ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

|

Updated on: Jun 21, 2024 | 5:53 PM

Fitch Ratings projection of India's GDP growth: ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಬೆಳೆಯಬಹುದು ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಅಂದಾಜು ಮಾಡಿದೆ. ತನ್ನ ಗ್ಲೋಬಲ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಅದು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನ ನಿಲುವನ್ನು ತುಸು ಬದಲಾಯಿಸಿಕೊಂಡಿದೆ. ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಶೇ. 7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು.

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್
ಜಿಡಿಪಿ
Follow us on

ನವದೆಹಲಿ, ಜೂನ್ 21: ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.

‘ಹೂಡಿಕೆ ಹೆಚ್ಚಳ ಮುಂದುವರಿಯುತ್ತದೆಯಾದರೂ ಇತ್ತೀಚಿನ ಕೆಲ ಕ್ವಾರ್ಟರ್​ಗಳಲ್ಲಿ ಆದಷ್ಟು ವೇಗದಲ್ಲಿ ಹೆಚ್ಚಾಗುವುದಿಲ್ಲ. ಬಳಕೆದಾರರ ಆತ್ಮವಿಶ್ವಾಸ ಹೆಚ್ಚಿದ್ದು, ವೆಚ್ಚ ಪ್ರಮಾಣ ಹೆಚ್ಚಾಗಬಹುದು. ಪಿಎಂ ಸರ್ವೆ ದತ್ತಾಂಶದಲ್ಲೂ ಕೂಡ ಈ ಹಣಕಾಸು ವರ್ಷದಲ್ಲಿ ಬೆಳವಣಿಗೆ ಮುಂದುವರಿಯುವ ಸೂಚನೆ ಇದೆ. ಮುಂಗಾರು ಋತು ಉತ್ತಮವಾಗಿರುವ ಸಾಧ್ಯತೆ ಇರುವುದರಿಂದ ಇದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಬಹುದು,’ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ತನ್ನ ಇತ್ತೀಚಿನ ಗ್ಲೋಬಲ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

ಭಾರತದ ಆರ್ಥಿಕತೆ 2023-24ರ ಹಣಕಾಸು ವರ್ಷದಲ್ಲಿ ಶೇ. 8.2ರಷ್ಟು ಬೆಳೆದಿದೆ. ಕೊನೆಯ ತ್ರೈಮಾಸಿಕ ಅವಧಿಯಲ್ಲೂ ನಿರೀಕ್ಷೆಮೀರಿದ ಬೆಳವಣಿಗೆ ಕಂಡಿತ್ತು. ಹೀಗಾಗಿ, ಒಟ್ಟಾರೆಯಾಗಿ ಕಳೆದ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ 8 ದಾಟಿದ್ದು ಸ್ವತಃ ಸರ್ಕಾರಕ್ಕೂ ಅಚ್ಚರಿ ಮೂಡಿಸಿದೆ.

ಈ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಆರ್ಥಿಕತೆ ಬೆಳೆಯಬಹುದು ಎಂದು ಹೇಳಿರುವ ಫಿಚ್ ರೇಟಿಂಗ್ಸ್, ನಂತರ ವರ್ಷಗಳ ಬಗ್ಗೆ ಇದೇ ತೆರನಾದ ನಿರೀಕ್ಷೆ ಇಟ್ಟುಕೊಂಡಿಲ್ಲ. 2025-26ರ ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಬಹುದು. 2026-27ರಲ್ಲಿ ಶೇ. 6.2ರಷ್ಟು ಹೆಚ್ಚಾಗಬಹುದು ಎನ್ನುವ ಅಂದಾಜನ್ನು ಮಾಡಿದೆ.

ಹಣದುಬ್ಬರ ಇಳಿಕೆ ಬಗ್ಗೆ ನಿರೀಕ್ಷೆ…

ಫಿಚ್ ರೇಟಿಂಗ್ಸ್ ಸಂಸ್ಥೆ ಭಾರತದಲ್ಲಿ ಹಣದುಬ್ಬರ ಇಳಿಕೆಯ ಬಗ್ಗೆ ಆಶಾದಾಯಕವಾಗಿದೆ. 2024ರ ಕ್ಯಾಲಂಡರ್ ವರ್ಷದಲ್ಲಿ ಹಣದುಬ್ಬರ ಶೇ 4.5 ಇರಬಹುದು ಎಂದು ಅಂದಾಜು ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ, ಅಂದರೆ 2025 ಮತ್ತು 2026ರ ಕ್ಯಾಲಂಡರ್ ವರ್ಷಗಳಲ್ಲಿ ರೀಟೇಲ್ ಹಣದುಬ್ಬರ ಸರಾಸರಿಯಾಗಿ ಶೇ. 4.3ರಷ್ಟು ಇರಬಹುದು ಎಂದಿದೆ.

ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ

ಹಣದುಬ್ಬರ ಶೇ. 4ಕ್ಕೆ ಇಳಿಸಬೇಕು ಎಂಬುದು ಆರ್​ಬಿಐನ ಗುರಿ. ಸತತವಾಗಿ ಆ ಗುರಿಗಿಂತ ಮೇಲೆಯೇ ಹಣದುಬ್ಬರ ಇರುವುದರಿಂದ ರಿಪೋ ದರ ಇಳಿಸುತ್ತಿಲ್ಲ. ಆರ್ಥಿಕ ಬೆಳವಣಿಗೆಗೆ ರಿಪೋ ದರ ಇಳಿಯುವುದು ಅಗತ್ಯ ಇದೆಯಾದರೂ ಹಣದುಬ್ಬರ ಅಡ್ಡಿ ಇದೆ. ಫಿಚ್ ರೇಟಿಂಗ್ಸ್ ಪ್ರಕಾರ ಆರ್​ಬಿಐ ಈ ವರ್ಷ ಒಮ್ಮೆ ಬಡ್ಡಿದರ ಇಳಿಕೆಗೆ ನಿರ್ಧರಿಸಬಹುದು. ಶೇ 6.50ರಷ್ಟಿರುವ ಈ ದರವನ್ನು ಶೇ. 6.25ಕ್ಕೆ ಇಳಿಸಬಹುದು ಎಂದಿದೆ ಫಿಚ್ ರೇಟಿಂಗ್ಸ್ ಸಂಸ್ಥೆ.

ಅಷ್ಟೇ ಅಲ್ಲ, 2025 ಮತ್ತು 2026ರಲ್ಲಿ 25 ಮೂಲಾಂಕಗಳಷ್ಟು ರಿಪೋ ದರವನ್ನು ಕಡಿಮೆಗೊಳಿಸಬಹುದು ಎನ್ನುವ ಅಂದಾಜು ಮಾಡಿದೆ. ಅಂದರೆ, 2026ರೊಳಗೆ ಭಾರತದಲ್ಲಿ ರಿಪೋ ದರ ಶೇ. 5.75ಕ್ಕೆ ಇಳಿಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ