AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳಸಿದ ಅಡುಗೆ ಎಣ್ಣೆಗೂ ಇದೆ ಒಳ್ಳೆಯ ಮೌಲ್ಯ; ಸುಸ್ಥಿತ ವಿಮಾನ ಇಂಧನವಾಗಿ ಬಳಕೆ; ಇಂಡಿಯನ್ ಆಯಿಲ್​ನಿಂದ ಮೊದಲ ಬ್ಯಾಚ್ ಶುರು

ಬಳಸಿದ ಅಡುಗೆ ಎಣ್ಣೆಯನ್ನು ಕಚ್ಚಾ ವಸ್ತುವಾಗಿ ಬಳಸಿ ಭಾರತದಲ್ಲಿ ಸುಸ್ಥಿರ ವಿಮಾನ ಇಂಧನದ (SAF) ಮೊದಲ ಬ್ಯಾಚ್ ಉತ್ಪಾದನೆಯಾಗಿದೆ. ಇಂಡಿಯನ್ ಆಯಿಲ್​ನ ಪಾನಿಪತ್ ಘಟಕದಲ್ಲಿ ಈ ಹಸಿರು ಇಂಧನದ ಉತ್ಪಾದನೆಯಾಗುತ್ತಿದೆ. ಇದು ವಾಯುಯಾನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎಸ್‌ಎಎಫ್ ಎಂದರೇನು, ಅದರ ಅನುಕೂಲ, ಅನಾನುಕೂಲಗಳೇನು ಎನ್ನುವ ವಿವರ ಇಲ್ಲಿದೆ.

ಬಳಸಿದ ಅಡುಗೆ ಎಣ್ಣೆಗೂ ಇದೆ ಒಳ್ಳೆಯ ಮೌಲ್ಯ; ಸುಸ್ಥಿತ ವಿಮಾನ ಇಂಧನವಾಗಿ ಬಳಕೆ; ಇಂಡಿಯನ್ ಆಯಿಲ್​ನಿಂದ ಮೊದಲ ಬ್ಯಾಚ್ ಶುರು
ವಿಮಾನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 20, 2026 | 3:15 PM

Share

ನವದೆಹಲಿ, ನವೆಂಬರ್ 20: ನೀವು ಫ್ರೈ ಮಾಡಲು ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಚೆಲ್ಲುವ ಅಗತ್ಯ ಇಲ್ಲ. ಈ ಎಣ್ಣೆಯು ಸುಸ್ಥಿರ ವಿಮಾನ ಇಂಧನವಾಗಿ (Sustainable Aviation Fuel — SAF) ಬಳಕೆ ಮಾಡಲು ಸಾಧ್ಯ. ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಯತ್ನಗಳಾಗುತ್ತಿವೆ. ಇದೇ ವೇಳೆ, ಭಾರತದಲ್ಲಿ ಈಗಾಗಲೇ ಇದರ ಕಮರ್ಷಿಯಲ್ ಉತ್ಪಾದನೆ ಆರಂಭವಾಗಿದೆ. ಇಂಡಿಯನ್ ಆಯಿಲ್​ನ ಪಾಣಿಪತ್ ರಿಫೈನರಿ ಘಟಕದಲ್ಲಿ ಎಸ್​ಎಎಫ್ ಇಂಧನದ ಮೊದಲ ಬ್ಯಾಚ್ ಅನ್ನು ತಯಾರಿಸಲಾಗಿದೆ. ಈ ಹಸಿರು ಜೆಟ್ ಇಂಧನವನ್ನು ಏರ್ ಇಂಡಿಯಾ ಸಂಸ್ಥೆಗೆ ಪೂರೈಸಲಿದೆ.

ಎಸ್​ಎಎಫ್ ಪೂರೈಕೆಗಾಗಿ ಇಂಡಿಯನ್ ಆಯಿಲ್ ಜೊತೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಇಂಡಿಯನ್ ಆಯಿಲ್​ನ ಪಾನಿಪತ್ ಘಟಕದಲ್ಲಿ ಒಂದು ವರ್ಷದಲ್ಲಿ 30,000 ಟನ್​ಗಳಷ್ಟು ಸುಸ್ಥಿರ ವಿಮಾನ ಇಂಧನ ತಯಾರಿಸುವ ಸಾಮರ್ಥ್ಯ ಇದೆ.

ಏನಿದು ಸುಸ್ಥಿರ ವಿಮಾನ ಇಂಧನ (SAF)?

ಸುಸ್ಥಿರ ವಿಮಾನ ಇಂಧನ (Sustainable Aviation Fuel — SAF) ಎಂಬುದು ಪಳೆಯುಳಿಕೆ ಕಚ್ಚಾ ತೈಲದ (Fossil fuel) ಬದಲಿಗೆ ನವೀಕರಿಸಬಹುದಾದ ಮತ್ತು ತ್ಯಾಜ್ಯ ಆಧಾರಿತ ಮೂಲಗಳಿಂದ ತಯಾರಿಸಲಾಗುವ ಪರಿಸರ ಸ್ನೇಹಿ ವಿಮಾನ ಇಂಧನವಾಗಿದೆ. ಬಳಸಿದ ಅಡುಗೆ ಎಣ್ಣೆ (Used Cooking Oil — UCO), ಕೃಷಿ ತ್ಯಾಜ್ಯಗಳು, ಬಯೋಮಾಸ್, ಪುರಸಭೆಯ ತ್ಯಾಜ್ಯಗಳು ಮತ್ತು ಇಂಗಾಲ ಸೆರೆಹಿಡಿಯುವ ತಂತ್ರಜ್ಞಾನಗಳ ಮೂಲಕ ಇದನ್ನು ಉತ್ಪಾದಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್​ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್​ಗಳು

ಇದರ ಪ್ರಮುಖ ವಿಶೇಷವೆಂದರೆ, ಇದು ‘ಡ್ರಾಪ್-ಇನ್’ (Drop-in) ಇಂಧನವಾಗಿದೆ. ಅಂದರೆ, ಪ್ರಸ್ತುತ ಬಳಕೆಯಲ್ಲಿರುವ ವಿಮಾನಗಳ ಎಂಜಿನ್‌ಗಳಲ್ಲಿ ಅಥವಾ ವಿಮಾನ ನಿಲ್ದಾಣಗಳ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡದೆಯೇ, ಸಾಂಪ್ರದಾಯಿಕ ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ಜೊತೆ ಬೆರೆಸಿ ಇದನ್ನು ಬಳಸಬಹುದು. ಭಾರತದಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ ಎಸ್‌ಎಎಫ್ ಉತ್ಪಾದನೆಯಾಗಿರುವುದು, ತ್ಯಾಜ್ಯ ಎಣ್ಣೆಯ ಅಕ್ರಮ ಮರುಬಳಕೆಯನ್ನು ತಡೆಗಟ್ಟಿ ಅದನ್ನು ಹಸಿರು ಇಂಧನವನ್ನಾಗಿ ಪರಿವರ್ತಿಸುವ ದಿಸೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಎಸ್​ಎಎಫ್​ನ ಅನುಕೂಲಗಳು

  • ಇಂಗಾಲದ ಹೊರಸೂಸುವಿಕೆ ಕಡಿತ: ಜೀವಿತಾವಧಿಯ ಆಧಾರದಲ್ಲಿ ಸಾಂಪ್ರದಾಯಿಕ ವಿಮಾನ ಇಂಧನಕ್ಕೆ ಹೋಲಿಸಿದರೆ ಎಸ್‌ಎಎಫ್ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ (ಹಲವು ಮಾರ್ಗಗಳಲ್ಲಿ ಶೇ. 50ರಿಂದ ಶೇ. 80ರವರೆಗೆ) ಕಡಿಮೆ ಮಾಡಬಲ್ಲದು.
  • ಎಣ್ಣೆ ದುರ್ಬಳಕೆ ನಿಯಂತ್ರಣ: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳಿಂದ ಹೊರಬರುವ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಸಂಸ್ಕರಿಸುವುದರಿಂದ ಆರೋಗ್ಯಕ್ಕೆ ಹಾನಿಕರವಾದ ತ್ಯಾಜ್ಯ ಎಣ್ಣೆಯ ದುರ್ಬಳಕೆ ತಪ್ಪುತ್ತದೆ ಮತ್ತು ವೃತ್ತಾಕಾರದ ಆರ್ಥಿಕತೆಗೆ (Circular Economy) ಬಲ ಸಿಗುತ್ತದೆ.
  • ಇಂಧನ ಭದ್ರತೆ ಮತ್ತು ಆಮದು ಅವಲಂಬನೆ ಇಳಿಕೆ: ಕಚ್ಚಾ ತೈಲದ ಆಮದನ್ನು ಹೆಚ್ಚಾಗಿ ಅವಲಂಬಿಸಿರುವ ಭಾರತಕ್ಕೆ, ದೇಶೀಯ ತ್ಯಾಜ್ಯ ಮತ್ತು ಕೃಷಿ ಮೂಲಗಳಿಂದ ಇಂಧನ ಉತ್ಪಾದಿಸುವುದು ದೀರ್ಘಕಾಲದಲ್ಲಿ ಇಂಧನ ಭದ್ರತೆಗೆ ಪೂರಕವಾಗಬಹುದು.

ಇದನ್ನೂ ಓದಿ: ಇಪಿಎಫ್ ನಿಯಮ ಇನ್ನಷ್ಟು ಸರಳ; ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ಗೆ ಅನುಮೋದನೆ; 55 ವರ್ಷ ನಿರ್ಬಂಧ, ನಿರುದ್ಯೋಗ ನಿಯಮ ಸಡಿಲ

ಸುಸ್ಥಿರ ಇಂಧನದ ಅನಾನುಕೂಲಗಳು

  • ಹೆಚ್ಚಿನ ಉತ್ಪಾದನಾ ವೆಚ್ಚ: ಸಾಂಪ್ರದಾಯಿಕ ವಿಮಾನ ಇಂಧನಕ್ಕೆ ಹೋಲಿಸಿದರೆ ಎಸ್‌ಎಎಫ್ ಉತ್ಪಾದನಾ ವೆಚ್ಚ ಇಂದಿಗೂ ಹಲವು ಪಟ್ಟು ಹೆಚ್ಚಾಗಿದೆ. ಇದರಿಂದ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚ ಮತ್ತು ಟಿಕೆಟ್ ದರಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ.
  • ಕಚ್ಚಾ ವಸ್ತುವಿನ ಪೂರೈಕೆ ಸವಾಲು: ಬಳಸಿದ ಅಡುಗೆ ಎಣ್ಣೆಯ ಲಭ್ಯತೆಯು ಸೀಮಿತವಾಗಿದೆ ಮತ್ತು ದೇಶಾದ್ಯಂತ ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಜಾಲ ಇನ್ನೂ ವಿಸ್ತರಿಸಬೇಕಿದೆ. ಕಚ್ಚಾ ವಸ್ತುವಿನ ಕೊರತೆಯಾದರೆ ಇತರೆ ತ್ಯಾಜ್ಯ ಅಥವಾ ಕೃಷಿ ತ್ಯಾಜ್ಯಗಳ ಮೇಲೆ ಆಹಾರ ಬೆಳೆಗಳ ಜಮೀನು ಒತ್ತಡ ಬೀಳದಂತೆ ನೋಡಿಕೊಳ್ಳುವುದು ಅಗತ್ಯ.
  • ಮೂಲಸೌಕರ್ಯ ಮತ್ತು ಮಾನದಂಡಗಳು: ದೊಡ್ಡ ಪ್ರಮಾಣದ ವಾಣಿಜ್ಯ ಉತ್ಪಾದನಾ ಘಟಕಗಳು, ಪೂರೈಕೆ ಸರಪಳಿ ಮತ್ತು ಪ್ರಮಾಣೀಕರಣ ವ್ಯವಸ್ಥೆಗಳು ಇನ್ನಷ್ಟು ವೇಗವಾಗಿ ಬೆಳೆಯಬೇಕಿದೆ.

ರೆಗ್ಯುಲರ್ ಇಂಧನಕ್ಕೆ ಎಷ್ಟು ಬೆರಕೆ ಮಾಡಬಹುದು?

ಭಾರತದಲ್ಲಿ ಪ್ರಸ್ತುತ ರೆಗ್ಯುಲರ್ ಜೆಟ್ ಫುಯೆಲ್ ಅಥವಾ ಏವಿಯೇಶನ್ ಟರ್ಬೈನ್ ಫುಯೆಲ್​ಗೆ ಶೇ. 1ರಷ್ಟು ಅಡುಗೆ ಎಣ್ಣೆ ಅಥವಾ ಇತರ ತ್ಯಾಜ್ಯ ಎಣ್ಣೆಯನ್ನು ಮಿಶ್ರಣ ಮಾಡಲು ಗುರಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಎಸ್​ಎಎಫ್​ನ ಉತ್ಪಾದನೆ ಹೆಚ್ಚಾದಂತೆ ಹೆಚ್ಚು ಬ್ಲೆಂಡಿಂಗ್ ಟಾರ್ಗೆಟ್ ಇಡಬಹುದು. ತಜ್ಞರ ಪ್ರಕಾರ, ಎಟಿಎಫ್​ಗೆ ಶೇ. 50ರಷ್ಟು ಬ್ಲೆಂಡಿಂಗ್ ಮಾಡಬಹುದು.

ಸದ್ಯ, ಸುಸ್ಥಿರ ವಿಮಾನ ಇಂಧನ ತಯಾರಿಕೆಗೆ ಆಗುವ ವೆಚ್ಚವು ರೆಗ್ಯುಲರ್ ಇಂಧನಕ್ಕಿಂತ ಎರಡು ಮೂರು ಪಟ್ಟು ಹೆಚ್ಚು. ಇದರ ಉತ್ಪಾದನೆ ಪ್ರಮಾಣ ಹೆಚ್ಚಿದಂತೆ ವೆಚ್ಚ ಕಡಿಮೆಗೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ