
ನವದೆಹಲಿ, ಆಗಸ್ಟ್ 20: ಇಲಾನ್ ಮಸ್ಕ್ ಮಾಲಕತ್ವದ ಸ್ಟಾರ್‌ಲಿಂಕ್ (Starlink) ಸಂಸ್ಥೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Satcom) ಸೇವೆಗಳನ್ನು ಒದಗಿಸಲು ಅನುಮತಿಗಾಗಿ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಭಾರತೀಯ ಬಾಹ್ಯಾಕಾಶ ನಿಯಂತ್ರಕ ಸಂಸ್ಥೆಯಾದ IN-SPACe ಗೆ ಸ್ಟಾರ್‌ಲಿಂಕ್ ಅರ್ಜಿ ಸಲ್ಲಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಸ್ಟಾರ್‌ಲಿಂಕ್ ತನ್ನ ‘Gen 2’ (ಎರಡನೇ ತಲೆಮಾರಿನ) ಉಪಗ್ರಹ ಸಮೂಹವನ್ನು ನಿಯೋಜಿಸಲು IN-SPACe ನಿಂದ ಅನುಮತಿಯನ್ನು ಕೋರಿದೆ. ಭೂಮಿಯಿಂದ 340-615 ಕಿಮೀ ಎತ್ತರದ ಕೆಳ ಭೂ ಕಕ್ಷೆಯಲ್ಲಿ (Low Earth Orbit – LEO) ನಿಯೋಜಿಸಿರುವ ಸುಮಾರು 30,000 ಉಪಗ್ರಹಗಳನ್ನು ಬಳಸಿ ಉಪಗ್ರಹ ಇಟರ್ನೆಟ್ ಸೇವೆ ನೀಡಲು ಸ್ಟಾರ್‌ಲಿಂಕ್ ಅನುಮತಿ ಕೇಳುತ್ತಿದೆ.
ಇದನ್ನೂ ಓದಿ: ಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ
Direct-to-Device (D2D) ತಂತ್ರಜ್ಞಾನ: ಈ ಹೊಸ ತಂತ್ರಜ್ಞಾನದ ಮೂಲಕ ಯಾವುದೇ ವಿಶೇಷ ಆಂಟೆನಾ ಅಥವಾ ರಿಕೀವರ್ ಇಲ್ಲದೆ ನೇರವಾಗಿ ಮೊಬೈಲ್ ಫೋನ್‌ಗಳಿಗೇ ಸ್ಯಾಟಲೈಟ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ಸೌಲಭ್ಯವನ್ನು ನೀಡಲು ಕಂಪನಿ ಯೋಜನೆ ರೂಪಿಸಿದೆ.
ಈ ಮೊದಲು Starlink ಸಲ್ಲಿಸಿದ್ದ Gen 2 ಅರ್ಜಿಯನ್ನು ಕೆಲವು ತಾಂತ್ರಿಕ ಮತ್ತು ಸ್ಪೆಕ್ಟ್ರಮ್ ನಿಯಮಗಳ ಅನುಸರಣೆ ಇಲ್ಲದ ಕಾರಣ IN-SPACe ತಿರಸ್ಕರಿಸಿತ್ತು. ಜುಲೈ 2025 ರಲ್ಲಿ ಕೇವಲ Gen 1 (4,408 ಉಪಗ್ರಹಗಳು) ಶ್ರೇಣಿಗೆ ಮಾತ್ರ ಅನುಮೋದನೆ ನೀಡಲಾಗಿತ್ತು.
ಭಾರತ ಸರಕಾರವು D2D ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್ ನೀತಿಗಳನ್ನು ಸಡಿಲಗೊಳಿಸಲು ಪರಿಶೀಲಿಸುತ್ತಿರುವ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದಾಗಿ ರಿಲಯನ್ಸ್ ಜಿಯೋ, ಈಟೆಲ್‌ಸ್ಯಾಟ್ ಒನ್‌ವೆಬ್ ಮತ್ತು ಟಾಟಾ ಬೆಂಬಲಿತ ನೆಲ್ಕೋ (Nelco) ಕಂಪನಿಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ.
ಇದನ್ನೂ ಓದಿ: ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ
ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸಂಸ್ಥೆ ಕೆಳ ಭೂ ಕಕ್ಷೆಯಾದ್ಯಂತ ಸುಮಾರು 42,000 ಸೆಟಿಲೈಟ್ಗಳನ್ನು ಕೂರಿಸಲಿದೆ. ಇವು ಅದರ ಜೆನ್ 2 ಸಮೂಹವಾಗಿದೆ. ಇವುಗಳಲ್ಲಿ 30,000 ಸೆಟಿಲೈಟ್ಗಳನ್ನು ಭಾರತಕ್ಕಾಗಿ ಬಳಸಿಕೊಳ್ಳುವುದಕ್ಕೆ ಸ್ಟಾರ್‌ಲಿಂಕ್ ಈಗ ಅನುಮತಿ ಕೋರಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Thu, 20 August 26