ನವದೆಹಲಿ, ಡಿಸೆಂಬರ್ 23: ಯುವ ಉದ್ಯಮಿ ರೋಹನ್ ಮಿರ್ಚಂದಾನಿ ಹೃದಯಸ್ತಂಭನಗೊಂಡು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 41-42 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಶನಿವಾರ ಅವರು ನಿಧನರಾಗಿರುವುದು ತಿಳಿದುಬಂದಿದೆ. ಎಪಿಗ್ಯಾಮಿಯಾದ ಮಾತೃ ಸಂಸ್ಥೆಯಾದ ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಅಧಿಕೃತ ಹೇಳಿಕೆಯಲ್ಲಿ ಈ ಸುದ್ದಿಯನ್ನು ನಿವೇದಿಸಿದೆ. ಎಪಿಗ್ಯಾಮಿಯಾ ಗ್ರೀಕ್ ಯೋಗರ್ಟ್, ಪಾನೀಯ ಇತ್ಯಾದಿ ಆಹಾರ ಉತ್ಪನ್ನಗಳ ಖ್ಯಾತ ಬ್ರ್ಯಾಂಡ್ ಆಗಿದೆ. ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಿದ್ದ ರೋಹನ್ ಮಿರ್ಚಂದಾನಿ ಅವರ ನೇತೃತ್ವದಲ್ಲಿ ಎಪಿಗ್ಯಾಮಿಯಾ ಪ್ರಬಲ ಬ್ರ್ಯಾಂಡ್ ಆಗಿ ಬೆಳೆದಿತ್ತು.
ಉದ್ಯಮ ವಲಯದಲ್ಲಿ ಸಿಇಒಗಳು ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ನಿಧನರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಕೆಲ ಪ್ರಮುಖ ಸ್ಟಾರ್ಟಪ್ಗಳ ಸಂಸ್ಥಾಪಕರು ಸಣ್ಣ ವಯಸ್ಸಿನಲ್ಲಿ ಇದೇ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸಾಫ್ಟ್ಪವರ್ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ಇವತ್ತು ಸ್ಟಾರ್ಟಪ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅಂತೆಯೇ, ಬಿಸಿನೆಸ್ ಪೈಪೋಟಿ ಬಹಳ ಉತ್ತುಂಗದಲ್ಲಿದೆ. ಸ್ಟಾರ್ಟಪ್ಗಳ ಸಂಸ್ಥಾಪಕರಿಗೆ ಹಿಂದೆಂದಿಗಿಂತಲೂ ಒತ್ತಡಗಳು ಹೆಚ್ಚುತ್ತಿದೆ. ಒಂದೆಡೆ, ಬಿಸಿನೆಸ್ ಬೆಳೆಸಬೇಕು, ಇನ್ನೊಂದೆಡೆ ಹಣಕಾಸು ವ್ಯವಸ್ಥೆ ಮಾಡಬೇಕು. ಇದು ಸವಾಲಿನ ಸಂಗತಿಯಾಗಿದೆ. ಈ ಮಧ್ಯೆ ವೈಯಕ್ತಿಕ ಆರೋಗ್ಯವನ್ನು ಕಡೆಗಣಿಸುವವರೇ ಹೆಚ್ಚು. ಇದು ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ಒಳಗಾಗುವಂತೆ ಮಾಡುತ್ತಿದೆ.
ಇದನ್ನೂ ಓದಿ: ಜಿಎಸ್ಟಿ ದರಗಳಲ್ಲಿ ಬದಲಾವಣೆ; ಯಾವುವು ಅಗ್ಗ, ಯಾವುವು ದುಬಾರಿ, ಇಲ್ಲಿದೆ ಪಟ್ಟಿ
ಡಿ. 21ರಂದು ಮೃತಪಟ್ಟ ರೋಹನ್ ಮಿರ್ಚಂದಾನಿ ಬಹಳ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದ ಯುವ ಉದ್ಯಮಿ ಎನಿಸಿದ್ದರು. ಎಪಿಗ್ಯಾಮಿಯಾ ಬ್ರ್ಯಾಂಡ್ ಅಡಿಯಲ್ಲಿ ಯೋಗರ್ಟ್ ಹಾಗೂ ಇತರ ಡೈರಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಸಿದ್ದರು. 30 ನಗರಗಳಲ್ಲಿ 20,000ಕ್ಕೂ ಹೆಚ್ಚು ರೀಟೇಲ್ ಟಚ್ಪಾಯಿಂಟ್ಗಳನ್ನು ಸಂಸ್ಥೆ ಬೆಳೆಸಿದೆ. ಮುಂದಿನ ವರ್ಷದೊಳಗೆ ಮಧ್ಯಪ್ರಾಚ್ಯ ದೇಶಗಳಿಗೂ ವಿಸ್ತರಿಸುವ ಆಲೋಚನೆಯಲ್ಲಿ ರೋಹನ್ ಇದ್ದರೆನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ