ನವದೆಹಲಿ: ಅಮೆರಿಕದ ಮೈಕ್ರೋನ್ ಟೆಕ್ನಾಲಜಿ (Micron Technology) ಸಂಸ್ಥೆ ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿದೆ. ಈ ವಿಚಾರವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಜೂನ್ 26, ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಚಿವರು ನೀಡಿದ ಮಾಹಿತಿ ಪ್ರಕಾರ ಘಟಕ ಆದಷ್ಟೂ ಶೀಘ್ರದಲ್ಲಿ ಆರಂಭವಾಗಲಿದ್ದು ಒಂದೂವರೆ ವರ್ಷದಲ್ಲಿ ಮೊದಲ ಚಿಪ್ (Semiconductor chip) ತಯಾರಾಗಲಿದೆಯಂತೆ. ಇದು ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಆಗಲಿದೆ. ಮೈಕ್ರೋನ್ ಘಟಕವು ಭಾರತದಲ್ಲಿ ಸೆಮಿಕಂಡಕ್ಟರ್ ಇಕೋಸಿಸ್ಟಂ ರೂಪುಗೊಳ್ಳಲು ಸಹಾಯಕವಾಗಲಿದೆ.
ಐಟಿ ಸರ್ವಿಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತ ಐಟಿ ಕಾಂಪೊನೆಂಟ್ಗಳ ತಯಾರಿಕೆಯಲ್ಲಿ ಬಹಳ ಹಿಂದುಳಿದಿದೆ. ಐಫೋನ್ಗಳನ್ನು ಭಾರತದಲ್ಲಿ ಅಸೆಂಬಲ್ ಮಾಡಲಾಗುತ್ತಿದೆಯಾದರೂ ಅದರ ಬಿಡಿಭಾಗಗಳು ಬೇರೆ ಬೇರೆ ದೇಶಗಳಲ್ಲಿ ತಯಾರಾಗುತ್ತವೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಲಾಗುತ್ತದಾದರೂ ಹೆಚ್ಚಿನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಪಕ್ಕಾ ಭಾರತೀಯ ನಿರ್ಮಾಣದ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಕಷ್ಟಕಷ್ಟ ಎನ್ನುವಂಥ ಸ್ಥಿತಿ ಇದೆ. ಭಾರತವನ್ನು ವಿಶ್ವ ಫ್ಯಾಕ್ಟರಿಯಾಗಿ ಮಾಡಲು ಹೊರಟಿರುವ ಸರ್ಕಾರಕ್ಕೆ ಇದು ಬಹುದೊಡ್ಡ ಸವಾಲು ಹೌದು. ಈ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಬಹಳ ಗಮನಾರ್ಹ ಎನಿಸಿದೆ.
ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸೆಮಿಕಂಡಕ್ಟರ್ ಬಹಳ ಮುಖ್ಯ. ಮೊಬೈಲ್, ಲ್ಯಾಪ್ಟಾಪ್, ಸರ್ವರ್, ಕ್ಯಾಮೆರಾ ಇತ್ಯಾದಿ ಉತ್ಪನ್ನಗಳಲ್ಲಿ ಸೆಮಿಕಂಡಕ್ಟರ್ ಚಿಪ್ ಬಳಸಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು, ರೈಲು, ಕಾರು, ಟೆಲಿಕಾಂ ಉಪಕರಣ ಇತ್ಯಾದಿಗೂ ಸೆಮಿಕಂಡಕ್ಟರ್ ಬೇಕು. ಇಷ್ಟು ಮಹತ್ವ ಇರುವ ಸೆಮಿಕಂಡಕ್ಟರ್ನ ಉತ್ಪಾದನೆಯಲ್ಲಿ ಮೈಕ್ರಾನ್ ವಿಶ್ವದ ಐದನೇ ಅತಿದೊಡ್ಡ ಸಂಸ್ಥೆ ಎನಿಸಿದೆ. ಹೀಗಾಗಿ, ಗುಜರಾತ್ನಲ್ಲಿ ಮೈಕ್ರೋನ್ ಸೆಮಿಕಂಡಕ್ಟರ್ ಘಟಕ ಬಹಳ ಮಹತ್ವ ಎನಿಸುತ್ತದೆ.
ಕಳೆದ ನಾಲ್ಕು ದಶಕಗಳಿಂದಲೂ ಭಾರತದಲ್ಲಿ ಸೆಮಿಕಂಡಕ್ಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪ್ರಯತ್ನಗಳಾಗುತ್ತಿವೆ. ಇದೀಗ ಮೈಕ್ರೋನ್ ಘಟಕ ಸ್ಥಾಪನೆಯಿಂದ ಪುಷ್ಟಿ ಸಿಕ್ಕಂತಾಗಿದೆ. ಮೈಕ್ರೋನ್ ಘಟಕದಿಂದ 5,000 ದಷ್ಟು ನೇರ ಉದ್ಯೋಗಸೃಷ್ಟಿಯಾಗಬಹುದು. ಹಾಗೆಯೇ, 500 ಉತ್ಕೃಷ್ಟ ಎಂಜಿನಿಯರಿಂಗ್ ಹುದ್ದೆಗಳಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಇನ್ನು, ಸೆಮಿಕಂಡಕ್ಟರ್ ಫ್ಯಾಕ್ಟರಿಯಿಂದಾಗಿ ಭಾರತದಲ್ಲಿ ಹಲವು ಸ್ಟಾರ್ಟಪ್ಗಳ ಹುಟ್ಟಿಗೂ ಕಾರಣವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ