ಬೆಂಗಳೂರು/ಕಲಬುರಗಿ: ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಡೇರಿ ಉತ್ಪನ್ನಗಳ ಮೇಲೆ ಇಂದಿನಿಂದ ಜಾರಿಯಾಗಿರುವ ಶೇ 5ರ ಸರಕು ಮತ್ತು ಸೇವಾ ಸುಂಕಕ್ಕೆ (Goods and Service Tax – GST) ರಾಷ್ಟ್ರವ್ಯಾಪಿ ವರ್ತಕರು ಮತ್ತು ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಎಸ್ಟಿ ಯಾವುದಕ್ಕೆಲ್ಲಾ ಅನ್ವಯವಾಗಲಿದೆ ಎಂದು ಇದೀಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ‘ಯಾವುದೇ ಬ್ರಾಂಡ್ನ ಆಹಾರ ಪದಾರ್ಥವು ಒಂದೇ ಪ್ಯಾಕ್ನಲ್ಲಿ 26 ಕೆಜಿಗೂ ಹೆಚ್ಚು ತೂಕವಿದ್ದರೆ ಅದಕ್ಕೆ ಜಿಎಸ್ಟಿ ಅನ್ವಯಿಸುವುದಿಲ್ಲ’ ಎಂದು ಹಣಕಾಸು ಇಲಾಖೆಯ (The Central Board of Indirect Taxes and Customs – CBITC) ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ವಿಭಾಗ ಭಾನುವಾರ ತಡರಾತ್ರಿ ಸ್ಪಷ್ಟನೆ ನೀಡಿದೆ.
ಮೊದಲೇ ಪ್ಯಾಕ್ ಮಾಡಿರುವ 25 ಕೆಜಿಗೂ ಕಡಿಮೆ ತೂಕದ ಆಹಾರ ಉತ್ಪನ್ನಗಳಿಗೆ ಮಾತ್ರವೇ ಶೇ 5ರ ಜಿಎಸ್ಟಿ ಅನ್ವಯವಾಗಲಿದೆ. ಆದರೆ ಯಾವುದೇ ಚಿಲ್ಲರೆ ಮಾರಾಟಗಾರ ಸಗಟು ವ್ಯಾಪಾರಿಯಿಂದ ಖರೀದಿಸಿದ 25 ಕೆಜಿ ಪಾಕೆಟ್ ಒಡೆದು ಕಡಿಮೆ ತೂಕದ ಪ್ಯಾಕ್ ಮಾಡಿ ಮಾರಿದರೆ ಅದಕ್ಕೆ ಜಿಎಸ್ಟಿ ಲಾಗು ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಕಾನೂನು ಮತ್ತು ಮಾಪನ ಕಾಯ್ದೆ 2009’ರ ಪ್ರಕಾರ ವ್ಯಾಖ್ಯಾನಿಸಲಾಗಿರುವ ಮೊದಲೇ ಪ್ಯಾಕ್ ಆಗಿರುವ ಆಹಾರ ಉತ್ಪನ್ನಗಳು (ಧಾನ್ಯಗಳು, ಕಾಳುಗಳು, ಅಕ್ಕಿ, ಗೋಧಿ, ಹಿಟ್ಟು ಇತ್ಯಾದಿ) ಎನಿಸಿಕೊಳ್ಳುವ ಉತ್ಪನ್ನಗಳು 25 ಕೆಜಿಗೂ ಕಡಿಮೆ ಇದ್ದು, ಪ್ಯಾಕ್ಡ್ ರೂಪದಲ್ಲಿ ಮಾರಾಟಕ್ಕೆ ತಂದರೆ ಅದಕ್ಕೆ ಜಿಎಸ್ಟಿ ಅನ್ವಯವಾಗುತ್ತಿತ್ತು. ಈ ನಿಯಮದಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ 25 ಕೆಜಿಗೂ ಹೆಚ್ಚಿನ ತೂಕದ ಪ್ಯಾಕ್ಗಳಿಗೆ ಶೇ 5ರ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗೆಂದು ಒಂದು 30 ಕೆಜಿ ಪ್ಯಾಕ್ ಒಳಗೆ 10 ಕೆಜಿಯ ಮೂರು ಪ್ಯಾಕ್ ಇರಿಸಿ ಮತ್ತೊಮ್ಮೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ತಂದರೆ ಅದಕ್ಕೆ ಮೊದಲಿನಂತೆ ತೆರಿಗೆ ಅನ್ವಯವಾಗಲಿದೆ. ಆದರೆ ವಿತರಕರಿಗೆ 10 ಕೆಜಿ ತೂಕದ ಪ್ಯಾಕ್ ಸರಬರಾಜು ಮಾಡಿದರೆ ಜಿಎಸ್ಟಿ ವಿನಾಯ್ತಿ ಸಿಗಲಿದೆ. ಯಾವುದೇ ಒಂದು ನಿರ್ದಿಷ್ಟ ಪಾಕೆಟ್ 25 ಕೆಜಿಗೂ ಹೆಚ್ಚು ತೂಕದ್ದಾಗಿದ್ದರೆ ಅದಕ್ಕೆ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
30 ಕೆಜಿ ತೂಕದ ತೊಗರಿ ಪಾಕೆಟ್ ಮಾರಾಟಕ್ಕೆ ವ್ಯಾಪಾರಿಗಳ ನಿರ್ಧಾರ
ಕೇಂದ್ರ ಸರ್ಕಾರವು ಜಾರಿ ಮಾಡಿರುವ ಹೊಸ ಜಿಎಸ್ಟಿ ನಿಯಮದ ಪ್ರಕಾರ 25 ಕೆಜಿ ತೂಕದ ಬ್ರಾಂಡೆಡ್ ತೊಗರಿ ಚೀಲಕ್ಕೆ ಶೇ 5ರ ತೆರಿಗೆ ಅನ್ವಯವಾಗಲಿದೆ. ಗ್ರಾಹಕರಿಗೆ ಈ ತೆರಿಗೆಯ ಹೊರೆ ತಪ್ಪಿಸಲೆಂದು ಕಲಬುರ್ಗಿಯ ದಾಲ್ ಮಿಲ್ ಮಾಲೀಕರು 30 ಕೆಜಿ ತೂಕದ ತೊಗರಿ ಚೀಲಗಳನ್ನು ಪ್ಯಾಕ್ ಮಾಡಿ ಮಾರಲು ಮುಂದಾಗಿದ್ದಾರೆ. ಈವರೆಗೆ ಐದು, ಹತ್ತು ಹಾಗೂ 25 ಕೆಜಿ ತೂಕದ ತೊಗರಿ ಬೇಳೆ ಪಾಕೆಟ್ಗಳನ್ನು ಕೆಲ ಮಿಲ್ ಮಾಲೀಕರು ಮಾರುತ್ತಿದ್ದರು. ಮುಂದಿನ ದಿನಗಳಲ್ಲಿ 25 ಕೆಜಿ ಒಳಗಿನ ಪಾಕೆಟ್ಗಳಿಗೆ ಶೇ 5ರ ಜಿಎಸ್ಟಿ ಸೇರಿಸಿ ಗರಿಷ್ಠ ಮಾರಾಟ ದರ ನಿರ್ಧರಿಸಲಾಗುತ್ತದೆ. 26 ಕೆಜಿ ತೂಗುವ ಪಾಕೆಟ್ಗಳಿಗೆ ಜಿಎಸ್ಟಿ ಹಂಗಿಲ್ಲದೆ ದರ ವಿಧಿಸಲಾಗುತ್ತದೆ.
ಪ್ರಸ್ತುತ ಕಲಬುರ್ಗಿಯಲ್ಲಿ ಒಂದು ಕೆಜಿ ತೊಗರಿ ಬೆಲೆ ₹ 97 ಇದೆ. ಶೇ 5ರ ಜಿಎಸ್ಟಿ ಲಾಗು ಆದರೆ ಸುಮಾರು ₹ 5ರಷ್ಟು ದರ ಹೆಚ್ಚಳಕಂಡು, ಚಿಲ್ಲರೆ ದರ ₹ 100ರ ಗಡಿದಾಟಿದೆ.
Published On - 1:19 pm, Mon, 18 July 22