ಮೋದಿ ಸರ್ಕಾರದ ಮೂರು ಸಾಧನೆಗಳು ಶ್ಲಾಘನೀಯ, ಆದರೆ, ಆರ್ಥಿಕ ಪ್ರಗತಿಯಲ್ಲಿ ದೌರ್ಬಲ್ಯಗಳೂ ಇವೆ ಎಂದ ಅರವಿಂದ್ ಸುಬ್ರಮಣಿಯನ್

ಮೋದಿ ಸರ್ಕಾರದ ಅವಧಿಯ ಮೂರು ಪ್ರಮುಖ ಸಾಧನೆಗಳನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (CEA) ಅರವಿಂದ್ ಸುಬ್ರಮಣಿಯನ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಆದರೆ, ಆರ್ಥಿಕ ಯಶಸ್ಸಿನ ಕಥೆಯಲ್ಲಿ ಅವರು ಕೆಲ ಪ್ರಮುಖ ದೌರ್ಬಲ್ಯಗಳನ್ನೂ ಗುರುತಿಸಿ ಎಚ್ಚರಿಸಿದ್ದಾರೆ. ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಯೋಜನೆಗಳು, ಡಿಜಿಟಲ್ ಟೆಕ್ನಾಲಜಿ ಯೋಜನೆಗಳನ್ನು ಅವರು ಶ್ಲಾಘಿಸಿದ್ದಾರೆ.

ಮೋದಿ ಸರ್ಕಾರದ ಮೂರು ಸಾಧನೆಗಳು ಶ್ಲಾಘನೀಯ, ಆದರೆ, ಆರ್ಥಿಕ ಪ್ರಗತಿಯಲ್ಲಿ ದೌರ್ಬಲ್ಯಗಳೂ ಇವೆ ಎಂದ ಅರವಿಂದ್ ಸುಬ್ರಮಣಿಯನ್
ಜಿಡಿಪಿ
Image Credit source: Getty Images

Updated on: Nov 10, 2026 | 6:55 PM

ನವದೆಹಲಿ, ನವೆಂಬರ್ 10: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರು ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿರುವ ಮಾಜಿ ಸಿಇಎ ಅರವಿಂದ್ ಸುಬ್ರಮಣಿಯನ್, ಭಾರತದ ಆರ್ಥಿಕ ಪ್ರಗತಿಯಲ್ಲಿ ಕೆಲ ದೌರ್ಬಲ್ಯಗಳನ್ನೂ ಗುರುತಿಸಿದ್ದಾರೆ. ಕೇಂದ್ರ ಸರ್ಕಾರ ಕೈಗೊಂಡಿರುವ ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಕಲ್ಯಾಣ ಯೋಜನೆಗಳು: ಉಚಿತ ಧಾನ್ಯ ವಿತರಣೆ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆಗಳು, ಶೌಚಾಲಯಗಳು ಮತ್ತು ನಲ್ಲಿ ನೀರು ಪೂರೈಕೆ ಸೇರಿದಂತೆ ಸಮಾಜ ಕಲ್ಯಾಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

Loading...

ಮೂಲಸೌಕರ್ಯ ಮತ್ತು ಡಿಜಿಟಲ್ ತಂತ್ರಜ್ಞಾನ: ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಅರವಿಂದ್ ಸುಬ್ರಮಣಿಯನ್ ಅವರು ಭಾರತದ ವೇಗದ ಆರ್ಥಿಕ ಬೆಳವಣಿಗೆಯನ್ನು ಒಪ್ಪಿದರೂ ಅದರಲ್ಲಿರುವ ಕೆಲ ದೌರ್ಬಲ್ಯಗಳನ್ನು ಎತ್ತಿತೋರಿಸಿದ್ದಾರೆ.

ಇದನ್ನೂ ಓದಿ: ಲಂಚ್ ಬಾಕ್ಸ್ ಜೊತೆ ಗೋಲ್ಡ್ ಕಾಯಿನ್, ಕಾಜು ಕತ್ಲಿ, ಡಿನ್ನರ್ ಸೆಟ್ ಇತ್ಯಾದಿ… ಭಾರತೀಯರ ದೀಪಾವಳಿ ಆನ್​ಲೈನ್ ಶಾಪಿಂಗ್ ವಿವರ

ಆರ್ಥಿಕತೆಯ ಬೆಳವಣಿಗೆಯ ಆಚೆಗಿನ ಸವಾಲುಗಳು

ಜಾಗತಿಕ ಸಂಸ್ಥೆಗಳು ಭಾರತದ ಶೇ. 7.5 ರಷ್ಟು ಜಿಡಿಪಿ ಬೆಳವಣಿಗೆಯನ್ನು ಪ್ರಶಂಸಿಸುತ್ತಿದ್ದರೂ, ಇದರ ಆಳದಲ್ಲಿ ಕೆಲವು ಗಂಭೀರ ಕೊರತೆಗಳು (Serious under-accomplishments) ಅಡಗಿವೆ ಎಂದು ಅರವಿಂದ್ ಸುಬ್ರಮಣಿಯನ್ ಎಚ್ಚರಿಸಿದ್ದಾರೆ. ಅವರು ತಿಳಿಸಿದ ಕೊರತೆಗಳು ಇಂತಿವೆ:

  1. ರೂಪಾಯಿ ಮೌಲ್ಯ ಕುಸಿದಿರುವುದು
  2. ವಿದೇಶಿ ಹೂಡಿಕೆಗಳು ನಿರ್ಗಮಿಸಿರುವುದು
  3. ಹೆಚ್ಚು ಕಾರ್ಮಿಕ ಶಕ್ತಿ ಬೇಡುವ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನಿಂದ ರಫ್ತು ಏರಿಕೆ ಆಗದೇ ಇರುವುದು.

ಈ ಮೇಲಿನ ಮೂರು ಅಂಶಗಳನ್ನು ಪ್ರಸ್ತಾಪಿಸಿರುವ ಅರವಿಂದ್ ಸುಬ್ರಮಣಿಯನ್, ಇವು ದೇಶದ ಆರ್ಥಿ ಪ್ರಗತಿಯ ಯಶಸ್ಸನ್ನು ಸಂದೇಹಿಸುವಂತೆ ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಡಿಪಿ ಉತ್ತಮ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದ್ದರೂ ಅದಕ್ಕೆ ತಕ್ಕುದಾಗಿ ರುಪಾಯಿ ಮೌಲ್ಯ ಹೆಚ್ಚುತ್ತಿಲ್ಲ. ಆರ್​ಬಿಐ ತನ್ನಲ್ಲಿರುವ ಫಾರೆಕ್ಸ್ ನಿಧಿಯನ್ನು ಬಳಸಿ ರೂಪಾಯಿ ಮೌಲ್ಯ ಕುಸಿತವನ್ನು ತಡೆಯುತ್ತಿದೆ. ಇದು ವಿದೇಶಿ ಹೂಡಿಕೆದಾರರನ್ನು ದೃತಿಗೆಡಿಸಿ ನಿರ್ಗಮಿಸುವಂತೆ ಮಾಡುತ್ತಿರಬಹುದು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರು ವಿವರಿಸಿದ್ದಾರೆ.

ಇದನ್ನೂ ಓದಿ: ಇಪಿಎಫ್​ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ

ಉತ್ಪಾದನಾ ಕ್ಷೇತ್ರ ಮತ್ತು ಚೀನಾ ಪ್ಲಸ್ ಒನ್ ಅವಕಾಶ

ಅರವಿಂದ್ ಸುಬ್ರಮಣಿಯನ್ ಅವರು ಉದ್ಯೋಗ ಸ್ಥಿತಿಯನ್ನು ದೌರ್ಬಲ್ಯಗಳಲ್ಲೊಂದೆಂದು ಗುರುತಿಸಿದ್ದಾರೆ. ಸ್ಮಾರ್ಟ್​ಫೋನ್ ತಯಾರಿಕೆಯ ಯಶಸ್ಸು ಹೊರತುಪಡಿಸಿದರೆ ಚೀನಾ ಪ್ಲಸ್ ಒನ್ ಅವಕಾಶ ಭಾರತಕ್ಕೆ ಅನುಕೂಲ ತಂದಿಲ್ಲ ಎನ್ನುವುದು ಅವರ ಅನಿಸಿಕೆ. ಬಹಳ ಉದ್ಯೋಗ ಬೇಡುವ ಕಡಿಮೆ ಕೌಶಲ್ಯ ಅಗತ್ಯದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಭಾರತದ ರಫ್ತು ಹೆಚ್ಚಾಗಿಲ್ಲ. ಜಾಗತಿಕ ರಫ್ತಿನಲ್ಲಿ ಭಾರತದ ಪಾಲು ಶೇ. 2.5ರಿಂದ ಶೇ. 3ರಷ್ಟು ಮಾತ್ರವೇ ಇರುವುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us