Chinese Apps: ಬೆಂಗಳೂರಿನಲ್ಲಿ ದಾಖಲಾದ 25 ಎಫ್​ಐಆರ್​ಗಳ ಜಾಡು ಹಿಡಿದ ಇಡಿ; ಚೀನೀ ಜಾಲದ ಕರ್ಮಕಾಂಡ ಬಯಲು

|

Updated on: Jul 14, 2023 | 5:31 PM

ED Probe On Chinese Loan Apps: ಬೆಂಗಳೂರಿನಲ್ಲಿ ಕಳೆದ ವರ್ಷ ಲೋನ್ ಅ್ಯಪ್​ಗಳ ವಿರುದ್ಧ ದಾಖಲಾಗಿದ್ದ 25 ಪ್ರಕರಣಗಳನ್ನು ತನಿಖೆ ನಡೆಸಿದ ಇಡಿ ಇದೀಗ ಈ ಪ್ರಕರಣಗಳು ಚೀನಾದ ನಂಟು ಹೊಂದಿರುವುದನ್ನು ಪತ್ತೆ ಮಾಡಿದೆ.

Chinese Apps: ಬೆಂಗಳೂರಿನಲ್ಲಿ ದಾಖಲಾದ 25 ಎಫ್​ಐಆರ್​ಗಳ ಜಾಡು ಹಿಡಿದ ಇಡಿ; ಚೀನೀ ಜಾಲದ ಕರ್ಮಕಾಂಡ ಬಯಲು
ಲೋನ್ ಆ್ಯಪ್
Follow us on

ಬೆಂಗಳೂರು, ಜುಲೈ 14: ಚೀನಾದ ಲೋನ್ ಆ್ಯಪ್​ಗಳ (Chinese Loan Apps) ಬಗ್ಗೆ ಬಹಳಷ್ಟು ಸುದ್ದಿಗಳನ್ನು ಓದಿರಬಹುದು. ಇದು ಬಹಳ ವ್ಯವಸ್ಥಿತ ಜಾಲವಾಗಿ ಕಾರ್ಯನಿರ್ವಹಿಸುತ್ತಿರುವ ಸಂಗತಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ. ಬೆಂಗಳೂರಿನ ಇಡಿ ವಲಯದಲ್ಲಿ ದಾಖಲಾದ 25 ಎಫ್​ಐಆರ್​ಗಳ ತನಿಖೆ ಶುರುವಿಟ್ಟುಕೊಂಡ ಜಾರಿ ನಿರ್ದೇಶನಾಲಯ ಒಂದು ವರ್ಷದಲ್ಲಿ ಬಹಳಷ್ಟು ಶಾಕಿಂಗ್ ಸಂಗತಿಗಳನ್ನು ಬಯಲಿಗೆ ಎಳೆದಿದೆ. ಬ್ಲ್ಯಾಕ್​ಮೇಲ್, ಮನಿ ಲಾಂಡರಿಂಗ್, ವಿದೇಶೀ ಬ್ಯಾಂಕುಗಳ ನೆರವು, ಎನ್​ಬಿಎಫ್​ಸಿಗಳ ನಂಟು, ಕ್ರಿಪ್ಟೋ ಇತ್ಯಾದಿ ವಿಚಾರಗಳು ಇಡಿ ತನಿಖೆಯಿಂದ ಬೆಳಕಿಗೆ ಬಂದಿವೆ. ನ್ಯೂಸ್18 ಸುದ್ದಿವಾಹಿನಿಯಲ್ಲಿ ಪ್ರಕಟವಾದ ವರದಿ ಪ್ರಕಾರ ಕೆಲ ಖಾಸಗಿ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕುಗಳ ಸಹಾಯದಿಂದ ಚೀನಾಗೆ 3,000 ಕೋಟಿ ರೂನಷ್ಟು ಹಣ ಅಕ್ರಮವಾಗಿ ವರ್ಗಾವಣೆ ಆಗಿದೆಯಂತೆ.

2022ರಲ್ಲಿ ಇಡಿ ಈ ಪ್ರಕರಣಗಳ ಬೆನ್ನು ಹತ್ತಿತ್ತು. ಈ ಪ್ರಕರಣಗಳಲ್ಲಿ ಎಲ್ಲಾ ಹಣಕಾಸು ಹರಿವು ಚೀನಾದತ್ತಲೇ ಹೋಗುತ್ತಿರುವುದನ್ನು ಇಡಿ ಗುರುತಿಸಿದೆ. ಆ ಎಲ್ಲಾ 25 ಎಫ್​ಐಆರ್​ಗಳನ್ನು ಒಂದುಗೂಡಿಸಿ ಪಿಎಂಎಲ್​ಎ ಮತ್ತು ಫೆಮಾ ಅಡಿಯಲ್ಲಿ ಆರು ಪ್ರಕರಣಗಳಾಗಿ ವರ್ಗೀಕರಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ) ಅಡಿಯಲ್ಲಿ 4 ಪ್ರಕರಣಗಳು ಹಾಗೂ ವಿದೇಶೀ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅಡಿಯಲ್ಲಿ ಎರಡು ಪ್ರಕರಣಗಳನ್ನು ಇಡಿ ಆರಂಭಿಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳು ಈ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿXiaomi: ಅರಬ್ ದೇಶಗಳಿಗೆ ರಫ್ತಾಗಲಿವೆಯಾ ‘ಮೇಡ್ ಇನ್ ಇಂಡಿಯಾ’ ಶಿಯೋಮಿ ಫೋನ್​ಗಳು? ಡಿಕ್ಸಾನ್ ಜೊತೆಗೂ ಶಿಯೋಮಿ ಮಾತುಕತೆ

ಚೀನೀ ಲೋನ್ ಮತ್ತು ಇನ್ವೆಸ್ಟ್​ಮೆಂಟ್ ಆ್ಯಪ್​ಗಳು

ಚೀನೀ ರಾಷ್ಟ್ರೀಯರು ಭಾರತದ ಹಣಕಾಸು ವ್ಯವಸ್ಥೆಯ ಮೇಲೆ ಪ್ರಹಾರ ಮಾಡಲು ಲೋನ್ ಆ್ಯಪ್​ಗಳ ಮಾರ್ಗ ಹುಡುಕಿರುವುದ ತನಿಖೆಯಿಂದ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ದಾಖಲಾದ 25 ಪ್ರಕರಣಗಳಲ್ಲಿ ಬಹುತೇಕವು ಚೀನಾ ಆ್ಯಪ್​ಗಳಿಂದ ಎದುರಾದ ಧಮಕಿ, ಸುಲಿಗೆ, ಬ್ಲ್ಯಾಕ್​ಮೇಲ್, ರಕ್ಕಸ ಬಡ್ಡಿ ಇತ್ಯಾದಿ ಬಗ್ಗೆ ಇದ್ದ ದೂರುಗಳೇ ಆಗಿದ್ದವು. ಈ ಆ್ಯಪ್​ಗಳು ಸುಲಭವಾಗಿ ಸಾಲ ಕೊಟ್ಟು ವಿಪರೀತ ಬಡ್ಡಿ ವಿಧಿಸುತ್ತಿದ್ದವು. ಏಳು ದಿನದಲ್ಲಿ ಶೇ. 40ರಷ್ಟು ಬಡ್ಡಿ ದರ ಕಟ್ಟು ಎಂದರೆ ಯಾರಿಂದ ಸಾಧ್ಯವಾದೀತು? ಸಾಲ ಪಡೆದವರ ಮೇಲೆ ಬೆದರಿಕೆ ಹಾಕುವುದು, ಮೊಬೈಲ್​ಗಳಲ್ಲಿರುವ ಡಾಟಾ ಕದ್ದು ಅದರ ಮೂಲಕ ಬ್ಲ್ಯಾಕ್​ಮೇಲ್ ಮಾಡಿ ಹಣ ವಸೂಲಿ ಮಾಡುವುದು ಇತ್ಯಾದಿಯನ್ನು ಮಾಡಲಾಗುತ್ತಿತ್ತು.

ಕಮಿಷನ್ ಆಸೆಗೆ ಬಿದ್ದವಾ ಎನ್​ಬಿಎಫ್​ಸಿಗಳು?

ಚೀನೀ ರಾಷ್ಟ್ರೀಯರು ಭಾರತದ ಹಣಕಾಸು ವ್ಯವಸ್ಥೆಗೆ ಘಾಸಿ ತರಲು ಒಂದು ಜಾಲವನ್ನೇ ರೂಪಿಸಿದ್ದರು. ಎನ್​ಬಿಎಫ್​ಸಿಗಳ ಹೆಸರು ಮುಂದಿಟ್ಟುಕೊಂಡು ಚೀನೀ ಲೋನ್ ಕಂಪನಿಗಳು ಜನರನ್ನು ಸೆಳೆಯುತ್ತಿದ್ದವು. ಹಣ ಪಾವತಿಗೆ ಅವಕಾಶ ಕೊಡುವ ಪೇಮೆಂಟ್ ಗೇಟ್​ವೇಗಳನ್ನು ಏಮಾರಿಸಿ ಮರ್ಚೆಂಟ್ ಐಡಿ ಪಡೆಯುತ್ತಿದ್ದವು. ಕೆಲ ಎನ್​ಬಿಎಫ್​ಸಿಗಳು ಇಂಥ ಚೀನೀ ಕಂಪನಿಗಳಿಗೆ ಪೇಮೆಂಟ್ ಗೇಟ್​ವೇಗಳಿಂದ ಮರ್ಚೆಂಟ್ ಐಡಿ ಸಿಗುವಂತೆ ನೆರವಾಗುತ್ತಿದ್ದವಂತೆ.

ಇದನ್ನೂ ಓದಿFoxconn: ಸೆಮಿಕಂಡಕ್ಟರ್ ಯೋಜನೆ: ವೇದಾಂತ ಬಿಟ್ಟ ಫಾಕ್ಸ್​ಕಾನ್ ಈಗ ಹೊಸ ಜೊತೆಗಾರಿಕೆಗೆ ಟಿಎಸ್​ಎಂಸಿ, ಟಿಎಂಎಚ್ ಜೊತೆ ಮಾತುಕತೆ

ಚೀನೀ ಜನರ ಡಮ್ಮಿ ಕಂಪನಿಗಳಿಗೆ ಡಮ್ಮಿ ಡೈರೆಕ್ಟರುಗಳನ್ನು ಹೆಸರಿಸಲಾಗುತ್ತಿತ್ತು. ಆದರೆ, ಈ ನಿರ್ದೇಕರ ಬದಲು ಚೀನೀಯರೇ ನೇರವಾಗಿ ಎನ್​ಬಿಎಫ್​ಸಿಗಳ ಜೊತೆ ವ್ಯವಹಾರ ಕುದುರಿಸಿ ಒಪ್ಪಂದಗಳಿಗೆ ಸಹಿಹಾಕುತ್ತಿದ್ದರು. ಸಾಲದ ವ್ಯವಹಾರ ಕೊಡಲು ಈ ಚೀನೀ ಕಂಪನಿಗಳಿಗೆ ಎನ್​ಬಿಎಫ್​ಸಿಗಳು ಪರವಾನಿಗೆ ಕೊಟ್ಟಿದ್ದವು. ಕಮಿಷನ್ ಆಸೆಗೆ ಹಣಕಾಸು ಸಂಸ್ಥೆಗಳಿಂದ ಈ ಕೆಲಸ ಆಗಿತ್ತು.

ಇನ್ನು, ಚೀನೀ ಕಂಪನಿಗಳ ವೆಬ್​ಸೈಟ್​ನಲ್ಲಿ ಲಾಗಿನ್ ಆಗದೇ ಪೇಮೆಂಟ್ ಮಾಡುವ ಬಟನ್ ಅನ್ನು ಸೇರಿಸಲಾಗಿತ್ತು. ಇದರಿಂದ ಪೇಮೆಂಟ್ ಗೇಟ್​ವೇ ಕಂಪನಿಗಳಿಗೆ ಈ ಕಂಪನಿಗಳ ನಿಜ ವ್ಯವಹಾರ ಗೊತ್ತಾಗುತ್ತಿರಲಿಲ್ಲ. ಈ ರೀತಿಯಲ್ಲಿ ಹಣವನ್ನು ಚೀನೀಯರು ಲಪಟಾಯಿಸುತ್ತಿದ್ದರು. ಕೆಲವೊಮ್ಮೆ ಕ್ರಿಪ್ಟೋ ಮೂಲಕ ಹಣದ ವರ್ಗಾವಣೆ ಆಗುತ್ತಿತ್ತು ಎಂದೂ ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ