ನವದೆಹಲಿ, ನವೆಂಬರ್ 8: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ (Israel Hamas war) ಪರಿಣಾಮವಾಗಿ ಭಾರತದಿಂದ ಒಂದು ಲಕ್ಷ ಮಂದಿಗೆ (Indian workers) ಇಸ್ರೇಲ್ನಲ್ಲಿ ಕೆಲಸ ಸಿಗುವ ಅವಕಾಶ ಇದೆ. ಭಾರತದಿಂದ ಒಂದು ಲಕ್ಷ ಕಾರ್ಮಿಕರನ್ನು ಇಸ್ರೇಲ್ ನೇಮಕಾತಿ ಮಾಡಿಕೊಳ್ಳಲಿದೆ. ಈ ಬಗ್ಗೆ ಪ್ರಕ್ರಿಯೆ ಆರಂಭಗೊಂಡಿರುವುದು ತಿಳಿದುಬಂದಿದೆ. ವಾಯ್ಸ್ ಆಫ್ ಅಮೆರಿಕ (ವಿಒಎ) ನ್ಯೂಸ್ ವರದಿ ಪ್ರಕಾರ, ಇಸ್ರೇಲ್ ಹಮಾಸ್ ಯುದ್ಧದಿಂದಾಗಿ ಇಸ್ರೇಲ್ನಲ್ಲಿ 90,000 ಪ್ಯಾಲೆಸ್ಟೀನೀ ಕಾರ್ಮಿಕರು ಕೆಲಸ ಬಿಟ್ಟು ಹೋಗಿದ್ದಾರೆ. ಈ ಸ್ಥಾನಗಳನ್ನು ತುಂಬಲು ಇಸ್ರೇಲ್ ಭಾರತದಿಂದ ಕಾರ್ಮಿಕರನ್ನು ನೇಮಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಭಾರತದ ಆರ್ಥಿಕತೆಗೆ ಅನುಕೂಲವಾಗುವ ನಿರೀಕ್ಷೆ ಇದೆ. ಇಸ್ರೇಲ್ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭಾರತೀಯ ಉದ್ಯೋಗಿಗಳಿದ್ದರೆ ಹಣ ವರ್ಗಾವಣೆ ಪ್ರಮಾಣ ಹೆಚ್ಚುತ್ತದೆ. ಭಾರತ ಮತ್ತು ಇಸ್ರೇಲ್ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಇರುವ ಬಾಂಧವ್ಯ ಈಗ ಉದ್ಯೋಗ ಕ್ಷೇತ್ರದಲ್ಲೂ ಕಾಣಿಸಲಿದೆ. ಇಸ್ರೇಲ್ನ ಹಲವು ರಕ್ಷಣಾ ಉಪಕರಣಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಈಗ ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಇಸ್ರೇಲೀ ಕಂಪನಿಯೊಂದು ಭಾರತದಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗುತ್ತಿದೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಇದೊಂದು ಬೆಳವಣಿಗೆ ಸಾಕು; ಬೆಚ್ಚಬೀಳಿಸಿದೆ ಮಾರ್ಗನ್ ಸ್ಟಾನ್ಲೀ ವರದಿ
ಕಳೆದ ಮೂರು ದಶಕಗಳಿಂದ ಭಾರತ ಮತ್ತು ಇಸ್ರೇಲ್ ಮಧ್ಯೆ ಗಾಢ ಸಂಬಂಧ ಇದೆ. ಕಾಶ್ಮೀರ ವಿಚಾರದಿಂದ ಹಿಡಿದು ಹಲವು ವಿಚಾರಗಳಲ್ಲಿ ಭಾರತಕ್ಕೆ ಇಸ್ರೇಲ್ ಬೆಂಬಲ ನೀಡುತ್ತಾ ಬಂದಿದೆ. ಪ್ಯಾಲೆಸ್ಟೀನಿಯರ ಪರವಾಗಿ ಭಾರತ ನಿಲುವು ತಳೆದಿದ್ದರೂ ಗಾಜಾ ಬಿಕ್ಕಟ್ಟಿನಲ್ಲಿ ಇಸ್ರೇಲ್ಗೆ ಭಾರತ ನೈತಿಕ ಬೆಂಬಲ ಜೋಡಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ನ ಬೆಂಜಮಿನ್ ನೆತಾನ್ಯಹು ಅವರನ್ನು ಸಂಪರ್ಕಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಇಬ್ಬರೂ ಕೂಡ ಜಂಟಿ ನಿಲುವು ತಳೆದಿದ್ದಾರೆ.
ಗಾಜಾ ಯುದ್ಧ ಸಂಬಂಧ ವಿಶ್ವಸಂಸ್ಥೆ ಮಹಾ ಸಭೆಯಲ್ಲಿ ನಡೆದ ವೋಟಿಂಗ್ನಲ್ಲಿ ಭಾರತ ಗೈರಾಗುವ ಮೂಲಕ ಪರೋಕ್ಷವಾಗಿ ಇಸ್ರೇಲ್ಗೆ ಬೆಂಬಲ ನೀಡಿದೆ. ನರೇಂದ್ರ ಮೋದಿ ಮತ್ತು ಬೆಂಜಮಿನ್ ನೆತಾನ್ಯಹು ಮಧ್ಯೆಯೂ ವೈಯಕ್ತಿಕ ಸಂಬಂಧ ಮತ್ತು ಅರಿವು ಉತ್ತಮವಾಗಿದೆ. 2017ರಲ್ಲಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ನೀಡಿದ್ದರು. ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ಗೆ ಭೇಟಿ ನೀಡಿದ್ದು ಅದೇ ಮೊದಲು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ