ನ್ಯೂಯಾರ್ಕ್, ಜನವರಿ 25: ಮೈಕ್ರೋಸಾಫ್ಟ್ ಕಂಪನಿಯ ಷೇರುಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ಅದರ ಷೇರುಮೊತ್ತ ಅಥವಾ ಮಾರ್ಕೆಟ್ ಕ್ಯಾಪಿಟಲ್ (Market capitalization) ಮೊದಲ ಬಾರಿಗೆ ಮೂರು ಟ್ರಿಲಿಯನ್ ಡಾಲರ್ ಮೊತ್ತ ತಲುಪಿದೆ. ಜನವರಿ 24ರಂದು ಮೈಕ್ರೋಸಾಫ್ಟ್ ಷೇರುಬೆಲೆ ಶೇ. 1.31ರಷ್ಟು ಏರಿದ್ದು ಪ್ರತೀ ಷೇರಿಗೆ 404 ಡಾಲರ್ ತಲುಪಿದೆ. ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಗಡಿ ಮುಟ್ಟಿದ ಮೊದಲ ಕಂಪನಿ ಮೈಕ್ರೋಸಾಫ್ಟ್ ಆಗಿದೆ.
ಆ್ಯಪಲ್ ಸಂಸ್ಥೆ 2022ರ ಜನವರಿ ತಿಂಗಳಲ್ಲಿ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೊತ್ತ ತಲುಪಿತ್ತು. ಈಗಲೂ ಅದೇ ನಂಬರ್ ಒನ್ ಎನಿಸಿದೆ. ಆದರೆ, ಮೈಕ್ರೋಸಾಫ್ಟ್ ಎರಡನೇ ಸ್ಥಾನದಲ್ಲಿದ್ದರೂ ಆ್ಯಪಲ್ ಮತ್ತು ಅದರ ನಡುವಿನ ಅಂತರ ಬಹಳ ಕಿರಿದಾಗಿದೆ. ಆ್ಯಪಲ್ ಮಾರ್ಕೆಟ್ ಕ್ಯಾಪಿಟಲ್ 3.02 ಟ್ರಿಲಿಯನ್ ಡಾಲರ್ ಇದ್ದರೆ ಮೈಕ್ರೋಸಾಫ್ನದ್ದು 3.00 ಟ್ರಿಲಿಯನ್ ಡಾಲರ್ ಇದೆ.
ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಪೋಟಿಯಲ್ಲಿ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಸದಾ ಮುಂಚೂಣಿಯಲ್ಲಿವೆ. ಹೆಚ್ಚಿನ ಬಾರಿ ಆ್ಯಪಲ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಒಮ್ಮೆ ಆ್ಯಪಲ್ ಅನ್ನು ಹಿಂದಿಕ್ಕಿತ್ತು.
ಇದನ್ನೂ ಓದಿ: eBay Layoff: ಇಬೇ ಸಂಸ್ಥೆಯಿಂದ ಶೇ. 9ರಷ್ಟು ಉದ್ಯೋಗಿಗಳ ಲೇ ಆಫ್; ಗುತ್ತಿಗೆ ಆಧಾರಿತ ಉದ್ಯೋಗಿಗಳ ಕೆಲಸಕ್ಕೂ ಕತ್ತರಿ?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮೈಕ್ರೋಸಾಫ್ಟ್ ಬಹಳ ಹೆಚ್ಚು ಒತ್ತು ಕೊಡುತ್ತಿದೆ. ಓಪನ್ಎಐ ಸಂಸ್ಥೆ ಜೊತೆಗೆ ಮೈಕ್ರೋಸಾಫ್ಟ್ ಪ್ರಮುಖ ಪಾಲುದಾರಿಕೆ ಹೊಂದಿದೆ. ಚ್ಯಾಟ್ಜಿಪಿಟಿಗೆ ಮಾತ್ರ ಸೀಮಿತವಾಗದೇ ಹಲವು ಜನರೇಟಿವ್ ಎಐ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಅದರ ಬಿಂಗ್ ಸರ್ಚ್ ಎಂಜಿನ್, ಕೋಪೈಲಟ್ ವರ್ಚುವಲ್ ಅಸಿಸ್ಟೆಂಟ್ ಇತ್ಯಾದಿ ಅಪ್ಲಿಕೇಶನ್ಗಳಲ್ಲಿ ಜನರೇಟಿವ್ ಎಐ ಅನ್ನೂ ಅಳವಡಿಸಲಾಗಿದೆ. ಮೈಕ್ರೋಸಾಫ್ಟ್ ತನ್ನ ಆ್ಯಪ್ಗಳಲ್ಲಿ ಎಐ ಅನ್ನು ಅಳವಡಿಸುತ್ತಿರುವುದು ಅದರ ಮೇಲಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿರಬಹುದು.
ಚ್ಯಾಟ್ಜಿಪಿಟಿ ಶುರುವಾಗಿದ್ದು 2022ರ ನವೆಂಬರ್ ತಿಂಗಳಲ್ಲಿ. ಆಗಿಂದಲೇ ಮೈಕ್ರೋಸಾಫ್ಟ್ಗೆ ಶುಕ್ರ ದೆಸೆ ಶುರುವಾಗಿದೆ. ಅಲ್ಲಿಂದೀಚೆಗೆ ಅದರ ಷೇರುಬೆಲೆ ಶೇ. 67ರಷ್ಟು ಹೆಚ್ಚಿದೆ. ಅದೇ ವೇಳೆ ಆ್ಯಪಲ್ ಷೇರುಬೆಲೆ ಹೆಚ್ಚಿದ್ದು ಶೇ. 40 ಮಾತ್ರ.
ಇದನ್ನೂ ಓದಿ: Zee vs Sony: ಕೈಕೊಟ್ಟ ಸೋನಿ; ಕಂಪನಿ ಕಾನೂನು ನ್ಯಾಯಮಂಡಳಿ ಮೊರೆಹೋದ ಝೀ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ