Zee vs Sony: ಕೈಕೊಟ್ಟ ಸೋನಿ; ಕಂಪನಿ ಕಾನೂನು ನ್ಯಾಯಮಂಡಳಿ ಮೊರೆಹೋದ ಝೀ

ZEEL Moves to NCLT Against Sony: ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ವಿರುದ್ಧ ಝೀ ಸಂಸ್ಥೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಬಳಿ ಅರ್ಜಿ ಸಲ್ಲಿಸಿದೆ. ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೋನಿ ಮತ್ತು ಬಿಇಪಿಎಲ್​ಗೆ ನಿರ್ದೇಶನ ನೀಡಬೇಕೆಂದು ಝೀ ಮನವಿ ಮಾಡಿದೆ. ಸೋನಿ ಪಿಕ್ಚರ್ಸ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಝೀ ಜೊತೆ ವಿಲೀನಗೊಳ್ಳಲು 10 ಬಿಲಿಯನ್ ಡಾಲರ್ ಒಪ್ಪಂದವಾಗಿತ್ತು.

Zee vs Sony: ಕೈಕೊಟ್ಟ ಸೋನಿ; ಕಂಪನಿ ಕಾನೂನು ನ್ಯಾಯಮಂಡಳಿ ಮೊರೆಹೋದ ಝೀ
ಸೋನಿ, ಝೀ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 24, 2024 | 6:44 PM

ಮುಂಬೈ, ಜನವರಿ 24: ವಿಲೀನ ಒಪ್ಪಂದದಿಂದ ಹೊರ ನಡೆದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ (Sony Pictures Network India) ಸಂಸ್ಥೆ ವಿರುದ್ಧ ಝೀ ಎಂಟರ್ಟೈನ್ಮೆಂಟ್ (ZEEL- Zee Entertainment Enterprises Ltd) ಕೋರ್ಟ್ ಬಾಗಿಲು ತಟ್ಟಿದೆ. ವರದಿ ಪ್ರಕಾರ, ಝೀ ಸಂಸ್ಥೆ ಮುಂಬೈ ಬೆಂಚ್​ನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National company law tribunal) ಬಳಿ ಸೋನಿ ವಿರುದ್ಧ ಅರ್ಜಿ ಹಾಕಿದ್ದು, ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ. ವರದಿ ಪ್ರಕಾರ ಝೀ ಸಂಸ್ಥೆ ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಕೋರ್ಟ್​ನ (SIAC- Singapore International arbitration court) ಮೆಟ್ಟಿಲನ್ನೂ ಹತ್ತಿರುವುದು ತಿಳಿದುಬಂದಿದೆ.

10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವಾಗಿತ್ತು…

ಸೋನಿ ಸಂಸ್ಥೆಯ ಭಾರತೀಯ ವಿಭಾಗವಾದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾವನ್ನು ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಒಪ್ಪಂದ ಇದಾಗಿದೆ. 10 ಬಿಲಿಯನ್ ಡಾಲರ್ ಮೌಲ್ಯದ ಈ ವಿಲೀನ ಒಪ್ಪಂದಕ್ಕೆ 2021ರ ಡಿಸೆಂಬರ್ 22ರಂದು ಸಹಿ ಹಾಕಲಾಗಿತ್ತು. ಎರಡು ವರ್ಷದೊಳಗೆ ಎಲ್ಲಾ ಷರತ್ತುಗಳನ್ನು ಈಡೇರಿಸಿ ಒಪ್ಪಂದವನ್ನು ಅಂತಿಮಗೊಳಿಸಬೇಕೆಂದು ಹೇಳಲಾಗಿತ್ತು. ಆ ಡೆಡ್​ಲೈನ್ ಡಿಸೆಂಬರ್ 21ಕ್ಕೆ ಮುಗಿದುಹೋಗಿ ಹೆಚ್ಚುವರಿ ಅವಧಿ ಅಥವಾ ಗ್ರೇಸ್ ಪೀರಿಯಡ್ ಕೂಡ ಮುಗಿದಿತ್ತು. ಅದರ ಬೆನ್ನಲ್ಲೇ ಸೋನಿ ಸಂಸ್ಥೆ ಈ ವಿಲೀನ ಒಪ್ಪಂದದಿಂದ ಹೊರಬರುವುದಾಗಿ ಘೋಷಿಸಿತು.

ಇದನ್ನೂ ಓದಿ: FPI: ಭಾರತದ ಷೇರುಪೇಟೆಯಿಂದ ಎಫ್​ಪಿಐ ಹೊರಬೀಳುತ್ತಿರುವುದೇಕೆ? ಶೆಲ್ ಕಂಪನಿಗಳನ್ನು ದೂರವಿಡಲು ಸೆಬಿ ಮಾಡಿದ ನಿಯಮ ಕಾರಣವಾ?

ಪುನೀತ್ ಗೋಯಂಕಾ ವಿಚಾರದ ಬಿಕ್ಕಟ್ಟು

ಅವ್ಯವಹಾರ ಪ್ರಕರಣವೊಂದರಲ್ಲಿ ಝೀ ಎಂಡಿ ಮತ್ತು ಸಿಇಒ ಪುನೀತ್ ಗೋಯಂಕಾ ಹೆಸರು ತಳಕುಹಾಕಿಕೊಂಡಿದ್ದು, ನ್ಯಾಯಾಲಯದಲ್ಲಿ ಇನ್ನೂ ಬಗೆಹರಿದಿಲ್ಲ. ಈ ಕಳಂಕ ಇರುವ ಪುನೀತ್ ಗೋಯಂಕಾ ಅವರು ವಿಲೀನಗೊಂಡ ಸಂಸ್ಥೆಯ ಸಿಇಒ ಆಗಬಾರದು ಎನ್ನುವುದು ಸೋನಿ ಪಿಕ್ಚರ್ಸ್ ಹಿಡಿದಿದ್ದ ಪಟ್ಟು. ಇದಕ್ಕೆ ಝೀ ಒಪ್ಪಿಲ್ಲ ಎನ್ನಲಾಗಿದೆ. ಈ ವಿಚಾರವಾಗಿಯೇ ಸೋನಿ ಸಂಸ್ಥೆ ಝೀ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿರಬಹುದು ಎಂದು ಹೇಳಲಾಗಿದೆ.

ಸೋನಿ ಸಂಸ್ಥೆ ಒಪ್ಪಂದದಿಂದ ಹೊರಬಂದ ಬಳಿಕ ಝೀಗೆ 90 ಮಿಲಿಯನ್ ಡಾಲರ್ ಮೊತ್ತದ ಟರ್ಮಿನೇಶನ್ ಶುಲ್ಕವನ್ನು ಕೇಳಿ ನೋಟೀಸ್ ಕೊಟ್ಟಿದೆ. ವಿಲೀನಕ್ಕೆ ಇರಿಸಲಾಗಿದ್ದ ಷರತ್ತುಗಳಿಗೆ ಝೀ ಬದ್ಧವಾಗಿರಲಿಲ್ಲ. ಹೀಗಾಗಿ ಒಪ್ಪಂದ ಮುರಿದುಬೀಳಲು ಝೀ ಕಾರಣ ಎಂಬುದು ಸೋನಿ ಆರೋಪ.

ಇದನ್ನೂ ಓದಿ: Gold: ಶೇ. 15ರಷ್ಟು ಚಿನ್ನ; ಷೇರುಮಾರುಕಟ್ಟೆ ದಿಗ್ಗಜ ಕಾಮತ್ ಫ್ಯಾಮಿಲಿಯ ಹೂಡಿಕೆ ಆದ್ಯತೆ ಯಾವುದು ನೋಡಿ

ಸೋನಿ ಸಂಸ್ಥೆಯ ಈ ಆರೋಪವನ್ನು ಆಧಾರರಹಿತ ಎಂದು ಝೀ ಹೇಳಿದೆ. ಕಲ್ವರ್ ಮ್ಯಾಕ್ಸ್ ಮತ್ತು ಬಿಇಪಿಎಲ್ ಸಂಸ್ಥೆಗಳು ಕೂಡಲೇ ಟರ್ಮಿನೇಶನ್ ನೋಟೀಸ್ ಹಿಂಪಡೆದು ವಿಲೀನ ಪ್ರಕ್ರಿಯೆ ಜಾರಿಯಾಗಲು ಅನುವಾಗಲಿ’ ಎಂದು ಝೀ ಸಂಸ್ಥೆ ಎನ್​ಸಿಎಲ್​ಟಿ ಬಳಿ ಸಲ್ಲಿಸಿದ ಅರ್ಜಿಯಲ್ಲಿ ಕೇಳಿದೆ.

ಇಲ್ಲಿ ಕಲ್ವರ್ ಮ್ಯಾಕ್ಸ್ ಎಂಬುದು ಸೋನಿ ಪಿಕ್ಚರ್ಸ್ ನೆಟ್ವರ್ಕ್ ಲಿ ಸಂಸ್ಥೆಯ ಇನ್ನೊಂದು ಹೆಸರು. ಹಾಗೆಯೇ, ಬಿಇಪಿಎಲ್ ಎಂಬುದು ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈ ಲಿ. ಇದೂ ಕೂಡ ಸೋನಿ ಪಿಕ್ಚರ್ಸ್ ಜೊತೆ ಸೇರಿ ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಜೊತೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ