Foxconn: ಸೆಮಿಕಂಡಕ್ಟರ್ ಯೋಜನೆ: ವೇದಾಂತ ಬಿಟ್ಟ ಫಾಕ್ಸ್​ಕಾನ್ ಈಗ ಹೊಸ ಜೊತೆಗಾರಿಕೆಗೆ ಟಿಎಸ್​ಎಂಸಿ, ಟಿಎಂಎಚ್ ಜೊತೆ ಮಾತುಕತೆ

|

Updated on: Jul 14, 2023 | 11:48 AM

Semiconductor Manufacturing in India: ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಫಾಕ್ಸ್​ಕಾನ್ ಸಂಸ್ಥೆ ತೈವಾನ್​ನ ಟಿಎಸ್​ಎಂಸಿ ಮತ್ತು ಜಪಾನ್​ನ ಟಿಎಂಎಚ್ ಗ್ರೂಪ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

Foxconn: ಸೆಮಿಕಂಡಕ್ಟರ್ ಯೋಜನೆ: ವೇದಾಂತ ಬಿಟ್ಟ ಫಾಕ್ಸ್​ಕಾನ್ ಈಗ ಹೊಸ ಜೊತೆಗಾರಿಕೆಗೆ ಟಿಎಸ್​ಎಂಸಿ, ಟಿಎಂಎಚ್ ಜೊತೆ ಮಾತುಕತೆ
ಫಾಕ್ಸ್​ಕಾನ್
Follow us on

ನವದೆಹಲಿ, ಜುಲೈ 14: ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್​ಗಳ (Semiconductor Fab Units) ಸ್ಥಾಪನೆಗೆ ವೇದಾಂತ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫಾಕ್ಸ್​ಕಾನ್ (Foxconn) ಕೆಲ ದಿನಗಳ ಹಿಂದೆ ಈ ಯೋಜನೆಯಿಂದ ಹಿಂದಕ್ಕೆ ಸರಿದಿತ್ತು. ವೇದಾಂತ ಗ್ರೂಪ್​ನೊಂದಿಗಿನ ಜೊತೆಗಾರಿಕೆಯಿಂದ ಹಿಂದಕ್ಕೆ ಸರಿದರೂ ಭಾರತದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಬದ್ಧವಾಗಿರುವುದಾಗಿ ಹೇಳಿದ್ದ ಫಾಕ್ಸ್​ಕಾನ್ ಇದೀಗ ಎರಡು ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಎಕನಾಮಿಕ್ ಟೈಮ್ಸ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ತೈವಾನ್ ಮೂಲದ ಫಾಕ್ಸ್​ಕಾನ್ ಸಂಸ್ಥೆ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳ ಸ್ಥಾಪನೆಗೆ ತೈವಾನ್ ಮೂಲದ ಮತ್ತೊಂದು ಟೆಕ್ ದೈತ್ಯ ಟಿಎಸ್​ಎಂಸಿಯೊಂದಿಗೆ ಜೊತೆಗಾರಿಕೆಗೆ ಪ್ರಯತ್ನಿಸುತ್ತಿದೆ. ಹಾಗೆಯೇ, ಜಪಾನ್​ನ ಟಿಎಂಎಚ್ ಗ್ರೂಪ್ ಜೊತೆಗೂ ಫಾಕ್ಸ್​ಕಾನ್ ಮಾತುಕತೆ ನಡೆಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕುತೂಹಲವೆಂದರೆ ವೇದಾಂತ ಗ್ರೂಪ್ ಮತ್ತು ಫಾಕ್ಸ್​ಕಾನ್ ಈ ಎರಡೂ ಸಂಸ್ಥೆಗಳಿಗೆ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ತಂತ್ರಜ್ಞಾನ ತಿಳಿದಿಲ್ಲ. ಎರಡೂ ಜೊತೆಯಾಗಿ ಸೇರಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಅನುಭವ ಇರುವ ಮತ್ತೊಂದು ವಿದೇಶೀ ಕಂಪನಿ ಜೊತೆ ಮಾಡಿಕೊಳ್ಳುವ ಯೋಜನೆ ಇತ್ತು. ಅದು ಸರಿಯಾದ ದಾರಿಯಲ್ಲಿ ಸಾಗದೇ ಇದ್ದ ಹಿನ್ನೆಲೆಯಲ್ಲಿ ಫಾಕ್ಸ್​ಕಾನ್ ವೇದಾಂತದಿಂದ ಬೇರ್ಪಟ್ಟು ಇದೀಗ ಸ್ವತಂತ್ರವಾಗಿ ಸೆಮಿಕಂಡಕ್ಟರ್ ಯೋಜನೆಗೆ ಕೈಹಾಕುತ್ತಿದೆ. ಅತ್ತ ವೇದಾಂತ ಗ್ರೂಪ್ ಕೂಡ ಪ್ರತ್ಯೇಕವಾಗಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಪ್ರಯತ್ನಿಸುತ್ತಿದೆ.

ಇದನ್ನೂ ಓದಿFoxconn: ಫಾಕ್ಸ್​ಕಾನ್ ಮತ್ತು ವೇದಾಂತ ಬೇರ್ಪಟ್ಟಿದ್ದು ಸಕಾರಾತ್ಮಕ ಬೆಳವಣಿಗೆಯಾ? ಹೆಚ್ಚುವರಿ ಸೆಮಿಕಂಡಕ್ಟರ್ ಘಟಕ ಶುರುವಾಗುತ್ತಾ?

ಇನ್ನು, ಫಾಕ್ಸ್​ಕಾನ್ ಮಾತುಕತೆ ನಡೆಸುತ್ತಿರುವ ಟಿಎಸ್​ಎಂಸಿ ಮತ್ತು ಟಿಎಂಎಚ್ ಗ್ರೂಪ್ ಸಂಸ್ಥೆಗಳು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿರುವ ಅಗ್ರಗಣ್ಯ ಕಂಪನಿಗಳಾಗಿವೆ. ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂದ ಕಂಪನಿ (ಟಿಎಸ್​ಎಂಸಿ) ವಿಶ್ವದ ಪ್ರಮುಖ ಚಿಪ್ ತಯಾರಕ ಸಂಸ್ಥೆ ಹೌದು. ಇನ್ನು ಜಪಾನ್​ನ ಟಿಎಂಎಚ್ ಗ್ರೂಪ್ ಸೆಮಿಕಂಡಕ್ಟರ್ ಘಟಕದ ನಿರ್ವಹಣೆ ಇತ್ಯಾದಿ ಸೇವೆಯಲ್ಲಿ ನಿಷ್ಣಾತವಾಗಿದೆ. ಫಾಕ್ಸ್​ಕಾನ್, ಟಿಎಸ್​ಎಂಸಿ ಮತ್ತು ಟಿಎಂಎಚ್ ಈ ಮೂರೂ ಕಂಪನಿಗಳು ಜೊತೆಯಾಗಿ ಸೇರಿ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ತಯಾರಿಕೆ ಘಟಕಗಳನ್ನು ಸ್ಥಾಪಿಸುತ್ತವಾ ಎಂದು ಕಾದು ನೋಡಬೇಕು.

ಹಾಗೆಯೇ, ಯೂರೋಪ್​ನ ಎಸ್​ಟಿ ಮೈಕ್ರೋ ಹಾಗೂ ಅಮೆರಿಕದ ಗ್ಲೋಬಲ್ ಫೌಂಡರೀಸ್ ಸಂಸ್ಥೆಗಳೂ ಕೂಡ ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಫಾಕ್ಸ್​ಕಾನ್ ಅಥವಾ ವೇದಾಂತ ಜೊತೆ ಕೈ ಜೋಡಿಸುವ ಸಾಧ್ಯತೆಗಳೂ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ