ನವದೆಹಲಿ, ಜನವರಿ 25: ಸಾಮಾನ್ಯವಾಗಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಕಂಪನಿ ಟೈಯಪ್ ಆಗಿರುವ ಆಸ್ಪತ್ರೆಗಳ ಪಟ್ಟಿ ಇರುತ್ತದೆ. ಈ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ದಾಖಲಾದರೆ ಕ್ಯಾಷ್ಲೆಸ್ ಟ್ರೀಟ್ಮೆಂಟ್ ಸಿಗುತ್ತದೆ. ಬೇರೆ ಆಸ್ಪತ್ರೆಯಾದರೆ ವೆಚ್ಚವನ್ನೆಲ್ಲಾ ಸ್ವತಃ ಭರಿಸಿ ಬಳಿಕ ಬಿಲ್ ಹಾಗು ಇತರ ದಾಖಲೆಗಳನ್ನು ಸಲ್ಲಿಸಿ ಹಣ ಕ್ಲೈಮ್ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈಗ ಇನ್ಷೂರೆನ್ಸ್ ಕಂಪನಿಗೆ ಜೋಡಿತವಾಗಿಲ್ಲದ ಯಾವುದೇ ಆಸ್ಪತ್ರೆಯಲ್ಲೂ ಕ್ಯಾಷ್ಲೆಸ್ ಆಗಿ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶ ಇದೆ. ಇಂಥದ್ದೊಂದು ನಿಯಮ ರೂಪಿಸಲಾಗಿದೆ. ಜನರಲ್ ಇನ್ಷೂರೆನ್ಸ್ ಕೌನ್ಸಿಲ್ (GIC- General Insurance Council) ‘ಕ್ಯಾಷ್ಲೆಸ್ ಎವೆರಿವೇರ್’ (Cashless Everywhere) ಯೋಜನೆ ಅಡಿಯಲ್ಲಿ ಈ ಹೊಸ ನಿಯಮ ಮಾಡಿದೆ. ಇಂದಿನಿಂದಲೇ (ಜ. 25) ಈ ನಿಯಮ ಜಾರಿಗೆ ಬರಲಿದೆ.
ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಸಂಸ್ಥೆ ದೇಶದ ಎಲ್ಲಾ ಜನರಲ್ ಮತ್ತು ಹೆಲ್ತ್ ಇನ್ಷೂರೆನ್ಸ್ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕ್ಯಾಷ್ಲೆಸ್ ಎವೆರಿವೇರ್ ಅಭಿಯಾನ ಆರಂಭಿಸಿದೆ.
ಈ ಯೋಜನೆ ಅಡಿಯಲ್ಲಿ ಪಾಲಿಸಿದಾರ ಇಚ್ಛಿಸಿದ ಯಾವುದೇ ಆಸ್ಪತ್ರೆಗೆ ಹೋಗಿ ದಾಖಲಾಗಿ ಕ್ಯಾಷ್ಲೆಸ್ ಆಗಿ ಚಿಕಿತ್ಸೆ ಪಡೆಯಬಹುದು. ಆದರೆ, ಕೆಲವಿಷ್ಟು ಕಂಡೀಷನ್ಗಳಿವೆ:
ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?
ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಅಥವಾ ಎಲೆಕ್ಟಿವ್ ಪ್ರೊಸೀಜರ್ಗಳಿಗೆ ಒಳಪಡಬೇಕಿದ್ದಲ್ಲಿ, ದಾಖಲಾತಿಗೆ 48 ಗಂಟೆ ಮುಂಚೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು.
ತುರ್ತು ಚಿಕಿತ್ಸೆ ಪಡೆಯಬೇಕಿದ್ದಾಗ ಆಸ್ಪತ್ರೆಗೆ ದಾಖಲಾಗಿ 48 ದಿನದ ಒಳಗೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು.
ಚಿಕಿತ್ಸೆಯ ವೆಚ್ಚದಲ್ಲಿ ಎಷ್ಟು ಭಾಗ ಕ್ಯಾಷ್ಲೆಸ್ ಆಗಿರುತ್ತದೆ ಅಥವಾ ಇನ್ಷೂರೆನ್ಸ್ ಕಂಪನಿ ಎಷ್ಟು ಭರಿಸುತ್ತದೆ ಎಂಬುದು ಪಾಲಿಸಿಯ ನಿಯಮ ಮತ್ತು ನಿಬಂಧನೆಗಳು ಹಾಗೂ ಚಿಕಿತ್ಸೆಯ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
ಹೆಚ್ಚಿನ ಸಂದರ್ಭದಲ್ಲಿ ಆಸ್ಪತ್ರೆಯ ನೊಂದಣಿ ಹಣವನ್ನು ರೋಗಿಗಳು ತಮ್ಮ ಕೈಯಿಂದಲೇ ಕಟ್ಟಬೇಕು. ಶಸ್ತ್ರ ಚಿಕಿತ್ಸೆಗೆ ಉಪಯೋಗಿಸುವ ಕೆಲ ಉಪಕರಣಗಳು ಇನ್ಷೂರೆನ್ಸ್ ವ್ಯಾಪ್ತಿಗೆ ಬರುವುದಿಲ್ಲ. ಹೆಚ್ಚಿನ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಶೇ. 90ಕ್ಕೂ ಹೆಚ್ಚಿನ ವೆಚ್ಚ ಕವರ್ ಆಗುತ್ತದೆ.
ಎಲ್ಲಾ ಆಸ್ಪತ್ರೆಗಳಲ್ಲೂ ಕ್ಯಾಷ್ಲೆಸ್ ಚಿಕಿತ್ಸೆ ಇರುವುದಿಲ್ಲ. ಈ ಆಸ್ಪತ್ರೆಗಳಿಗೆ ಜನರಲ್ ಇನ್ಷೂರೆನ್ಸ್ ಕೌನ್ಸಿಲ್ನ ಕ್ಯಾಷ್ಲೆಸ್ ಎವರಿವೇರ್ ಯೋಜನೆಯ ನಿಯಮ ಅನ್ವಯ ಆಗುವುದಿಲ್ಲ. ನೀವು ಇನ್ಷೂರೆನ್ಸ್ ಹೊಂದಿದ್ದರೂ ಈ ಆಸ್ಪತ್ರೆಗಳಲ್ಲಿ ದಾಖಲಾದರೆ ನೀವೇ ವೆಚ್ಚ ಭರಿಸಬೇಕು. ಡಿಸ್ಚಾರ್ಜ್ ಆಗಿ ನಿರ್ದಿಷ್ಟ ದಿನದೊಳಗೆ ಬಿಲ್ ಮತ್ತು ದಾಖಲೆಗಳನ್ನು ಸಂಬಂಧಿತ ಇನ್ಷೂರೆನ್ಸ್ ಪ್ರೋಸಸಿಂಗ್ ಏಜೆನ್ಸಿಗೆ ಕಳುಹಿಸಿಕೊಡಬೇಕು. ಆಗ ಇನ್ಷೂರೆನ್ಸ್ ಕಂಪನಿ ನಿಮಗೆ ರೀ ಇಂಬುರ್ಸ್ಮೆಂಟ್ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ