International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 29, 2022 | 10:07 AM

IIBX: ಗಾಂಧಿನಗರದ ಗಿಫ್ಟ್​ ಸಿಟಿಯಲ್ಲಿ ಸ್ಥಾಪನೆಯಾಗಿರುವ ಈ ವಿನಿಮಯ ಕೇಂದ್ರವು ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ವಹಿವಾಟಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ.

International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ
ಬೆಳ್ಳಿ ಮತ್ತು ಚಿನ್ನದ ಗಟ್ಟಿ (ಸಂಗ್ರಹ ಚಿತ್ರ)
Image Credit source: ಪಿಟಿಐ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭಾರತದ ಮೊದಲ ‘ಜಾಗತಿಕ ಚಿನ್ನ ವಿನಿಮಯ ಕೇಂದ್ರ’ವನ್ನು (India International Bullion Exchange – IIBX) ಉದ್ಘಾಟಿಸಲಿದ್ದಾರೆ. ಗುಜರಾತ್​ ರಾಜಧಾನಿ ಗಾಂಧಿನಗರದ ಗಿಫ್ಟ್​ ಸಿಟಿಯಲ್ಲಿ (Gujarat International Finance Tec-City – GIFT) ಸ್ಥಾಪನೆಯಾಗಿರುವ ಈ ವಿನಿಮಯ ಕೇಂದ್ರವು ಭಾರತದ ಹಣಕಾಸು ವಿದ್ಯಮಾನದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳಿಗೂ ಕಾರಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ.

ಈ ವಿನಿಮಯ ಕೇಂದ್ರದ ಮೂಲಕ ಚಿನ್ನ ಬೆಲೆ ಮತ್ತು ಆರ್ಥಿಕ ಮೌಲ್ಯ ಮತ್ತಷ್ಟು ವೃದ್ಧಿಯಾಗಲಿದೆ. ಉತ್ತಮ ಗುಣಮಟ್ಟದ ಚಿನ್ನವನ್ನು ನಿಖರ ಬೆಲೆಯಲ್ಲಿ ಒದಗಿಸುವ ಜವಾಬ್ದಾರಿಯನ್ನು ಈ ಕೇಂದ್ರ ಹೊರಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರ ಪ್ರಾಧಿಕಾರ (International Financial Service Centres Authority – IFSC) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಚಿನ್ನ ವಿನಿಮಯ ಕೇಂದ್ರ ಸ್ಥಾಪನೆಯಾಗಬೇಕು ಎನ್ನುವ ಹೂಡಿಕೆದಾರರ ನಿರೀಕ್ಷೆ ಐಐಬಿಎಕ್ಸ್ ಮೂಲಕ ಸಾಕಾರಗೊಳ್ಳುತ್ತಿದೆ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಲವು ವಿನಿಮಯ ಕೇಂದ್ರಗಳು ಮತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಾಂಗ್​ಕಾಂಗ್, ಸಿಂಗಾಪುರ, ದುಬೈ, ಲಂಡನ್ ಮತ್ತು ನ್ಯೂಯಾರ್ಕ್ ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಹಲವು ಹಣಕಾಸು ಸೇವೆಗಳನ್ನು ಐಐಬಿಎಕ್ಸ್ ಉತ್ತಮ ಬೆಲೆಗೆ ಒದಗಿಸಲಿದೆ. ಹಲವು ರೀತಿಯ ಹೂಡಿಕೆ ಉತ್ಪನ್ನಗಳು ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸಲೂ ಐಐಬಿಎಕ್ಸ್ ಸಜ್ಜಾಗಿದೆ.

ಚಿನ್ನ-ಬೆಳ್ಳಿಯ ಧಾರಣೆ ತಿಳಿಸಲು ಇಲ್ಲಿ ಕ್ಲಿಕ್ ಮಾಡಿ

ಮೊದಲ ದಿನವಾದ ಇಂದು 995ರಷ್ಟು ಪರಿಶುದ್ಧತೆಯ 1 ಕೆಜಿ ಚಿನ್ನ ಮತ್ತು 999 ಪರಿಶುದ್ಧತೆಯ 100 ಗ್ರಾಮ್ ಚಿನ್ನದ ವಹಿವಾಟು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ವಿನಿಮಯ ಕೇಂದ್ರವು ವಹಿವಾಟು ನಡೆಯುವ ದಿನವೇ ಹಣಕಾಸು ಮೌಲ್ಯ ಇತ್ಯರ್ಥ ಪಡಿಸುವ (T+0) ಸೌಲಭ್ಯವನ್ನೂ ಒದಗಿಸುವ ಸಾಧ್ಯತೆಯಿದೆ. ಐಐಬಿಎಕ್ಸ್ ಮೂಲಕ ನಡೆಯುವ ಲಿಸ್ಟಿಂಗ್, ಟ್ರೇಡ್ ಮತ್ತು ಸೆಟ್ಲ್​ಮೆಂಟ್​ ಅಮೆರಿಕದ ಡಾಲರ್ ಮೌಲ್ಯದಲ್ಲಿ ಇರಲಿದೆ.

ಬುಲಿಯನ್ ಎಂದರೇನು?

ಪರಿಶುದ್ಧ ಚಿನ್ನ ಅಥವಾ ಬೆಳ್ಳಿಯನ್ನು ಬಾರ್, ಗಟ್ಟಿ ಅಥವಾ ನಾಣ್ಯಗಳ ರೂಪದಲ್ಲಿ ಸಂಗ್ರಹಹಿಸುವುದನ್ನು ಬುಲಿಯನ್ ಎನ್ನುತ್ತಾರೆ. ಜನಸಾಮಾನ್ಯರು ಭೌತಿಕ ಚಿನ್ನ-ಬೆಳ್ಳಿಯನ್ನು ಆಪದ್ಧನ ಎನ್ನುವ ಕಾರಣಕ್ಕೆ ಸಂಗ್ರಹಿಸಿಡುತ್ತಾರೆ. ರಿಸರ್ವ್​ ಬ್ಯಾಂಕ್ ಕರೆನ್ಸಿ ಮೌಲ್ಯ ಕಾಪಾಡುವ ದೃಷ್ಟಿಯಿಂದ ಮತ್ತು ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ದೃಷ್ಟಿಯಿಂದ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡುವುದು ವಾಡಿಕೆ.

ಪ್ರಮುಖ ಬೆಳವಣಿಗೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್​ನಲ್ಲಿ ಐಐಬಿಎಕ್ಸ್ ಕಾರ್ಯಾರಂಭ ಮಾಡುವುದನ್ನು ಘೋಷಿಸಿದ್ದರು. ‘ಜಾಗತಿಕ ಹಣಕಾಸು ಸೇವೆಗಳ ಕೇಂದ್ರ’ವು (ಐಎಫ್​ಎಸ್​ಸಿಎ) ಈ ವಿನಿಮಯ ಕೇಂದ್ರವನ್ನು ನಿಯಂತ್ರಿಸಲಿದೆ. ಮುಂದಿನ ದಿನಗಳಲ್ಲಿ ವಿದೇಶಗಳಿಂದ ಚಿನ್ನ-ಬೆಳ್ಳಿ ಆಮದು ಮಾಡಿಕೊಳ್ಳಲು ಐಐಬಿಎಕ್ಸ್​ ಅನ್ನೇ ಗೇಟ್​ವೇ ಆಗಿ ಬಳಸಬೇಕು ಎಂದು ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಸೂಚಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ‘ಅರ್ಹ ಒಡವೆ ತಯಾರಕರು’ (Qualified Jewellers) ಐಐಬಿಎಕ್ಸ್​ ಮೂಲಕವೇ ಚಿನ್ನ ಆಮದು ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಬೇಕಿರುವ ಅಗತ್ಯ ಹಣಕಾಸು ಪಾವತಿ ನಿಯಮಾವಳಿಗಳನ್ನು ಆರ್​ಬಿಐ ರೂಪಿಸಿದೆ.

Published On - 8:38 am, Fri, 29 July 22