಮಂತರಿಂದ ಹಣ ದರೋಡೆ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ ವ್ಯಕ್ತಿ. ಆ ಹೆಸರನ್ನು ಉದ್ದೇಶಪೂರ್ವಕವಾಗಿ ಬೈಜು ಮತ್ತು ವ್ಲಾದಿಮಿರ್ ತಮ್ಮ ಕಂಪನಿಗೆ ಇಟ್ಟಿದ್ದರು. ಅಮೆರಿಕದಲ್ಲಿ ಅಸಮಾನತೆ, ಕಾರ್ಪೊರೇಟ್ ದರ್ಪ, ಕಾಂಚಾಣದ ಆಟ ಇವೆಲ್ಲಾ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಎರಡು ದಶಕದ ಹಿಂದೆ ಜನಾಕ್ರೋಶ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ 2011ರಲ್ಲಿ ವಾಲ್ಸ್ಟ್ರೀಟ್ ಆಕ್ರಮಣದ (Occupy Wall Street) ಹೋರಾಟವೇ ನಡೆದಿತ್ತು.
ಈ ಬೆಳವಣಿಗೆಗಳಿಂದ ಪ್ರೇರಿತರಾಗಿ ವ್ಲಾದಿಮಿರ್ ಟೆನೆವ್ ಮತ್ತು ಬೈಜು ಭಟ್ ತಮ್ಮ ಟ್ರೇಡಿಂಗ್ ಪ್ಲಾಟ್ಫಾರ್ಮ್ಗೆ ರಾಬಿನ್ಹುಡ್ ಪ್ಲಾಟ್ಫಾರ್ಮ್ ಎಂದು ಇಟ್ಟಿದ್ದರು. ಇದು ಕಮಿಷನ್ರಹಿತ ಟ್ರೇಡಿಂಗ್ ಸೌಲಭ್ಯ ಕೊಡುವ ಕಂಪನಿ. ಎಲ್ಲಾ ಆರ್ಥಿಕ ವರ್ಗಗಳ ಜನರಿಗೂ ಟ್ರೇಡಿಂಗ್ ಎಟುಕಬೇಕು ಎಂಬ ಕಲ್ಪನೆಯಲ್ಲಿ ಝೀರೋ ಟ್ರೇಡಿಂಗ್ ಕಮಿಷನ್ ಸೌಲಭ್ಯ ಕೊಡಲಾಗಿತ್ತು.
ಇದನ್ನೂ ಓದಿ: ಪುಟಿದೆದ್ದ ಅನಿಲ್ ಅಂಬಾನಿ; ಸಾಲಗಳನ್ನು ತೀರಿಸಿ ಮೈಕೊಡವುತ್ತಿರುವ ಮುಕೇಶ್ ಸಹೋದರ; ರಿಲಾಯನ್ಸ್ ಪವರ್ ಷೇರುಪೇಟೆಯಲ್ಲಿ ಹೊಸ ಖದರ್
ಸದ್ಯ ರಾಬಿನ್ಹುಡ್ನ ಇಬ್ಬರು ಸಂಸ್ಥಾಪಕರಲ್ಲಿ ಒಬ್ಬರು ನಿರ್ಗಮನವಾಗಿದೆ. ವ್ಲಾದಿಮಿರ್ ಟೆನೆವ್ ಸಿಇಒ ಆಗಿ ಮುಂದುವರಿಯಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ