Azim Premji: ಮಹಾದಾನಿ ಅಜೀಮ್ ಪ್ರೇಮ್​ಜಿ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳ ದಾನ

|

Updated on: Jan 25, 2024 | 2:56 PM

Share Gift to Sons: ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಪ್ರೇಮ್​ಜಿ ತಮ್ಮ ಇಬ್ಬರು ಮಕ್ಕಳಿಗೆ ಒಟ್ಟು 480 ಕೋಟಿ ರೂಗೂ ಹೆಚ್ಚು ಮೌಲ್ಯದ 1 ಕೋಟಿ ಷೇರುಗಳನ್ನು ದಾನ ಮಾಡಿದ್ದಾರೆ. ರಿಷದ್ ಪ್ರೇಮ್​ಜಿ ಮತ್ತು ತಾರಿಖ್ ಪ್ರೇಮ್​ಜಿ ಅವರಿಗೆ ತಲಾ 51,15,090 ಈಕ್ವಿಟಿ ಷೇರುಗಳನ್ನು ವರ್ಗಾಯಿಸಿದ್ದಾರೆ. 1966ರಲ್ಲಿ ವಿಪ್ರೋದ ಆಡಳಿತ ಚುಕ್ಕಾಣಿ ಹಿಡಿದ ಅಜೀಮ್ ಪ್ರೇಮ್​ಜಿ ಹುಟ್ಟಿದ್ದು ಮುಂಬೈಯಲ್ಲಾದರೂ ಅವರದ್ದು ಗುಜರಾತ್ ಮೂಲದ ಮುಸ್ಲಿಮ್ ಕುಟುಂಬದ ಮೂಲ.

Azim Premji: ಮಹಾದಾನಿ ಅಜೀಮ್ ಪ್ರೇಮ್​ಜಿ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳ ದಾನ
ಅಜೀಮ್ ಹಶೀಮ್ ಪ್ರೇಮ್​ಜಿ
Follow us on

ನವದೆಹಲಿ, ಜನವರಿ 25: ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಎಚ್ ಪ್ರೇಮ್​ಜಿ (Azim Premji) ಭಾರತದ ಅತಿದೊಡ್ಡ ದಾನವಂತರಲ್ಲಿ ಒಬ್ಬರು. ತಮ್ಮ ಸಂಪಾದನೆಯ ಬಹುಭಾಗವನ್ನು ಅವರು ಸಾಮಾಜಿಕ ಕಾರ್ಯಗಳಿಗೆ (philanthropy) ವಿನಿಯೋಗಿಸುತ್ತಾರೆ. ಇದೀಗ ಅವರು ತಮ್ಮ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನವಾಗಿ ವರ್ಗಾಯಿಸಿದ್ದಾರೆ. ಎನ್​ಎಸ್​ಇ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ವಿಪ್ರೋ ಈ ಮಾಹಿತಿ ನೀಡಿದೆ. ಅದರ ಪ್ರಕಾರ ಅಜೀಮ್ ಪ್ರೇಮ್​ಜಿ ತಮಗೆ ಸೇರಿದ ಷೇರುಪಾಲಿನ ಪೈಕಿ 1,02,30,180 (ಸುಮಾರು 1 ಕೋಟಿ) ಷೇರುಗಳನ್ನು ತಮ್ಮಿಬ್ಬರು ಮಕ್ಕಳಾದ ರಿಷದ್ ಪ್ರೇಮ್​ಜಿ ಮತ್ತು ತಾರಿಖ್ ಪ್ರೇಮ್​ಜಿ ಅವರಿಗೆ ದಾನವಾಗಿ ನೀಡಿದ್ದಾರೆ.

ಅಜೀಮ್ ಪ್ರೇಮ್​ಜಿ ತಮ್ಮ ಇಬ್ಬರೂ ಮಕ್ಕಳಿಗೆ ಸಮಾನವಾಗಿ, ಅಂದರೆ ತಲಾ 51,15,090 ಈಕ್ವಿಟಿ ಷೇರುಗಳನ್ನು ನೀಡಿದ್ದಾರೆ. ಸದ್ಯ ಒಂದು ಷೇರಿನ ಮೌಲ್ಯ 468 ರೂನಿಂದ 479 ರೂವರೆಗೆ ಹೊಯ್ದಾಡುತ್ತಿದೆ. ಒಟ್ಟು ಮೌಲ್ಯ 480 ಕೋಟಿ ರೂ ಆಸುಪಾಸು ಇದೆ.

ಒಂದು ಕೋಟಿ ಷೇರು ಒಟ್ಟಾರೆ ವಿಪ್ರೋ ಷೇರಿನ ಶೇ. 0.20ರಷ್ಟಾಗುತ್ತದೆ. ವಿಪ್ರೋದ ಶೇ. 72ಕ್ಕಿಂತಲೂ ಹೆಚ್ಚು ಷೇರುಪಾಲನ್ನು ಅಜೀಮ್ ಪ್ರೇಮ್​ಜಿ ಹೊಂದಿದ್ದಾರೆ. ಮಕ್ಕಳಿಗೆ 1 ಕೋಟಿ ಷೇರುಗಳನ್ನು ವರ್ಗಾಯಿಸಿದರೂ ಅವರ ಷೇರುಪಾಲು ಶೇ. 70ಕ್ಕಿಂತಲೂ ಹೆಚ್ಚೇ ಇದೆ. ಹಾಗೆಯೇ, ವಿಪ್ರೋದಲ್ಲಿ ಪ್ರೇಮ್​ಜಿ ಕುಟುಂಬದ ಪಾಲಿನಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.

ಇದನ್ನೂ ಓದಿ: Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?

ಅಜೀಮ್ ಪ್ರೇಮ್​ಜಿ ಅವರ ಹಿರಿಯ ಮಗ ರಿಷದ್ ಪ್ರೇಮ್​ಜಿ ಇತ್ತೀಚೆಗಷ್ಟೇ ವಿಪ್ರೋ ಛೇರ್ಮನ್ ಆಗಿ ನೇಮಕವಾಗಿದ್ದಾರೆ. ಕಿರಿಯ ಮಗ ತಾರಿಕ್ ಪ್ರೇಮ್​ಜಿ ಅವರು ವಿಪ್ರೋದ ದಾನದತ್ತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಪಾಕಿಸ್ತಾನಕ್ಕೆ ಹೋಗಲು ಒಲ್ಲೆ ಎಂದಿದ್ದ ಅಜೀಮ್ ಪ್ರೇಮ್​ಜಿ ತಂದೆ

ಅಜೀಮ್ ಹಶೀಮ್ ಪ್ರೇಮ್​ಜಿ ಅವರು ಗುಜರಾತ್ ಮೂಲದ ಶಿಯಾ ಮುಸ್ಲಿಮ್ ಕುಟುಂಬದ ಮೂಲದಿಂದ ಬಂದವರು. ಹುಟ್ಟಿದ್ದು ಬಾಂಬೆಯಲ್ಲಿ. ಅವರ ತಂದೆ ಮೊಹಮ್ಮದ್ ಹಶೀಮ್ ಪ್ರೇಮ್​ಜಿ ಸ್ವಾತಂತ್ರ್ಯಪೂರ್ವದಲ್ಲಿ ಪ್ರಖ್ಯಾತ ಉದ್ಯಮಿಯಾಗಿದ್ದರು. ದೇಶದ ವಿಭಜನೆ ಆಗುವಾಗ ಜಿನ್ನಾ ಅವರು ಮೊಹಮ್ಮದ್ ಪ್ರೇಮ್​ಜಿ ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದ್ದರಂತೆ. ಆದರೆ, ಪ್ರೇಮ್​ಜಿ ಈ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದರು.

ಇದನ್ನೂ ಓದಿ: ಬಜೆಟ್ ಪೂರ್ವ ಹಲ್ವಾ ಸಮಾರಂಭ; ಸಿಹಿ ಹಂಚಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬರ್ಮಾದ ರೈಸ್ ಕಿಂಗ್ ಎಂದೇ ಖ್ಯಾತರಾಗಿದ್ದ ಮೊಹಮ್ಮದ್ ಪ್ರೇಮ್​ಜಿ ಮೊದಲಿಗೆ ವೆಸ್ಟರ್ನ್ ಇಂಡಿಯಾ ವೆಜಿಟಬಲ್ ಪ್ರಾಡಕ್ಟ್ಸ್ ಎಂಬ ಸಂಸ್ಥೆ ಸ್ಥಾಪಿಸಿ ಅಡುಗೆ ಎಣ್ಣೆ, ಲಾಂಡ್ರಿ ಸೋಪ್ ಅನ್ನು ತಯಾರಿಸಿ ಮಾರುತ್ತಿದ್ದರು.

1966ರಲ್ಲಿ ಮೊಹಮ್ಮದ್ ನಿಧನರಾದಾಗ ಅವರ ಮಗ ಅಜೀಮ್ ಪ್ರೇಮ್​ಗೆ ವಯಸ್ಸು 21 ವರ್ಷ. ಅಮೆರಿಕದ ಸ್ಟಾನ್​ಫೋರ್ಡ್​ನಲ್ಲಿ ಓದುತ್ತಿದ್ದ ಅವರು ಕೂಡಲೇ ವಾಪಸ್ ಬಂದು ಅಪ್ಪನ ವ್ಯವಹಾರ ಮುಂದುವರಿಸಿದರು.

ಎಂಬತ್ತರ ದಶಕದಲ್ಲಿ ದೇಶದಲ್ಲಿ ಐಟಿ ಕ್ಷೇತ್ರ ಬೆಳವಣಿಗೆ ಆಗುತ್ತಿದ್ದುದನ್ನು ಕಂಡುಕೊಂಡ ಅವರು ಸೋಪು, ಎಣ್ಣಿ ತಯಾರಿಕೆಯಿಂದ ಸಾಫ್ಟ್​ವೇರ್​ ವ್ಯವಹಾರಕ್ಕೆ ಹೊರಳಿದರು. ಸಂಸ್ಥೆಯ ಹೆಸರು ವಿಪ್ರೋ ಎಂದು ಬದಲಾಯಿತು. ಮುಂಬೈನಿಂದ ಬೆಂಗಳೂರಿಗೆ ಅವರ ಸಂಸ್ಥೆಯ ಮುಖ್ಯಕಚೇರಿ ಬದಲಾಯಿತು. ಅವರ ಕಿರಿಯ ಮಗ ಓದಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ